More

    ತೀವ್ರ ಪೈಪೋಟಿಯಲ್ಲಿ ಜಯದ ಜೋಷ್

    ಡೆಮಾಕ್ರಟಿಕ್ ಪಕ್ಷದ ಹುರಿಯಾಳು ಮತ್ತು ಮಾಜಿ ಉಪಾಧ್ಯಕ್ಷ ಜೋಸೆಫ್ ರಾಬಿನೆಟ್ ಬೈಡೆನ್ ಜೂನಿಯರ್ (ಜೋ ಬೈಡೆನ್) 290 ಸ್ಥಾನಗಳನ್ನು ಪಡೆಯುವ ಮೂಲಕ ಅಮೆರಿಕದ ‘ಶಕ್ತಿ ಸೌಧ’ ಶ್ವೇತಭವನ ಪ್ರವೇಶಿಸಿದ್ದಾರೆ. ಈ ಮ್ಯಾಜಿಕ್ ಸಂಖ್ಯೆಯನ್ನು ಅವರಿಗೆ ಪೆನ್ಸಿಲ್ವೇನಿಯಾ, ನೆವಾಡ ರಾಜ್ಯಗಳು ನೀಡಿವೆ. ತೀವ್ರ ಪೈಪೋಟಿ ನೀಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲನ್ನು ಒಪ್ಪಿಕೊಂಡಿಲ್ಲ. ಇನ್ನೂ ಎರಡು ರಾಜ್ಯಗಳಲ್ಲಿ ಎಣಿಕೆ ಕಾರ್ಯ ಮುಗಿಯದ ಕಾರಣ ಅವರು ‘ಚುನಾವಣೆ ಇನ್ನೂ ಮುಗಿದಿಲ್ಲ’ ಎಂದಿದ್ದಾರೆ. ಜತೆಗೆ ಅವರ ಬೆಂಬಲಿಗರು ಕಾನೂನು ಹೋರಾಟವನ್ನು ಸಾರಿದ್ದಾರೆ.

    ಎಣಿಕೆ ವಿಳಂಬಕ್ಕೆ ಏನು ಕಾರಣ?

    ಮತ ಎಣಿಕೆ ಪ್ರಕ್ರಿಯೆ ವಿಳಂಬವಾಗಿರುವ ಐದು ರಾಜ್ಯಗಳ ಪೈಕಿ 20 ಎಲೆಕ್ಟೋರಲ್ ಕಾಲೇಜುಗಳನ್ನು ಒಳಗೊಂಡಿರುವ ಪೆನ್ಸಿಲ್ವೇನಿಯಾ ಮತ್ತು 16 ಎಲೆಕ್ಟೋರಲ್ ಒಳಗೊಂಡ ಜಾರ್ಜಿಯಾದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡೆನ್ ಮಧ್ಯೆ ಕೂದಲೆಳೆಯ ಅಂತರ ಇದ್ದ ಕಾರಣ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವುದು ವಿಳಂಬವಾಯಿತು. ಎಲೆಕ್ಟೋರಲ್​ಗಳನ್ನು ಚುನಾಯಿಸುವ ಪಾಪ್ಯುಲರ್ ಮತಗಳಲ್ಲಿ ಉಭಯ ಅಭ್ಯರ್ಥಿಗಳ ಮಧ್ಯೆ ಹೆಚ್ಚಿನ ಅಂತರ ಇಲ್ಲದ ಕಾರಣ ಗೆಲುವಿನ ಸನಿಹಕ್ಕೆ ಬಂದರೂ ನಿರ್ಣಾಯಕವಾದ 270 ಎಲೆಕ್ಟೋರಲ್​ಗಳನ್ನು ಸಿದ್ಧಪಡಿಸಲು ಬೈಡೆನ್​ಗೆ ಆಗಿರಲಿಲ್ಲ. ಇತ್ತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲನ್ನು ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಅಮೆರಿಕದ 46ನೇ ಅಧ್ಯಕ್ಷೀಯ ಚುನಾವಣಾ ಸರಾಗವಾಗಿರಲಿಲ್ಲ.

    ಬೈಡೆನ್​ಗೆ ಸ್ವಿಂಗ್ ನೀಡಿದ ರಾಜ್ಯಗಳು

    ವಿಸ್ಕಾನ್ಸಿನ್, ಅರಿಜೋನಾ, ಮಿಚಿಗನ್ ಮತ್ತು ಪೆನ್ಸಿಲ್ವೇನಿಯಾಗಳು ಬೈಡೆನ್​ಗೆ ‘ಸ್ವಿಂಗ್’ ನೀಡಿದ ರಾಜ್ಯಗಳಾಗಿವೆ. ಈ ರಾಜ್ಯಗಳಲ್ಲಿ ಕ್ರಮವಾಗಿ 10, 11, 16 ಮತ್ತು 20 ಎಲೆಕ್ಟೋರಲ್ ಕಾಲೇಜುಗಳ ಬೆಂಬಲವನ್ನು ಪಡೆಯುವ ಮೂಲಕ ಮಾಂತ್ರಿಕ ಸಂಖ್ಯೆ 270 ಅನ್ನು ದಾಟಿದ್ದಾರೆ. 2016ರಲ್ಲಿ ಈ ರಾಜ್ಯಗಳನ್ನು ಡೊನಾಲ್ಡ್ ಟ್ರಂಪ್ ಗೆದ್ದಿದ್ದರು.

    ಜಾರ್ಜಿಯಾದಲ್ಲಿ ಮರು ಎಣಿಕೆ

    ಜಾರ್ಜಿಯಾದಲ್ಲಿ ಬೈಡೆನ್ ಶೇ. 49.5 (24.41 ಲಕ್ಷ) ಹಾಗೂ ಟ್ರಂಪ್ ಶೇ. 49.3 (24.54 ಲಕ್ಷ) ಮತ ಪಡೆದುಕೊಂಡಿದ್ದಾರೆ. ಅಂತರ ಶೇ. 0.2 (7 ಸಾವಿತರ ಮತ) ಇದ್ದು, ಉಭಯ ಅಭ್ಯರ್ಥಿಗಳ ಮತ ಅಂತರ ನಾಜೂಕಾಗಿರುವ ಕಾರಣ ಇಲ್ಲಿ ಮರು ಎಣಿಕೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಗಳಲ್ಲಿರುವ ಅಮೆರಿಕನ್ನರು ಹಾಗೂ ಸೈನಿಕರು ಕಳುಹಿಸಿರುವ ಅಂಚೆ ಮತಪತ್ರಗಳು ಶುಕ್ರವಾರದ ಅಂತಿಮ ಗಡುವಿನೊಳಗೆ ಮತ ಎಣಿಕೆ ಕೇಂದ್ರಕ್ಕೆ ಬಂದು ಸೇರಿರುವುದರಿಂದ ಇವುಗಳ ಎಣಿಕೆ ನಡೆಯಬೇಕಿದೆ.

    ನೆವಾಡದಲ್ಲಿ ಬೈಡೆನ್​ಗೆ ಜಯ

    ನೆವಾಡದಲ್ಲಿ ಬೈಡೆನ್ ಶೇ. 49.9 (6.32 ಲಕ್ಷ) ಹಾಗೂ ಟ್ರಂಪ್ ಶೇ. 47.9 (6.09 ಲಕ್ಷ) ಮತಗಳನ್ನು ಪಡೆದಿದ್ದಾರೆ. ಅಂತರ ಶೇ. 2 (26 ಸಾವಿರ ಮತ) ಇದೆ, ಉಳಿದಂತೆ ಉತ್ತರ ಕರೋಲಿನಾ, ಅಲಸ್ಕಾಗಳಲ್ಲಿ ಬಹುತೇಕವಾಗಿ ಟ್ರಂಪ್ ಜಯ ಸಾಧಿಸಿದ್ದು, ಫಲಿತಾಂಶ ಪ್ರಕಟ ಬಾಕಿ ಇದೆ.

    ಶಸ್ತ್ರಹೊಂದಿದ್ದ ಇಬ್ಬರ ಬಂಧನ

    ಡೊನಾಲ್ಡ್ ಟ್ರಂಪ್​ಗೆ ಸೋಲಾಗುತ್ತಿರುವುದನ್ನು ಸಹಿಸದ ಅವರ ಬೆಂಬಲಿಗರು ಮತ ಎಣಿಕೆ ಕೇಂದ್ರಗಳ ಮುಂದೆ ಪ್ರತಿಭಟನೆ ಮುಂದುವರಿಸಿದ್ದಾರೆ. ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಭದ್ರತಾ ಪಡೆಗಳು ಹೇಳಿವೆ. ಫಿಲಡೆಲ್ಪಿಯಾದಲ್ಲಿ ಶಸ್ತ್ರವನ್ನು ತಂದಿದ್ದ ಇಬ್ಬರನ್ನು ಬಂಧಿಸಲಾಗಿದೆ. ಅಟ್ಲಾಂಟದಲ್ಲಿ ಜೀವ ಬೆದರಿಕೆ ಹಾಕಿದ್ದರಿಂದ ಎಣಿಕಾ ಕೇಂದ್ರದ ಸಿಬ್ಬಂದಿ ಕಾರಿನಲ್ಲೇ ಬಚ್ಚಿಟ್ಟುಕೊಂಡಿದ್ದ ಘಟನೆ ನಡೆದಿದೆ. ಆದರೆ. ಚುನಾವಣಾ ಪ್ರಕ್ರಿಯೆ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಟೀಕೆಯನ್ನು ರಿಪಬ್ಲಿಕನ್ ಪಕ್ಷದ ಅನೇಕ ನಾಯಕರು ಖಂಡಿಸಿದ್ದಾರೆ. ಚುನಾವಣೆಯನ್ನು ಕಬಳಿಸಲಾಗಿದೆ ಎಂದು ದೂರಿರುವುದು ದೇಶದ ಗೌರವಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಕ್ಕೆ ಮಾಡುತ್ತದೆ. ಚುನಾವಣಾ ಸಂಸ್ಥೆಯನ್ನು ದುರ್ಬಲ ಮಾಡುತ್ತದೆ ಎಂದು ಸೆನೆಟ್​ನ ರಿಪಬ್ಲಿಕನ್ ಸದಸ್ಯ ಮಿಟ್ ರೋಮ್ನಿ ಹೇಳಿದ್ದಾರೆ.

    ವಿಳಂಬ ಮತಪತ್ರ ಪ್ರತ್ಯೇಕವಾಗಿರಿಸಲು ಸೂಚನೆ

    ಪೆನ್ಸಿಲ್ವೇನಿಯಾದಲ್ಲಿ ಮತ ಎಣಿಕೆಗೆ ತಡೆ ನೀಡಬೇಕು ಎಂದು ರಿಪಬ್ಲಿಕನ್ ಪಕ್ಷದವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಇಲ್ಲಿ ಅಂಚೆ ಮತಪತ್ರಗಳು ಸಾರಾಸಗಟಾಗಿ ಬೈಡೆನ್ ಪರ ಇವೆ. ಹೀಗಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ಯಾಮ್ಯುಯೆಲ್ ಅಲಿಟೊ, ತಕ್ಷಣಕ್ಕೆ ಆದೇಶ ನೀಡಲಾಗದು. ನ್ಯಾಯಾಲಯದ ಪೂರ್ಣ ಪೀಠ ಈ ಅರ್ಜಿಯನ್ನು ಪರಿಶೀಲಿಸಲಿದೆ ಎಂದಿದ್ದಾರೆ. ಆದರೆ, ಮತದಾನದ ದಿನ ರಾತ್ರಿ 8ರ ನಂತರ ಬಂದ ಅಂಚೆ ಮತಪತ್ರಗಳನ್ನು ಪ್ರತ್ಯೇಕವಾಗಿ ಇರಿಸುವಂತೆ ಸೂಚಿಸಿದ್ದಾರೆ. ಚುನಾವಣೆಯಲ್ಲಿ ವಂಚನೆ ಆಗಿದೆ ಎಂದು ಆರೋಪಿಸಿರುವ ಟ್ರಂಪ್, ಅದಕ್ಕೆ ಪುರಾವೆ ಒದಗಿಸಿಲ್ಲ. ಈ ಮಧ್ಯೆ, ಜಾರ್ಜಿಯಾ ಹಾಗೂ ಮಿಚಿಗನ್​ಗಳಲ್ಲಿ ಟ್ರಂಪ್ ಬೆಂಬಲಿಗರು ಸಲ್ಲಿಸಿದ ದಾವೆ ವಜಾ ಆಗಿದೆ. ಕಾನೂನು ಹೋರಾಟಕ್ಕಾಗಿ ಟ್ರಂಪ್ ಬೆಂಬಲಿಗರು 60 ಮಿಲಿಯನ್ ಡಾಲರ್ (-ಠಿ; 443 ಕೋಟಿ) ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಡೆಟ್ರಾಯಿಟ್​ನಲ್ಲಿ 62 ರ್ಯಾಲಿಗಳು ಟ್ರಂಪ್ ಪರವಾಗಿ ನಡೆದಿವೆ.

    ಡೆಮಾಕ್ರಟರ ಸಂಭ್ರಮ

    ಜೋ ಬೈಡೆನ್ ಶ್ವೇತಭವನ ಪ್ರವೇಶಿಸುವುದು ಖಚಿತವಾಗಿದೆ ಎನ್ನುವ ವಾರ್ತೆ ತಿಳಿದ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರು ರಸ್ತೆಗಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಮಧ್ಯೆ, ಟ್ರಂಪ್ ಬೆಂಬಲಿಗರು ಶಸ್ತ್ರ ಸಜ್ಜಿತರಾಗಿ ‘ಗೆಲುವು ಕದಿಯಬೇಡಿ’ ಎಂದು ಕಿರುಚಾಡಿದ್ದಾರೆ. ಕಳೆದ ಸಲ ಟ್ರಂಪ್ ಜಯಭೇರಿ ಬಾರಿಸಿದ್ದ ಮಿಚಿಗನ್​ನಲ್ಲಿ ಈ ಸಾರಿ ಡೆಮಾಕ್ರಟರ ಸಂಭ್ರಮ ಮೇರೆ ಮೀರಿದೆ. ಪೆನ್ಸಿಲ್ವೇನಿಯಾದ ಫಿಲಡೆಲ್ಪಿಯಾದಲ್ಲಿ ‘ನೀಲಿ’ (ಡೆಮಾಕ್ರಟಿಕ್ ಪಕ್ಷದ ಅಧಿಕೃತ ಬಣ್ಣ) ಅಲೆ ಎದ್ದಿದೆ.

    ಟ್ರಂಪ್​ಗೆ ಧಮ್ಕಿ!

    ಚುನಾವಣಾ ಸೋಲನ್ನು ಒಪ್ಪಿಕೊಂಡು ಗೌರವಾನ್ವಿತವಾಗಿ ಶ್ವೇತಭವನದಿಂದ ನಿರ್ಗಮಿಸದಿದ್ದರೆ ಅತಿಕ್ರಮಣಕಾರರನ್ನು (ಟ್ರಂಪ್) ಹೊರದೊಬ್ಬಬೇಕಾಗುತ್ತದೆ ಎಂದು ಬೈಡೆನ್ ಬೆಂಬಲಿಗರು ಟ್ರಂಪ್​ಗೆ ಎಚ್ಚರಿಕೆ ನೀಡಿದ್ದರು. ತಾವು ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಅಧಿಕಾರ ಹಸ್ತಾಂತರ ಮಾಡುವುದಿಲ್ಲವೆಂದು ಜುಲೈನಲ್ಲಿ ಸಂದರ್ಶನವೊಂದರಲ್ಲಿ ಟ್ರಂಪ್ ಹೇಳಿದ್ದರು. ಈಗ ಇಂಥ ಧೋರಣೆಯನ್ನು ತೋರುತ್ತಿದ್ದಾರೆ ಎಂದು ಬೈಡೆನ್ ಕ್ಯಾಂಪೇನ್ ವಕ್ತಾರ ಆಂಡ್ರ್ಯೂ ಬೇಟ್ಸ್ ಹೇಳಿದ್ದರು

    ಟ್ರಂಪ್ ಸೋತಿದ್ದೇಕೆ?

    • ಕರೊನಾ ಸಾಂಕ್ರಾಮಿಕ ತಡೆಯಲು ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು, ಇದರಿಂದ ಅಮೆರಿಕದಲ್ಲಿ ಸೋಂಕು ವ್ಯಾಪಕವಾಗಿ ಈಗ 1 ಕೋಟಿ ದಾಟಿದೆ. ಸಾವಿನ ಸಂಖ್ಯೆ 2.42 ಲಕ್ಷ ಮೀರಿದೆ.
    • ಆರ್ಥಿಕತೆ ಕುಸಿತ, ಅಗಾಧ ಪ್ರಮಾಣದ ನಿರುದ್ಯೋಗ ಸಮಸ್ಯೆ, ಅತಿಯಾದ ಆತ್ಮ ವಿಶ್ವಾಸ, ಮುಂಗೋಪ
    • ವಲಸಿಗರ ಮೇಲೆ ವಕ್ರದೃಷ್ಟಿ. ಎಚ್-1 ಬಿ ವೀಸಾಕ್ಕೆ ಕಠಿಣ ನಿರ್ಬಂಧದ ಕಾರಣ 4.47 ಕೋಟಿ ವಲಸಿಗ ಮತದಾರರಲ್ಲಿ ಟ್ರಂಪ್ ಬಗ್ಗೆ ಆವರಿಸಿದ ಆತಂಕ
    • ‘ಸ್ವಿಂಗ್ ರಾಜ್ಯ’ಗಳ ಪೈಕಿ ಪ್ರಮುಖವಾದ ಪೆನ್ಸಿಲ್ವೇನಿಯಾ, ಜಾರ್ಜಿಯಾಗಳಲ್ಲಿ ಗೆಲುವಿನ ದಡ ಸೇರಿಸಲು ಪ್ರಚಾರದ ಮ್ಯಾನೇಜರ್​ಗಳ ಇನ್ನಿಷ್ಟು ಶ್ರಮ ಅಗತ್ಯವಿತ್ತು.
    • ಟ್ರಂಪ್​ರ ಆಕ್ರಮಣಕಾರಿ ಮನೋಭಾವ, ಅಮೆರಿಕ ಮೊದಲು ಎಂಬ ನೀತಿಯೇ ಅವರನ್ನು ಹಲವು ರಾಜ್ಯಗಳಲ್ಲಿ ಕೈ ಹಿಡಿಯಿತು. ಆದರೆ, ಇದೇ ಕಾರಣವು ಅನೇಕ ರಾಜ್ಯದಲ್ಲಿ ವ್ಯತಿರಿಕ್ತವಾಯಿತು.
    • ಕೀಪ್ ಅಮೆರಿಕ ಗ್ರೇಟ್ ಏಗೇನ್, ಫೋರ್ ಇಯರ್ಸ್ ಮೋರ್ ಎಂಬ ಘೋಷಣೆಗಳು ಕೈಹಿಡಿಯಲಿಲ್ಲ
    • ಎದುರಾಳಿಯನ್ನು ಅಪ್ರಯೋಜಕ, ಬಲಹೀನ, ನಿದ್ರಾಸಕ್ತನೆಂದು ಮತ್ತು ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್​ರನ್ನು ಕೊಳಕಿ, ಜಗಳಗಂಟಿ ಎಂದು ಅಸಭ್ಯ ಮೂದಲಿಕೆ.

    ಬೈಡೆನ್ ಗೆದ್ದಿದ್ದೇಕೆ?

    • ಮೃದುಭಾಷಿ, ಟ್ರಂಪ್​ರಂತೆ ಒರಟ ಅಲ್ಲ.
    • ಭಾರತ ಸೇರಿ ವಿದೇಶಿದ ನಿಪುಣ ಉದ್ಯೋಗಿಗಳಿಗೆ ಮಾರಕ ವಾದ ಎಚ್-1 ಬಿ ವೀಸಾ ನೀತಿ ಪರಿಷ್ಕರಣೆಯ ಭರವಸೆ.
    • ಕುಸಿದಿರುವ ಆರ್ಥಿಕತೆಯ ಪುನಶ್ಚೇತನಕ್ಕೆ ಆಮೂಲಾಗ್ರ ಕ್ರಮ
    • ಎಲ್ಲರಿಗೂ ಕರೊನಾ ಲಸಿಕೆ ಸಂಕಲ್ಪ
    • ಟ್ರಂಪ್​ರ ಆಕ್ರಮಣಕಾರಿ ನಿಲುವಿನಿಂದ ಅಭದ್ರತೆಗೆ ಒಳಗಾಗಿದ್ದ ಕಪು್ಪವರ್ಣ ಮತ್ತು ವಲಸಿಗರ ಬೆಂಬಲ ಹೆಚ್ಚಿಗೆ ದೊರೆತಿದ್ದು
    • ಒಬಾಮ ಹೆಲ್ತ್​ಕೇರ್ ಮಾದರಿಯನ್ನು ಪರಿಷ್ಕರಿಸಿ ಮತ್ತೆ ಪರಿಚಯಿಸುವುದು
    • ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯ ವಿಷಯದಲ್ಲಿ ರಾಜಿ ಇಲ್ಲವೆಂಬ ಘೋಷಣೆ
    • ಐದು ದಶಕಗಳ ಸುದೀರ್ಘ ರಾಜಕೀಯ ಅನುಭವ ಮತ್ತು ಒಬಾಮ ಅವಧಿಯಲ್ಲಿ 8 ವರ್ಷ ಉಪಾಧ್ಯಕ್ಷರಾಗಿ ಆಡಳಿತದಲ್ಲಿರುವ ಪರಿಣತಿ

    ಬೈಡೆನ್​ಗೆ ಕಾಡುವ ಚಿಂತೆ

    • ಅಮೆರಿಕದ ಫೆಡರಲ್ ಸುಪ್ರೀಂಕೋರ್ಟ್​ಗೆ ಇತ್ತೀಚೆಗೆ ಟ್ರಂಪ್ ಮೂವರು ಕನ್ಸರ್ವೆಟೀವ್ ಜಡ್ಜ್​ಗಳನ್ನು ನೇಮಕ ಮಾಡಿರುವುದರಿಂದ ಅಲ್ಲಿ ರಿಪಬ್ಲಿಕನ್​ರಿಗೆ ಹಿತವಾಗುವ ಸನ್ನಿವೇಶ ಇಲ್ಲ.
    • ಯಾವುದಾದರೂ ಶಾಸನ ವಿವಾದಕ್ಕೆ ಒಳಗಾಗಿ ಸುಪ್ರೀಂಕೋರ್ಟ್​ಗೆ ಹೋದರೆ ಅಲ್ಲಿ ಕನ್ಸರ್ವೆಟೀವ್ ಜಡ್ಜ್​ಗಳ ಸಂಖ್ಯೆ ಹೆಚ್ಚಿರುವ ಕಾರಣ ಬೈಡೆನ್ ಆಡಳಿತಕ್ಕೆ ಹಿನ್ನಡೆಯಾಗಬಹುದು.
    • ಹೌಸ್ ಆಫ್ ರೆಪ್ರೆಸಂಟಟೀವ್ಸ್​ನಲ್ಲಿ (ಸಂಸತ್​ನ ಕೆಳಮನೆ) ಡೆಮಾಕ್ರಟ್​ಗಳಿಗೆ (200 +) ಬಹುಮತ ಇದ್ದರೂ, ಈ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ನರು ಹೆಚ್ಚು ಸೀಟುಗಳಿಸುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts