ಷೇರು ಮಾರುಕಟ್ಟೆಯಲ್ಲಿ ಸೆನೆಕ್ಸ್‌, ನಿಫ್ಟಿ ಕುಸಿತ: ಋಣಾತ್ಮಕ ಪರಿಣಾಮ ಬೀರಿದ ವಿದೇಶಿ ನಿಧಿಗಳ ಹೊರಹರಿವು!

Stock Market
Published on

ಮುಂಬೈ: ಭಾರತದ ಷೇರು ಮಾರುಕಟ್ಟೆಯು ಗುರುವಾರ (ಜ.25) ಮುಕ್ತಾಯದ ವೇಳೆಗೆ ಇಳಿಮುಖವಾಗುವ ಮೂಲಕ ವಹಿವಾಟು ಮುಗಿಸಿದೆ. ಪವರ್‌, ಬ್ಯಾಂಕಿಂಗ್‌, ಎಫ್‌ಎಂಸಿಜಿ ಹಾಗೂ ಹೆಲ್ತ್‌ಕೇರ್‌ ಸೂಚ್ಯಂಕಗಳು ಇಳಿಕೆ ಕಂಡಿವೆ.

ಷೇರು ಮಾರುಕಟ್ಟೆಯಲ್ಲಿ ಗುರುವಾರ ಮುಕ್ತಾಯದ ವೇಳೆಗೆ ಮಂಕಾಯಿತು. ದಿನದಾರಂಭದಲ್ಲೂ ಹೇಳಿಕೊಳ್ಳುವ ಗಳಿಕೆ ಇಲ್ಲದೆ, ನೀರಸವಾಗಿಯೇ ಆರಂಭ ಕಂಡಿತ್ತು. ಬಹುತೇಕ ವಲಯದ ಷೇರುಗಳಲ್ಲಿ ಕುಸಿತ ಕಂಡುಬಂದಿತು. ಸೆನ್ಸೆಕ್ಸ್‌ ಹಾಗೂ ನಿಫ್ಟಿ ಎರಡೂ ಇಳಿಕೆ ಕಾಣುವ ಮೂಲಕ ದಿನದ ವಹಿವಾಟು ಮುಗಿಸಿವೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್‌ ವಲಯದ ಷೇರುಗಳು ಕುಸಿತ ಕಾಣುತ್ತಿರುವುದು ಆಘಾತಕಾರಿ ವಿಷಯವಾಗಿದೆ.

ಸೆನ್ಸೆಕ್ಸ್ 359.64 ಅಂಕ ಅಥವಾ 0.51 ರಷ್ಟು ಕುಸಿದು 70,700.67 ಕ್ಕೆ ತಲುಪಿದೆ ಮತ್ತು ನಿಫ್ಟಿ 75.80 ಅಂಕ ಅಥವಾ 0.35 ರಷ್ಟು ಕುಸಿದು 21,378.20 ಕ್ಕೆ ತಲುಪಿದೆ. ಇದರ ಜತೆಗೇ ಗುರುವಾರ ಸುಮಾರು 1811 ಷೇರುಗಳು ಲಾಭಗಳಿಸಿದವು. 1422 ಷೇರುಗಳು ನಷ್ಟ ಕಂಡರೆ, 56 ಷೇರುಗಳು ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿದ್ದವು.

ಷೇರು ಮಾರುಕಟ್ಟೆಯ ಮುಂಚೂಣಿ ಸೂಚ್ಯಂಕಗಳಾದ ಸೆನೆಕ್ಸ್‌ ಹಾಗೂ ನಿಫ್ಟಿ ಬ್ಯಾಂಕಿಂಗ್‌, ಎಫ್‌ಎಂಸಿಜಿ ಹಾಗೂ ಐಟಿ ಷೇರುಗಳು ಕುಸಿತದಿಂದ ನಷ್ಟ ಅನುಭವಿಸಿದವು.

ಇಂದಿನ ವಹಿವಾಟಿನಲ್ಲಿ ಮಿಡ್‌ಕ್ಯಾಪ್‌ ಸೂಚ್ಯಂಕಗಳು ಫ್ಲ್ಯಾಟ್‌ ಆಗಿ ವಹಿವಾಟು ಮುಗಿಸಿದ್ದರೆ, ಸ್ಮಾಲ್‌ಕ್ಯಾಪ್‌ ಸೂಚ್ಯಂಕವು ಮೇಲುಗೈ ಸಾಧಿಸಿದೆ. ರಿಯಾಲ್ಟಿ ಹೊರತು ಪಡಿಸಿದರೆ ಬಹುತೇಕ ಎಲ್ಲಾ ವಲಯಗಳು ಕೆಂಪಾಗಿದ್ದವು.

ದೇಶೀಯ ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ನಿಧಿಗಳ ನಿರಂತರ ಹೊರಹರಿವು ಕಳೆದೊಂದು ವಾರದಿಂದ ಭಾರತದ ಮಾರುಕಟ್ಟೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಜನವರಿಯಲ್ಲಿ ಇದುವರೆಗೆ ರೂ 33,000 ಕೋಟಿಗಿಂತ ಹೆಚ್ಚು ಮೌಲ್ಯದ ಸ್ಥಳೀಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ವಲಯಗಳು ಹಾಗೂ ಕಂಪನಿಗಳ ತ್ರೈಮಾಸಿಕ ಆದಾಯದಲ್ಲಿನ ಮಿಶ್ರ ಪ್ರತಿಕ್ರಿಯೆ, ತೈಲ ಬೆಲೆ ಏರಿಕೆ ಹೀಗೆ ಹಲವು ವಿಚಾರಗಳು ಮಾರುಕಟ್ಟೆಯ ತಲ್ಲಣಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net