ಗ್ರಾಹಕಸ್ನೇಹಿ ಕ್ರಮ: ಖಾದ್ಯ ತೈಲ ಬೆಲೆ ಇಳಿಸಲು ಕೇಂದ್ರ ಸರ್ಕಾರ ಸೂಚನೆ

Edible Oil
Published on

ಜಾಗತಿಕ ದರ ಇಳಿಕೆಗೆ ಅನುಗುಣವಾಗಿ ದೇಶದಲ್ಲಿ ಖಾದ್ಯ ತೈಲ ಬೆಲೆಯನ್ನು ತಗ್ಗಿಸುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಸೂಚಿಸಿರುವುದು ಹಾಗೂ ಇದನ್ನು ಅಡುಗೆ ಎಣ್ಣೆ ಉತ್ಪಾದಕರ ಸಂಘಟನೆ (ಎಸ್​ಇಎ) ಅನುಮೋದಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಈ ಮೂಲಕ ಮಾರುಕಟ್ಟೆಯಲ್ಲಿ ಅಡುಗೆ ತೈಲದ ಬೆಲೆ ಇಳಿಕೆ ನಿಶ್ಚಿತವಾಗಿದ್ದು, ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಗೃಹಿಣಿಯರಿಗೆ ತುಸು ಸಂತಸ ತರುವ ಸಂಗತಿಯಾಗಿದೆ. ಒಂದೆರಡು ಕಂಪನಿಗಳು ಈಗಾಗಲೇ ಬೆಲೆ ಇಳಿಕೆ ಘೋಷಿಸಿವೆ.

ಭಾರತವು ವ್ಯಾಪಕವಾಗಿ ತೈಲ ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರವಾಗಿದೆ. ಭಾರತದಲ್ಲಿ ಒಟ್ಟಾರೆಯಾಗಿ ಬಳಸಲಾಗುವ ಖಾದ್ಯ ತೈಲದ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಪ್ರಮಾಣ ಆಮದು ಅವಲಂಬಿತ. ಭಾರತವು ಸಾಮಾನ್ಯವಾಗಿ ಮಲೇಷ್ಯಾ ಮತ್ತು ಇಂಡೋನೇಷ್ಯಾಗಳಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತದೆ. ಅರ್ಜೆಂಟಿನಾ ಮತ್ತು ಬ್ರೆಜಿಲ್​ನಿಂದ ಸೋಯಾಬಿನ್ ಎಣ್ಣೆ ಖರೀದಿ ಮಾಡುತ್ತದೆ. ಕಳೆದೆರಡು ತಿಂಗಳುಗಳಲ್ಲಿ ವಿವಿಧ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಪ್ರತಿ ಟನ್​ಗೆ 200-250 ಡಾಲರ್​ನಷ್ಟು (16,356 ರಿಂದ 20,445 ರೂಪಾಯಿ) ಕಡಿಮೆಯಾಗಿದೆ. ಆದರೆ, ದೇಶದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಈ ದರ ಇಳಿಕೆ ಪ್ರತಿಫಲಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಜಾಗತಿಕ ದರ ಇಳಿಕೆಗೆ ಅನುಗುಣವಾಗಿ ಲೆಕ್ಕಹಾಕಿದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆ ಪ್ರತಿ ಲೀಟರ್​ಗೆ 15ರಿಂದ 20 ರೂಪಾಯಿ ಇಳಿಕೆಯಾಗುವ ನಿರೀಕ್ಷೆ ಇದೆ. 2021-22 ಮಾರ್ಕೆಟಿಂಗ್ ವರ್ಷದಲ್ಲಿ (ನವೆಂಬರ್​ನಿಂದ ಅಕ್ಟೋಬರ್​ವರೆಗಿನ ವರ್ಷ) ಭಾರತದ ಖಾದ್ಯ ತೈಲ ಆಮದು ಪಾವತಿ ಮೊತ್ತವು 1.57 ಲಕ್ಷ ಕೋಟಿ ರೂಪಾಯಿಗೆ ತಲುಪಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 6.85 ಪ್ರಮಾಣದಷ್ಟು ತೈಲವನ್ನು ಹೆಚ್ಚಾಗಿ ಖರೀದಿಸಲಾಗಿತ್ತು. ಆದರೆ, ಇದಕ್ಕೆ ಪಾವತಿಸಿದ ಮೊತ್ತವು ಶೇಕಡಾ 34ರಷ್ಟು ಹೆಚ್ಚಳವಾಗಿತ್ತು. ಇದು ಹೆಚ್ಚಿನ ಬೆಲೆ ನೀಡಿ ಖಾದ್ಯ ತೈಲ ಖರೀದಿ ಮಾಡಿರುವುದನ್ನು ಸೂಚಿಸುತ್ತದೆ. ಅಂತಿಮವಾಗಿ, ಗ್ರಾಹಕರೇ ಈ ಹೆಚ್ಚಳದ ಹೊರೆಯನ್ನು ಅನುಭವಿಸುವಂತಾಗಿತ್ತು.

ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಖಾದ್ಯ ತೈಲಗಳ ಬೆಲೆಗಳ ಮೇಲೆ ನಿರಂತರವಾಗಿ ನಿಗಾ ವಹಿಸುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ ಇಳಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿರುವುದು ಸಾರ್ವಜನಿಕಸ್ನೇಹಿ ಕ್ರಮವಾಗಿದೆ. ಖಾದ್ಯ ತೈಲವು ಪ್ರತಿಯೊಬ್ಬರು ದಿನನಿತ್ಯವೂ ಬಳಸುವ ಅತ್ಯಗತ್ಯದ ಆಹಾರ ಪದಾರ್ಥವಾಗಿದ್ದು, ಇದರ ಬೆಲೆ ಇಳಿಕೆಯ ಲಾಭವು ಎಲ್ಲರಿಗೂ ಸಿಗಲಿದೆ. ಭಾರತದಲ್ಲಿ ಪ್ರಸ್ತುತ ಹಣದುಬ್ಬರ ದರವು ಶೇ. 6ರ ಆಸುಪಾಸಿನಲ್ಲಿದ್ದು, ಬೆಲೆ ಏರಿಕೆಯ ಬಾಧೆಯನ್ನು ಕೆಲ ವರ್ಷಗಳಿಂದ ಸಾರ್ವಜನಿಕರು ಅನುಭವಿಸುತ್ತಿದ್ದಾರೆ. ಈಗ ಖಾದ್ಯ ತೈಲ ದರ ಇಳಿಮುಖವಾಗುತ್ತಿರುವುದು ಒಂದಿಷ್ಟು ಸಮಾಧಾನ ಮೂಡಿಸಲಿದೆ. ಖಾದ್ಯ ತೈಲದ ರೀತಿಯಲ್ಲಿ ಇತರೆ ಆಹಾರ ಪದಾರ್ಥಗಳು ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂಬ ಅಪೇಕ್ಷೆ ಜನರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net