More

    ಬೈಡೆನ್ ಅಮೆರಿಕ ಪ್ರೆಸಿಡೆಂಟ್: ಟ್ರಂಪ್ ಎಕ್ಸಿಟ್, ಕಮಲಾ ಹ್ಯಾರಿಸ್ ಮೊದಲ ಉಪಾಧ್ಯಕ್ಷೆ

    ವಾಷಿಂಗ್ಟನ್: ನಾಲ್ಕು ದಿನಗಳಿಂದ ಇಡೀ ಜಗತ್ತಿನ ಕುತೂಹಲ ಕೆರಳಿಸಿದ್ದ ಮತ ಎಣಿಕೆ ಹೈಡ್ರಾಮಾಕ್ಕೆ ಕೊನೆಗೂ ಭಾರತೀಯ ಕಾಲಮಾನ ಶನಿವಾರ ರಾತ್ರಿ ತೆರೆಬಿದ್ದಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

    ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಮಾಜಿ ಉಪಾಧ್ಯಕ್ಷ, 77 ವರ್ಷದ ಜೋ ಬೈಡೆನ್ ಹಲವು ನಾಟಕೀಯ ವಿದ್ಯಮಾನಗಳ ಬಳಿಕ ಪ್ರಯಾಸದಿಂದಲೇ ಜಯಭೇರಿ ಬಾರಿಸಿದ್ದಾರೆ. 284 ಎಲೆಕ್ಟೋರಲ್ ಕಾಲೇಜುಗಳ ಬೆಂಬಲ ಪಡೆದ ಬೈಡೆನ್ ಅಧ್ಯಕ್ಷರಾಗಿ ಶ್ವೇತಭವನ ಪ್ರವೇಶಿಸಲಿದ್ದರೆ, ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸತತ 2ನೇ ಅವಧಿಯ ಕನಸು ಭಗ್ನಗೊಂಡಿದೆ.

    ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿರುವುದು ಭಾರತ ಮತ್ತು ಅಮೆರಿಕದ ಬಾಂಧವ್ಯ ಹೊಸ ಸ್ತರಕ್ಕೆ ಜಿಗಿಯುವ ಆಶಾಕಿರಣ ಮೂಡಿಸಿದೆ. ಟ್ರಂಪ್ (74) ಸೋಲು ವೀರೋಚಿತವಾಗಿದ್ದರೂ ತಮ್ಮ ಹೋರಾಟ ಮುಗಿದಿಲ್ಲ ಎಂದಿದ್ದು, ಕಾನೂನು ಹೋರಾಟದ ಸುಳಿವು ನೀಡಿದ್ದಾರೆ.

    ಅಮೆರಿಕದಲ್ಲೂ ಅರಳಿದ ಕಮಲ

    ಬೈಡೆನ್ ಗೆಲುವು ಸಾಧಿಸುತ್ತಿದ್ದಂತೆ ಭಾರತೀಯ ಸಂಜಾತೆ ಕಮಲಾ ಹ್ಯಾರಿಸ್, ಅಮೆರಿಕದ ಉಪಾಧ್ಯಕ್ಷ ಸ್ಥಾನ ಅಲಂಕರಿ ಸುವುದು ಖಚಿತವಾಗಿದ್ದು, ಹೊಸ ಇತಿಹಾಸ ನಿರ್ವಣವಾಗಿದೆ. ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಕಪು್ಪವರ್ಣೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಕಮಲಾ ಈ ಚುನಾವಣೆಯಲ್ಲೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಬಳಿಕ ಹಿಂದೆ ಸರಿದಿದ್ದರು. ಬೈಡೆನ್ ಮುಂದಿನ ಚುನಾವಣೆಗೆ ನಿಲ್ಲುವುದು ಅನುಮಾನ. ಹೀಗಾಗಿ ಕಮಲಾ ಮುಂದಿನ ಅಧ್ಯಕ್ಷೀಯ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ. ಭಾರತೀಯ ಮೂಲದ ಅಮೆರಿಕನ್ನರು, ಕಪು್ಪವರ್ಣೀಯರು ಹಾಗೂ ಮಹಿಳೆಯರು ಬೈಡೆನ್​ಗೆ ಬೆಂಬಲಿಸಿದ್ದು, ಇದರ ಹಿಂದೆ ಕಮಲಾ ಪ್ರಭಾವ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ನಮ್ಮ ಮುಂದಿರುವ ಕೆಲಸ ಕಷ್ಟಕರವಾಗಿದೆ. ನಾನು ಅಮೆರಿಕದ ಎಲ್ಲ ಪ್ರಜೆಗಳ ಅಧ್ಯಕ್ಷನಾಗಿ ಕೆಲಸ ಮಾಡುವೆ ಎಂದು ಭರವಸೆ ನೀಡುತ್ತೇನೆ.
    
    | ಜೋ ಬೈಡೆನ್ ಅಮೆರಿಕ ನಿಯೋಜಿತ ಅಧ್ಯಕ್ಷ
    ಚುನಾವಣೆ ಸಂಬಂಧಿತ ಎಲ್ಲ ನಿಯಮ ಪಾಲಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಮ್ಮ ತಂಡ ಕಾನೂನು ಕ್ರಮ ಕೈಗೊಳ್ಳಲಿದೆ. ನಿಜವಾಗಿ ಗೆದ್ದವರೇ ಅಧ್ಯಕ್ಷರಾಗಬೇಕು.
    
    | ಡೊನಾಲ್ಡ್ ಟ್ರಂಪ್ ಅಮೆರಿಕ ನಿರ್ಗಮಿತ ಅಧ್ಯಕ್ಷ

    ಭಾರತಕ್ಕೆ ಹಲವು ನಿರೀಕ್ಷೆ

    ಜೋ ಬೈಡೆನ್ ಭಾರತಕ್ಕೆ ಅಪರಿಚಿತರಲ್ಲ. ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ ಉಪಾಧ್ಯಕ್ಷರಾಗಿದ್ದ ಬೈಡೆನ್ ಭಾರತಕ್ಕೆ ಹಲವು ಸಲ ಭೇಟಿ ನೀಡಿದ್ದಾರೆ ಮತ್ತು ಭಾರತ ಅಮೆರಿಕದ ಬಾಂಧವ್ಯದ ಪೂರ್ಣ ಅರಿವು ಮತ್ತು ದಕ್ಷಿಣ ಏಷ್ಯಾದಲ್ಲಿ ಭಾರತದ ಸ್ನೇಹ ಎಷ್ಟು ಮುಖ್ಯ ಎಂಬ ಸಂಗತಿಗಳು ಅವರಿಗೆ ಗೊತ್ತಿದೆ. ಜತೆಗೆ ತಮಿಳುನಾಡು ಮೂಲದವರಾದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿರುವ ಕಾರಣ ಭಾರತ ಮತ್ತು ಅಮೆರಿಕ ಬಾಂಧವ್ಯ ಹಿಂದೆಂದಿಗಿಂತಲೂ ಗಟ್ಟಿಯಾಗಲಿದೆ ಎಂಬ ನಿರೀಕ್ಷೆ ಇದೆ.

    • 77 ವರ್ಷದ ಬೈಡೆನ್ ಒಂದು ಅವಧಿಗಷ್ಟೇ ಅಧ್ಯಕ್ಷರಾಗುವ ಸಾಧ್ಯತೆ ಇರುವ ಕಾರಣ 2024ರ ಅಧ್ಯಕ್ಷೀಯ ಚುನಾವಣೆಗೆ ಕಮಲಾ ಡೆಮಾಕ್ರಟಿಕ್ ಪಕ್ಷದ ಬಲಾಢ್ಯ ಸ್ಪರ್ಧಾಳು ಆಗುವ ಸಂಭವವೂ ಇದೆ.
    • ಎಚ್-1 ಬಿ ವೀಸಾದ ನೀತಿ ಪರಿಷ್ಕರಣೆ ಆಗುವ ಸಾಧ್ಯತೆ ಇದೆ. ಇದರಿಂದ ಭಾರತದ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ಹೊಡೆತ ಬೀಳುವ ಅಪಾಯ ಹೆಚ್ಚಿದೆ.
    • ಭಾರತದ ಜತೆಗಿನ ರಕ್ಷಣಾ ಮತ್ತು ಭದ್ರತಾ ಸಂಬಂಧ 2000ನೇ ಇಸವಿಯಿಂದ ನಡೆದುಕೊಂಡು ಬಂದಿರುವಂತೆ ಮುಂದುವರಿಯುವ ಸಾಧ್ಯತೆ ಇದೆ.
    • ಭಾರತ ಜತೆಗಿನ ವಾಣಿಜ್ಯ ವಹಿವಾಟಿನಲ್ಲಿ ಅಮೆರಿಕ ಕೆಲವು ತಕರಾರು ಹೊಂದಿದೆ. ಇಂಥ ಸನ್ನಿವೇಶ ಒಬಾಮರ ಕಾಲದಲ್ಲೂ ಇತ್ತು. ಆದರೆ, ಈ ಅಡೆತಡೆಯನ್ನೂ ಮೀರಿ ವಹಿವಾಟು ಹೆಚ್ಚಳದ ಬಗ್ಗೆ ಗಮನ ನೀಡಬೇಕಿದೆ. ಆದರೆ, ಅಮೆರಿಕವನ್ನು ಮತ್ತೊಮ್ಮೆ ಅದ್ಭುತ ರಾಷ್ಟ್ರವನ್ನಾಗಿಸುವ ಘೋಷಣೆ ಮಾಡಿರುವುದರಿಂದ ದೇಶೀಯ ಉದ್ಯಮಗಳಿಗೆ ಉತ್ತೇಜನ ನೀಡುವ ಸಾಧ್ಯತೆ ಇದೆ.
    • ಚೀನಾ ಬಗ್ಗೆ ಬೈಡೆನ್​ಗೆ ಸದಾಶಯವೂ ಇಲ್ಲ. ಇದು ಭಾರತಕ್ಕೆ ಅನುಕೂಲಕರವಾಗಬಹುದು.
    • ಹಿಂದುಮಹಾಸಾಗರ ಮತ್ತು ಶಾಂತ ಸಾಗರ ಪ್ರಾದೇಶಿಕದ ಕಾರ್ಯತಂತ್ರದ ಬಗ್ಗೆ ಬೈಡೆನ್​ನ ತಂಡ ನಿರ್ದಿಷ್ಟವಾದ ನಿಲುವನ್ನು ಪ್ರಕಟಿಸಿಲ್ಲ. ಮುಂದೆ ಈ ಕುರಿತ ನೀತಿ ಗಮನಾರ್ಹ.
    • ಭಾರತ ಮತ್ತು ಅಮೆರಿಕದ ಬಾಂಧವ್ಯ ಸಾಂಸ್ಥೀಕರಣಗೊಂಡಿದೆ. ಜಾಗತಿಕವಾಗಿ ಅನೇಕ ಸಮಸ್ಯೆಗಳನ್ನು ಭಾರತದ ನೆರವಿಲ್ಲದೆ ಪರಿಹರಿಸಲು ಆಗದು. ಹೀಗಾಗಿ ಉಭಯ ದೇಶಗಳು ಸ್ವಾಭಾವಿಕವಾಗಿಯೇ ಮಿತ್ರ ರಾಷ್ಟ್ರಗಳು.
    • ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಜಮ್ಮು-ಕಾಶ್ಮೀರದ ಪುನರ್ ವಿಂಗಡಣೆ ಕುರಿತು ಬೈಡೆನ್ ಆಡಳಿತದಲ್ಲಿ ಹೆಚ್ಚು ಚರ್ಚೆ ಆಗುವ ಸಾಧ್ಯತೆ.
    • ಅಫ್ಘಾನಿಸ್ತಾನದಿಂದ ನ್ಯಾಟೋ ಪಡೆ ಗಳನ್ನು ಹಿಂಪಡೆಯುವ ಟ್ರಂಪ್ ನಿರ್ಧಾರ ಪರಿಷ್ಕರಣೆ ಸಂಭವ.
    • ಕಲ್ಲಿದ್ದಲು ಬಳಕೆ ವಿಷಯದಲ್ಲಿ ಭಾರತದ ವಿರುದ್ಧ ಬೈಡೆನ್ ಸೊಲ್ಲೆತ್ತಬಹುದು.

      ಭಾರತ ಬಗೆಗಿನ ಹೇಳಿಕೆ

    • ಕಾಶ್ಮೀರಗಳ ಹಕ್ಕು ಪುನರ್ ಸ್ಥಾಪಿಸಲು ಭಾರತ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರ ವಿಳಂಬ ಪ್ರಜಾತಂತ್ರವನ್ನು ದುರ್ಬಲ ಮಾಡುತ್ತದೆ.
    • ಭಾರತದಲ್ಲಿನ ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾನೂನು ವಿಷಯದಲ್ಲಿ ಭಾರತ ಸರ್ಕಾರದ ನಡೆ ಸಮರ್ಪಕವಾಗಿರಲಿಲ್ಲ.
    • ಎಲ್ಲ ರೀತಿಯ ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ ಮಾಡುವ ಮೂಲಕ ಪ್ರಾದೇಶಿಕದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಭಾರತಕ್ಕೆ ಸಂಪೂರ್ಣ ಸಹಕಾರ. ಉಭಯ ದೇಶಗಳ ಬಾಂಧವ್ಯ ಮತ್ತಷ್ಟು ವಿಸ್ತರಿಸುವುದು ನಮ್ಮ ಆದ್ಯತೆ.
    • ಅಮೆರಿಕದ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಮೇಲೆ ಚೀನಾ ಸವಾರಿ ಮಾಡಲು ಪ್ರಯತ್ನಿಸಿದರೆ ನೋಡಿಕೊಂಡು ಸುಮ್ಮನಿರಲಾಗದು.
    • ಚೀನಾದ ಆಕ್ರಮಣಕಾರಿ ಧೋರಣೆ ಮತ್ತು ಅಲ್ಲಿನ ಮಾನವ ಹಕ್ಕುಗಳ ದಮನದ ಬಗ್ಗೆ ಮಿತ್ರ ರಾಷ್ಟ್ರಗಳ ಜತೆಗೂಡಿ ಸಮರ್ಥವಾಗಿ ಎದುರಿಸಲಾಗುವುದು.

      ಪ್ರೊಫೆಸರ್ ಈಗ ದೇಶದ ಮೊದಲ ಮಹಿಳೆ

      ಜೋ ಬೈಡೆನ್​ರ ಪತ್ನಿ ಜಿಲ್ ಬೈಡೆನ್ (69) ವೃತ್ತಿಯಲ್ಲಿ ಪ್ರಾಧ್ಯಾಪಕಿಯಾಗಿದ್ದು, ಜನವರಿ 20ರಿಂದ ದೇಶದ ಮೊದಲ ಮಹಿಳೆ (ಫಸ್ಟ್ ಲೇಡಿ) ಗೌರವ ಪಡೆಯಲಿದ್ದಾರೆ. ಬೈಡೆನ್ ದಂಪತಿಗೆ ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಅಮೆರಿಕದ ಬಹುತೇಕ ಮಹಿಳೆಯರು ಮನೆ ಮತ್ತು ಉದ್ಯೋಗ ಎರಡನ್ನೂ ಸಂಭಾಳಿಸುತ್ತಾರೆ. ಆದರೆ, ಫಸ್ಟ್ ಲೇಡಿಯಾದವರು ಉದ್ಯೋಗ ಮಾಡುವಂತಿಲ್ಲ ಎಂದು ಓಹಿಯೊ ವಿವಿಯ ಇತಿಹಾಸದ ಪ್ರಾಧ್ಯಾಪಕಿ ಕ್ಯಾಥರೀನ್ ಜೆಲ್ಲಿಸನ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts