ಬಿಡೆನ್​, ಹ್ಯಾರಿಸ್​ಗೆ ಭಾರತದ ಪ್ರಧಾನಿ ಮೋದಿ ಅಭಿನಂದನೆ

Modi and biden
Published on

ನವದೆಹಲಿ: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದನೆಗಳನ್ನು ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ನಿಮ್ಮ ವರ್ಣರಂಜಿತ ವಿಜಯಕ್ಕಾಗಿ ಅಭಿನಂದನೆಗಳು ಜೋ ಬಿಡೆನ್​!. ನೀವು ಉಪಾಧ್ಯಕ್ಷರಾಗಿ ಕೂಡ ಇಂಡೋ-ಅಮೆರಿಕದ ಸಂಬಂಧ ಸುಧಾರಿಸುವಲ್ಲಿ, ಬಲಪಡಿಸುವಲ್ಲಿ ನಿರ್ಣಾಯಕ ಮತ್ತು ಬೆಲೆಕಟ್ಟಲಾಗದ ಪಾತ್ರವನ್ನು ನಿರ್ವಹಿಸಿದ್ದೀರಿ. ಈಗ ಮತ್ತೆ ಭಾರತ-ಅಮೆರಿಕದ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಮೊದಲ ಟ್ವೀಟ್​ ನಲ್ಲಿ ಮೋದಿ ತಿಳಿಸಿದ್ದಾರೆ.

ಇನ್ನೊಂದು ಟ್ವೀಟ್​ನಲ್ಲಿ, ಹೃತ್ಪೂರ್ವಕ ಅಭಿನಂದನೆಗಳು ಕಮಲಾ ಹ್ಯಾರಿಸ್​! ನಿಮ್ಮ ಅಭೂತಪೂರ್ವ ಗೆಲುವು ನಿಮ್ಮ ಹೆಮ್ಮೆಯಷ್ಟೇ ಅಲ್ಲ, ಎಲ್ಲ ಇಂಡಿಯನ್ ಅಮೆರಿಕನ್ನರ ಹೆಮ್ಮೆ ಮತ್ತು ಗೆಲುವು ಕೂಡ ಆಗಿದೆ. ನಿಮ್ಮ ಬೆಂಬಲ ಮತ್ತು ನಾಯಕತ್ವದಲ್ಲಿ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಬೆಸೆದುಕೊಳ್ಳಲಿದೆ ಎಂಬ ವಿಶ್ವಾಸ ನನಗಿದೆ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕೂಡ ಅಮೆರಿಕದ ನಿಯೋಜಿತ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬಿಗಿ ಫೈಟ್ ನೀಡಿದ ಜೋ ಬಿಡೆನ್ ನಿರ್ಣಾಯಕ ಗೆಲುವನ್ನು ದಾಖಲಿಸಿದ್ದಾರೆ. ನಿನ್ನೆ ಸಂಪೂರ್ಣ ಫಲಿತಾಂಶ ಪ್ರಕಟವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net