ಪ್ರಧಾನಿ ಮೋದಿ ಕನ್ನಡ ಡಿಂಡಿಮ: ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ

Modi, Bommayi, C T Ravi
Published on

ನವದೆಹಲಿ: ಭಾರತ 2047ಕ್ಕೆ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಮುಂದಿನ 25 ವರ್ಷ ಮಹತ್ವದ್ದಾಗಿದೆ. ರಾಜ್ಯವು ಕಲಿಕೆ ಮತ್ತು ಕಲೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ದೆಹಲಿಯಲ್ಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ (ಬಾರಿಸು ಕನ್ನಡ ಡಿಂಡಿಮ) ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ನೀವು ಕನ್ನಡ ಕಲಿಯುವ ಜತೆಗೆ ಕನ್ನಡವನ್ನು ಕಲಿಸಬೇಕು. ‘ಕನ್ನಡ ಕಲಿಯಿರಿ ಕನ್ನಡ ಕಲಿಸಿರಿ’ ಎಂಬ ಮಾತನ್ನು ಸ್ವಯಂಪ್ರೇರಣೆಯಿಂದ ಪಾಲಿಸಬೇಕು. ಕನ್ನಡವೊಂದು ವಿಶಿಷ್ಟ ಭಾಷೆ. ಕನ್ನಡ ಸಾಹಿತ್ಯವೂ ವಿಶಾಲವಾಗಿ ಹಬ್ಬಿದೆ. ಕನ್ನಡ ಓದುವುದರಿಂದ ವ್ಯಕ್ತಿಯಲ್ಲಿ ಸಹಜವಾಗಿಯೇ ಓದುವ ಹವ್ಯಾಸ ಹುಟ್ಟಿಕೊಳ್ಳುತ್ತದೆ. ಬೇರೆ ಭಾಷೆಗಳಿಗೆ ಇಂಥದ್ದೊಂದು ಭಾಗ್ಯವಿಲ್ಲ. ಬಸವಣ್ಣನವರ ವಚನ, ಕುಮಾರವ್ಯಾಸನ ಕಾವ್ಯಗಳು, ಕುವೆಂಪು ರಾಮಾಯಣದಂತಹ ಕೃತಿಗಳು ವಿಶಾಲ ದೃಷ್ಟಿಕೋನವುಳ್ಳ ವ್ಯಕ್ತಿತ್ವ ರೂಪಿಸುತ್ತವೆ. ಮುಂದಿನ ತಲೆಮಾರಿಗೆ ಅವುಗಳನ್ನು ತಲುಪಿಸುವ ಗುರುತರ ಹೊಣೆಗಾರಿಕೆ ನಿಮ್ಮೆಲ್ಲರ ಮೇಲಿದೆ ಎಂದರು.

ಸಾಮಾಜಿಕ, ಆರ್ಥಿಕ, ಧಾರ್ವಿುಕ ಹಾಗೂ ಸಾಹಿತ್ಯಿಕವಾಗಿ ಕನ್ನಡ ಭಾಷೆ ಬೆಳೆದು ನಿಂತಿದೆ. ಕರ್ನಾಟಕವಿಲ್ಲದೆ ಭಾರತವನ್ನು ಊಹಿಸಲು ಸಾಧ್ಯವೇ ಇಲ್ಲ. ಹನುಮಂತ ಜನಿಸಿದ್ದು ಇದೇ ನೆಲದಲ್ಲಿ. ಹನುಮಂತ ಇಲ್ಲದೆ ರಾಮಾಯಣವಿದೆಯೇ? ಹಾಗೆಯೇ ಕರ್ನಾಟಕ ಕೂಡ. ಭಾರತದ ಮೇಲೆ ದಾಳಿಯಾಗಿದ್ದಾಗ ಸೋಮನಾಥದ ಶಿವಲಿಂಗ ನಾಶ ಮಾಡಲಾಗಿತ್ತು. ಆದರೆ, ಕರ್ನಾಟಕದ ದೇವರ ದಾಸಿಮಯ್ಯ, ಮಾದಾರ ಚೆನ್ನಯ್ಯ, ದೋಹರ ದಕ್ಕಯ್ಯ ಮುಂತಾದವರು ಇಷ್ಟಲಿಂಗದ ಮೂಲಕ ಜನರನ್ನು ಬೆಸೆದರು. ಭಾರತದ ಮೇಲೆ ಬ್ರಿಟಿಷರ ದಾಳಿಯಾದಾಗ ರಾಣಿ ಅಬ್ಬಕ್ಕ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮರಂಥ ಹೋರಾಟಗಾರರು ದಾಸ್ಯದಿಂದ ಮುಕ್ತಿ ಮಾಡಲು ಜೀವತ್ಯಾಗ ಮಾಡಿದ್ದರು. ಇವೆಲ್ಲವೂ ಕರ್ನಾಟಕದ ಶ್ರೇಷ್ಠತೆಯನ್ನು ಸಾರಿ ಹೇಳುತ್ತವೆ ಎಂದರು.

ಲಂಡನ್​ನಲ್ಲಿ ಬಸವೇಶ್ವರರ ಪ್ರತಿಮೆ ಅನಾವರಣ ಮಾಡುವ ಭಾಗ್ಯ ನನಗೆ ಒಲಿದುಬಂತು. ಕರ್ನಾಟಕದ ವಿಚಾರ ಮತ್ತು ಪ್ರಭಾವ ಸದಾ ಶಾಶ್ವತವಾಗಿರುವಂಥದ್ದು. ಬೆಳಗ್ಗೆ ನಾನು ಜರ್ಮನ್ ಚಾನ್ಸಲರ್ ಅವರನ್ನು ಭೇಟಿ ಮಾಡಿದ್ದೆ. ಭಾನುವಾರ ಅವರು ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಕರ್ನಾಟಕದ ಮಹತ್ವ ಏನೆಂಬುದು ಇಲ್ಲೇ ಗೊತ್ತಾಗುತ್ತದೆ ಎಂದು ಹೇಳಿದರು.

ಸಂಘಕ್ಕೆ ಕಿವಿಮಾತು: ಕರ್ನಾಟಕ ಸಂಘ ದೆಹಲಿಯ ಕನ್ನಡಿಗ ಮಕ್ಕಳಿಗೆ ಕನ್ನಡ ಕಲಿಸಲು ಮುಂದಾಗಬೇಕು. ನಿಮ್ಮ ಲೈಬ್ರೆರಿಯನ್ನು ಇದಕ್ಕೆ ಬಳಸಿಕೊಳ್ಳಬೇಕು. ಕನ್ನಡ ಕಲಿಸುವುದು ನಮ್ಮ ಜವಾಬ್ದಾರಿ ಎಂದು ಭಾವಿಸಿ ಈ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ಕರ್ನಾಟಕ ಸಂಘಕ್ಕೆ ಬರುವ ಪ್ರತಿ ಕನ್ನಡಿಗ ಕುಟುಂಬ ತಮ್ಮೊಂದಿಗೆ ಇತರೆ ಭಾಷಿಕರನ್ನು ಕರೆತಂದು ಅವರಿಗೆ ಕನ್ನಡ ಕಲಿಸಬೇಕು. ಆ ಮೂಲಕ ಕನ್ನಡದ ಭಾಷೆ ಎಷ್ಟೊಂದು ಸೊಗಸಾಗಿದೆ ಎಂದು ಇತರರಿಗೆ ಗೊತ್ತು ಮಾಡಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

ಇಡೀ ಭಾರತದಲ್ಲಿ ಕರ್ನಾಟಕ ಸಿರಿಧಾನ್ಯಗಳ ಪ್ರಮುಖ ಕೇಂದ್ರ. ಅಕ್ಕಿ, ರಾಗಿ ಕರ್ನಾಟಕದ ಸಾಮಾಜಿಕ ಗುರುತಾಗಿದೆ. ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗಲೇ ಸಿರಿಧಾನ್ಯಕ್ಕೆ ಉತ್ತೇಜನ ನೀಡುವ ಕೆಲಸ ಶುರು ಮಾಡಿದ್ದರು. | ನರೇಂದ್ರ ಮೋದಿ ಪ್ರಧಾನಮಂತ್ರಿ

ಮೋದಿ ಕನ್ನಡಪ್ರೀತಿ: ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ರಾಜ್ಯದಲ್ಲಿ ವಿಪಕ್ಷಗಳು ಹಾಗೂ ಕೆಲ ಕನ್ನಡ ಹೋರಾಟಗಾರರು ಆರೋಪ ಮಾಡುತ್ತಿರುವ ಮಧ್ಯೆ ಕರ್ನಾಟಕ ಹಾಗೂ ಕನ್ನಡದ ಬಗ್ಗೆ ಪ್ರಧಾನಿ ಅಭಿಮಾನ ವ್ಯಕ್ತಪಡಿಸಿದ್ದು ದೆಹಲಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಯಿತು. ಕನ್ನಡ ಓದು, ಕಲಿಕೆ, ಸಾಹಿತ್ಯದಿಂದ ಜ್ಞಾನದ ಹರಿವು ಹಾಗೂ ಭಾಷೆಯ ಮಹತ್ವದ ಬಗ್ಗೆ ಅನ್ಯ ಭಾಷಿಕರಲ್ಲೂ ಅರಿವು ಮೂಡಿಸಬೇಕು ಎಂದು ಪ್ರಧಾನಿ ಸಲಹೆ ನೀಡುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂಬ ಮಾತುಗಳು ಕೇಳಿಬಂದವು. ದೆಹಲಿಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಭಾಗಿಯಾಗಿದ್ದು ಇದೇ ಮೊದಲು. ಈ ಸಂದರ್ಭದಲ್ಲಿ ಅವರು ಸುಮಾರು ಎರಡು ತಾಸು ಕನ್ನಡಿಗರೊಂದಿಗೆ ಕಳೆದದ್ದು ವಿಶೇಷ.

ಸಾಂಸ್ಕೃತಿಕ ಕಾರ್ಯಕ್ರಮ: ಭಾಷಣಕ್ಕೂ ಮುನ್ನ ಸುಮಾರು 40 ನಿಮಿಷಗಳ ಕಾಲ ರಾಜ್ಯದ ವಿವಿಧ ಕಲೆ, ಸಂಸ್ಕೃತಿ ಪರಿಚಯಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದ ಪ್ರಧಾನಿ, 40 ನಿಮಿಷದಲ್ಲಿ ನನಗೆ ಕರ್ನಾಟಕದ ಸಾಂಸ್ಕೃತಿಕ ಯಾತ್ರೆ ಯನ್ನೇ ನೋಡುವ ಭಾಗ್ಯ ಸಿಕ್ಕಿತು ಎಂದು ಸಂತಸ ಹಂಚಿಕೊಂಡರು.

ಕರ್ನಾಟಕಕ್ಕೆ 30 ಸಾವಿರ ಕೋಟಿ ರೂ. ಅನುದಾನ: ಯುಪಿಎ ಸರ್ಕಾರ ತನ್ನ 10 ವರ್ಷಗಳ ಅಧಿಕಾರಾವಧಿಯಲ್ಲಿ ಕರ್ನಾಟಕಕ್ಕೆ ನೀಡಿದ ಒಟ್ಟು ಅನುದಾನ 11 ಸಾವಿರ ಕೋಟಿ ರೂ. ಮಾತ್ರ. ಆದರೆ, ಹಾಲಿ ಕೇಂದ್ರ ಸರ್ಕಾರ 2014ರಿಂದ ಇಲ್ಲಿಯವರೆಗೆ 30 ಸಾವಿರ ಕೋಟಿ ರೂ. ಅನುದಾನ ನೀಡಿರುವುದಲ್ಲದೆ, ಈ ಬಾರಿ ರೈಲ್ವೆ ವಲಯದ ಅಭಿವೃದ್ಧಿಗೆ ಏಳೂವರೆ ಸಾವಿರ ಕೋಟಿಯಷ್ಟು ಹಣ ಹಂಚಿಕೆ ಮಾಡಿದೆ. ರಾಜ್ಯದಲ್ಲಿ ರಸ್ತೆ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲಿ ನೆರವು ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್​ನಲ್ಲಿ ವಿಶೇಷ ಅನುದಾನ ಪ್ರಕಟಿಸಲಾಗಿದೆ. ಹಿಂದಿನ ಕರ್ನಾಟಕ ಸರ್ಕಾರಗಳು ರಾಜ್ಯದ ಹಣವನ್ನು ವಿದೇಶಕ್ಕೆ ಕೊಂಡೊಯ್ಯುತ್ತಿದ್ದವು. ಆದರೆ, ಈಗ ಭಾರತದಲ್ಲೇ ಹೂಡಿಕೆ ಮಾಡುವ ಸನ್ನಿವೇಶ ನಿರ್ಮಾಣ ಮಾಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ರಾಜಧಾನಿಯಲ್ಲಿ ಕನ್ನಡದ ಕಂಪು: ದೂರದ ದೆಹಲಿಯಲ್ಲಿ ಕನ್ನಡದ ಕಂಪು ಬಹಳ ಅದ್ಭುತವಾಗಿ ಕಾಣಿಸುತ್ತಿದೆ. ದಿಲ್ಲಿ ಕನ್ನಡಿಗರ ಉತ್ಸಾಹ ಖುಷಿ ಕೊಟ್ಟಿದೆ. ಕನ್ನಡ ನಾಡಿನಲ್ಲಿ ಹುಟ್ಟುವುದೇ ಸೌಭಾಗ್ಯ. ಈ ಭಾಗ್ಯ ಪಡೆದಿರುವ ನಾವೆಲ್ಲರೂ ಪೂರ್ವಜನ್ಮದ ಪುಣ್ಯವಂತರು ಎಂದು ಸಿಎಂ ಬೊಮ್ಮಾಯಿ ಹೇಳಿದರು. ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಿಸರ್ಗ ನಮಗೆ ಬಹಳ ಶ್ರೀಮಂತಿಕೆಯನ್ನು ಕೊಟ್ಟಿದೆ. ಪಶ್ಚಿಮ ಘಟ್ಟದಿಂದ ಹರಿಯುವ ನದಿಗಳು ಕನ್ನಡ ನಾಡನ್ನು ಕೃಷಿ, ಸಂಸ್ಕೃತಿಯಲ್ಲಿ ಶ್ರೀಮಂತಗೊಳಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಐದು ಟ್ರಿಲಿಯನ್ ಡಾಲರ್ ಕನಸಿಗೆ, ಕರ್ನಾಟಕ ಬರುವ ವರ್ಷದಲ್ಲಿ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಸಹಕಾರ ನೀಡಲಿದೆ. ಮುಂದಿನ ವರ್ಷ ದಾವಣಗೆರೆ ಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಪ್ರಧಾನಿ ಅವರಿಗೆ ಈ ವೇದಿಕೆ ಮೂಲಕ ಆಹ್ವಾನ ನೀಡುತ್ತಿದ್ದೇನೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಸಂಕಲ್ಪ ಯಶಸ್ವಿಯಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net