'ಬಿಜೆಪಿ ಪ್ರಣಾಳಿಕೆಗೆ ಸಲಹೆ ನೀಡಿ..'ಯುವಜನತೆಗೆ ಪ್ರಧಾನಿ ಮೋದಿ ಸಲಹೆ

modi
Published on

ನವದೆಹಲಿ: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೊಮ್ಮೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ತನ್ನ ಮೊದಲ ಅಭಿಯಾನ ಆರಂಭಿಸಿದೆ. 2024ರ ಪಕ್ಷದ ಪ್ರಣಾಳಿಕೆ ಹೇಗಿರಬೇಕು ಎನ್ನುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಕರ ಸಲಹೆ ಕೇಳಿದ್ದಾರೆ.

ಗುರುವಾರ ಬೆಳಗ್ಗೆ ದೆಹಲಿಯಿಂದಲೇ ವರ್ಚುವಲ್‌ ಆಗಿ ನಮೋ ನವಮತದಾರರ ಕಾರ್ಯಕ್ರಮ ಉದ್ಘಾಟಿಸಿದ ಅವರು, "18 ರಿಂದ 25 ರ ನಡುವಿನ ವಯಸ್ಸು ಯುವಕರ ಜೀವನವನ್ನು ರೂಪಿಸುತ್ತದೆ. ಅವರು ತಮ್ಮ ಜೀವನದಲ್ಲಿ ಕ್ರಿಯಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಾರೆ. ಈ ಬದಲಾವಣೆಗಳ ಜೊತೆಗೆ ಅವರು ವಿವಿಧ ಜವಾಬ್ದಾರಿಗಳ ಭಾಗವಾಗುತ್ತಾರೆ. ಈ ಅಮೃತ ಕಾಲದ ಸಮಯದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬಲಪಡಿಸುವುದು ಯುವಜನರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಮುಂದಿನ 25 ವರ್ಷ ಭಾರತ ಮತ್ತು ಅದರ ಯುವಜನತೆ ನಿರ್ಣಾಯಕ ಪಾತ್ರವಹಿಸಬೇಕಿದೆ. 2047 ರ ವೇಳೆಗೆ ವಿಕಸಿತ ಭಾರತವನ್ನಾಗಿ ಪರಿವರ್ತಿಸುವುದು ಯುವಜನರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇದೇ ಕಾರ್ಯಕ್ರಮದಲ್ಲಿ ಹೊಸ ಅಭಿಯಾನವನ್ನು ಪ್ರಾರಂಭಿಸಲಾಯಿತು. 2024 ರ ಚುನಾವಣೆಗಾಗಿ ಬಿಜೆಪಿಯ ಪ್ರಣಾಳಿಕೆಗೆ ತಮ್ಮ ಸಲಹೆಗಳನ್ನು ನೀಡುವಂತೆ ಯುವಕರನ್ನು ಪ್ರಧಾನಿ ವಿನಂತಿಸಿದರು.

ಇದು ಮುಗಿಯುತ್ತಿದ್ದಂತೆ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯ ಭಾಗವಾಗಿ ದೇಶದ ಸೋಲಾರ್‌ ಪಾಲಿಸಿಯ ಸಭೆಯಲ್ಲಿ ಭಾಗಿಯಾಗಿದ್ದರು. ದೇಶದ 1 ಕೋಟಿ ಮನೆಗಳಲ್ಲಿ ಸೋಲಾರ್‌ ಪ್ಯಾನೆಲ್‌ ಅಳವಡಿಸುವ ಮೂಲಕ ಅವರನ್ನು ವಿದ್ಯುತ್‌ ಸ್ವಾವಲಂಬಿಯನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾದ ಬೆನ್ನಲ್ಲಿಯೇ ಅವರು ಈ ಯೋಜನೆಯನ್ನು ಘೋಷಣೆ ಮಾಡಿದರು. ಇದರ ಕುರಿತಾದ ಸಭೆಯಲ್ಲಿ ಗುರುವಾರ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net