

ಬೆಂಗಳೂರು: ನಗರದಲ್ಲಿ 18 ವರ್ಷ ತುಂಬಿದ ಯುವಕ- ಯುವತಿಯರನ್ನು ಮತದಾರರ ಪಟ್ಟಿಗೆ ನೋಂದಣಿ ಮಾಡುವ ಉದ್ದೇಶದಿಂದ ಬಿಬಿಎಂಪಿ ವತಿಯಿಂದ ಜಾಗೃತಿ ಅಭಿಯಾನ ನಡೆಯತ್ತಿದೆ.
ಇದರ ಅಂಗವಾಗಿ ಶನಿವಾರ ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಪಾರ್ಟ್‌ಮೆಂಟ್, ರಾಗಿ ಗುಡ್ಡ ಬಳಿಯ ಕೊಳೆಗೇರಿ ಪ್ರದೇಶ, ಕಾರ್ಪೊರೇಷನ್ ಕಾಲನಿ ಸೇರಿ ಇತರ ಪ್ರದೇಶಗಳಿಗೆ ದಕ್ಷಿಣ ವಲಯದ ಉಪ ಆಯುಕ್ತೆ ಲಕ್ಷ್ಮೀದೇವಿ ನೇತೃತ್ವದಲ್ಲಿ ಮತದಾರ ನೋಂದಣಾಧಿಕಾರಿ ತಂಡ ಭೇಟಿ ನೀಡಿ ಜಾಗೃತಿ ಮೂಡಿಸಿತು.
ಬಸ್ ತಂಗುದಾಣ, ಜಂಕ್ಷನ್ ಮತ್ತು ಕಾಲೇಜುಗಳಿಗೆ ಭೇಟಿ ನೀಡಿ 18 ವರ್ಷ ತುಂಬಿದ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದೇ ಇರುವ ಯುವಕ-ಯುವತಿಯರು ತಮ್ಮ ಮೊಬೈಲ್ಫೋನ್ನಲ್ಲಿ ವೋಟರ್ ಹೆಲ್ಪ್‌ಲೈನ್ ತಂತ್ರಾಂಶ ಅಥವಾ http://www.nvsp.in ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ಅಲ್ಲದೆ, ಪಾಲಿಕೆಯ ಕಂದಾಯ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪೂರಕ ದಾಖಲೆ ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬಹುದು.
ಕೇಂದ್ರ ಚುನಾವಣಾ ಆಯೋಗದ ‘ನನ್ನ ಮತ ನನ್ನ ಹಕ್ಕು’ ಘೋಷವಾಕ್ಯದಡಿ ಎಲ್ಲ ಯುವ ಮತದಾರರು ಮತ ಚಲಾಯಿಸಬೇಕೆಂಬ ಉದ್ದೇಶದಿಂದ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ.
ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಮತ್ತು ಆಟೋಗಳಲ್ಲಿ ಧ್ವನಿವರ್ಧಕ ಮೂಲಕ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಲು ಅರಿವು ಮೂಡಿಸಲಾಗುತ್ತಿದೆ. ಇದರ ಅವಕಾಶವನ್ನು ಯುವ ಮತದಾರರು ಬಳಸಿಕೊಳ್ಳಬೇಕೆಂದು ಲಕ್ಷ್ಮೀದೇವಿ ಕೋರಿದ್ದಾರೆ.