ಚೀನಾ-ಭಾರತ ಸಂಘರ್ಷ: ಪ್ರಧಾನಿ ಅಧ್ಯಕ್ಷತೆಯಲ್ಲಿ ಮಹತ್ವದ ಸರ್ವಪಕ್ಷ ಸಭೆ

Modi
Published on

ನವದೆಹಲಿ: ಲಡಾಕ್ ಭಾಗದಲ್ಲಿ ಚೀನಾ-ಭಾರತ ಗಡಿ ಸಂಘರ್ಷದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಶುರುವಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿರುವ ಸಭೆಯಲ್ಲಿ 20 ಕ್ಕೂ ಹೆಚ್ಚು ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ. ಇದಕ್ಕೂ ಮುನ್ನ ಜೂನ್ 17ರಂದು ಪಿಎಂಒ ಕಚೇರಿ ಟ್ವೀಟ್ ಮಾಡಿದ್ದು, ಭಾರತ-ಚೀನಾ ಗಡಿ ಭಾಗದ ಪರಿಸ್ಥಿತಿಯ ಕುರಿತು ಸರ್ವ ಪಕ್ಷಗಳ ನಾಯಕರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚರ್ಚಿಸುವುದಾಗಿ ಪ್ರಕಟಿಸಿತ್ತು.

ವರ್ಚುವಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್​, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್​ ಕೂಡ ಭಾಗಿಯಾಗಲಿದ್ದಾರೆ. ಪ್ರಧಾನಿಯವರ ಪರವಾಗಿ ರಾಜನಾಥ್​ ಸಿಂಗ್ ಅವರು ಎಲ್ಲ ಪಕ್ಷಗಳ ನಾಯಕರಿಗೆ ಪೋನ್ ಕರೆ ಮಾಡಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ಸಭೆಗೂ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಾವು ದೇಶ ಮತ್ತು ರಕ್ಷಣಾ ಪಡೆಗಳ ಜತೆಗಿದ್ದೇವೆ. ಚೀನಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ್ದು ಅಗತ್ಯ. ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆ ಎಎಪಿಗೆ ಆಹ್ವಾನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲಡಾಕ್​ ನ ಗಾಲ್ವನ್ ಕಣಿವೆ ಪ್ರದೇಶದಲ್ಲಿ ಚೀನಾ ಸೇನೆ ಮುನ್ನುಗ್ಗಿದ್ದರ ಪರಿಣಾಮ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾದರೆ 43 ಚೀನೀಯರ ಪ್ರಾಣ ಕಳೆದುಕೊಂಡಿದ್ದಾರೆ. ಚೀನೀ ಯೋಧರ ಮರಣ ಪ್ರಮಾಣವನ್ನು ಅಲ್ಲಿನ ಸರ್ಕಾರ ಇನ್ನೂ ದೃಢೀಕರಿಸಿಲ್ಲ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಪ್ರತಿಕ್ರಿಯಿಸಿದ ವೇಳೆ, ಭಾರತ ಸರ್ಕಾರ ಗಡಿ ಸಂಘರ್ಷವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net