

ಉತ್ತರಕನ್ನಡ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಮನೆಯ ನಾಲ್ವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. ಅದರಲ್ಲೂ ನಾಲ್ಕು ಕೊಲೆಗಳ ಆರೋಪಿಯ ತಾಯಿ ಇಂದು ತಮ್ಮ ಪುತ್ರನ ಕುರಿತು ಮಾಧ್ಯಮಗಳ ಜತೆ ಮಾತನಾಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ನಿನ್ನೆ ಈ ಕೊಲೆ ನಡೆದಿದೆ. ಶಂಭು ಭಟ್ (65), ಅವರ ಪತ್ನಿ ಮಾದೇವಿ ಭಟ್ (40), ಪುತ್ರ ರಾಜೀವ್ ಭಟ್ (34) ಹಾಗೂ ಸೊಸೆ ಕುಸುಮಾ ಭಟ್ (30) ಕೊಲೆಯಾದವರು. ಮನೆಯ ಹೊರಗಡೆ ನಾಲ್ವರ ಶವ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಶಂಭು ಭಟ್ ಅವರ ಹಿರಿಯ ಸೊಸೆ ವಿದ್ಯಾ ಭಟ್ ಸಹೋದರ ವಿನಯ್ ಈ ಕೊಲೆ ಮಾಡಿದ್ದ ಎನ್ನಲಾಗಿದೆ.
ಅಳಿಯ ತೀರಿ ಹೋದ ಬಳಿಕ ಆಗಾಗ ಗಲಾಟೆ ಆಗುತ್ತಿದ್ದು, ನನ್ನ ಮಗಳಿಗೆ ಸರಿಯಾಗಿ ಆಸ್ತಿ ನೀಡಿರಲಿಲ್ಲ. ಪಂಚರ ಸಮಕ್ಷಮದಲ್ಲಿ ಒಂದು ಎಕರೆ ಎಂಟು ಗುಂಟೆ ಜಾಗ ನೀಡಿದ್ದರು ಎಂದಿರುವ ಲಲಿತಾ, ಪುತ್ರ ವಿನಯ್ ಹಾಗೂ ಪತಿ ಶ್ರೀಧರ್ ಭಟ್ ನಿನ್ನೆ ಬೆಳಗ್ಗೆ 10 ಗಂಟೆಗೆ ಮನೆಯಿಂದ ಹೋಗಿದ್ದಾಗಿ ತಿಳಿಸಿದ್ದಾರೆ.
ಮಧ್ಯಾಹ್ನ 4-30ಕ್ಕೆ ಮನೆಗೆ ಬಂದ ಮಗ ಮತ್ತು ಪತಿ ಕೊಲೆಯ ವಿಷಯ ತಿಳಿಸಿದಾಗ ಪೊಲೀಸರಿಗೆ ಶರಣಾಗಿ ಎಂದು ಹೇಳಿದ್ದೆ. ಆದರೆ ಪೊಲೀಸರು ಹೊಡೆಯುತ್ತಾರೆಂದು ಮನೆಯಿಂದ ಹೋಗಿದ್ದಾರೆ. ಕರೆ ಮಾಡಿ ಮಾತನಾಡಲು ಪ್ರಯತ್ನಿಸಿದರೂ ಮೊಬೈಲ್ಫೋನ್ ಸ್ವಿಚ್ಡ್ ಆಫ್ ಬರುತ್ತಿದೆ ಎಂದು ತಾಯಿ ಲಲಿತಾ ಹೇಳಿದ್ದರೆ, ಈ ಘಟನೆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದ ಆರೋಪಿ ವಿನಯ್ ಪತ್ನಿ ತಿಳಿಸಿದ್ದಾರೆ.