ಪಿಎಂ ಕಿಸಾನ್ ಹಣ 18ರಂದು ಬಿಡುಗಡೆ

Untitled-design-5-4
Published on

ನವದೆಹಲಿ: ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 18ರಂದು ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರು ಪಿಎಂ ಕಿಸಾನ್ ಯೋಜನೆಯ 17ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ದೇಶಾದ್ಯಂತ 9.26 ಕೋಟಿ ಫಲಾನುಭವಿ ರೈತರಿಗೆ 20,000 ಕೋಟಿ ರೂ. ಮೊತ್ತದ ಹಣ ಈ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

ಕೃಷಿ ಪದ್ಧತಿಗಳೊಂದಿಗೆ ಸಹವರ್ತಿ ರೈತರನ್ನು ಬೆಂಬಲಿಸುವ, ಅರೆ ವಿಸ್ತರಣಾ ಕಾರ್ಯಕರ್ತರಾಗಿ ಕೆಲಸ ಮಾಡಲು ‘ಕೃಷಿ ಸಖಿಗಳು’ ಎಂದು ತರಬೇತಿ ಪಡೆದಿರುವ ಸ್ವಸಹಾಯ ಗುಂಪುಗಳ 30,000ಕ್ಕೂ ಹೆಚ್ಚು ಸದಸ್ಯರಿಗೆ ಮೋದಿ ಪ್ರಮಾಣಪತ್ರಗಳನ್ನು ಈ ಸಂದರ್ಭದಲ್ಲಿ ನೀಡಲಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಂಗ್ ಚೌಹಾಣ್ ಅವರು ಕೃಷಿ ಕ್ಷೇತ್ರಕ್ಕೆ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು. ಕಳೆದ ಎರಡು ಅಧಿಕಾರಾವಧಿಯಲ್ಲಿ ಪ್ರಧಾನಿಗೆ ಕೃಷಿ ಯಾವಾಗಲೂ ಆದ್ಯತೆಯಾಗಿದೆ. ಅವರು ರೈತರ ಹಿತದೃಷ್ಟಿಯಿಂದ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು. ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಮೋದಿ ಅವರು ಮೊದಲು ಪಿಎಂ ಕಿಸಾನ್ ಯೋಜನೆಯ 17ನೇ ಕಂತು ಬಿಡುಗಡೆಗೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಿದರು ಎಂದು ಚೌಹಾಣ್ ಹೇಳಿದರು. 2019ರಲ್ಲಿ ಪ್ರಾರಂಭವಾದ, ಪಿಎಂ ಕಿಸಾನ್ ಯೋಜನೆಯು ನೇರ ಲಾಭ ವರ್ಗಾವಣೆ ಉಪಕ್ರಮವಾಗಿದ್ದು, ಇದರ ಅಡಿಯಲ್ಲಿ ಫಲಾನುಭವಿ ರೈತರು ತಮ್ಮ ಹಣಕಾಸಿನ ಅಗತ್ಯಗಳಿಗೆ ಪೂರಕವಾಗಿ ಮೂರು ಸಮಾನ ಕಂತುಗಳಲ್ಲಿ ವಾರ್ಷಿಕ 6,000 ರೂಪಾಯಿಗಳನ್ನು ಪಡೆಯುತ್ತಾರೆ.

ಯೋಜನೆ ಪ್ರಾರಂಭವಾದಾಗಿನಿಂದ ದೇಶಾದ್ಯಂತ 11 ಕೋಟಿಗೂ ಹೆಚ್ಚು ರೈತರಿಗೆ ಕೇಂದ್ರವು 3.04 ಲಕ್ಷ ಕೋಟಿ ರೂಪಾಯಿಗಳನ್ನು ವಿತರಿಸಿದೆ. ಸರ್ಕಾರವು ಕೃಷಿ ಕ್ಷೇತ್ರಕ್ಕಾಗಿ 100 ದಿನಗಳ ಯೋಜನೆ ಸಿದ್ಧಪಡಿಸುತ್ತಿದೆ, ರೈತರ ಕಲ್ಯಾಣ ಮತ್ತು ದೇಶದ ಕೃಷಿ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಚೌಹಾಣ್ ತಿಳಿಸಿದರು.

ಭಾರತದ ಅತಿದೊಡ್ಡ ಐಪಿಒ

ದಕ್ಷಿಣ ಕೊರಿಯಾದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈನ ಭಾರತೀಯ ಅಂಗವಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್​ಎಂಐಎಲ್) ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಪ್ರಾರಂಭಿಸಲು ಸೆಬಿಗೆ ಪ್ರಾಥಮಿಕ ದಾಖಲೆಗಳನ್ನು ಸಲ್ಲಿಸಿದೆ.

ಎಲ್​ಐಸಿಯ ಐಪಿಒದಲ್ಲಿ 21,000 ಕೋಟಿ ರೂ. ಮೊತ್ತದ ಷೇರುಗಳನ್ನು ಮಾರಾಟ ಮಾಡಲಾಗಿತ್ತು. ಈಗ ಬರುತ್ತಿರುವ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಐಪಿಒ ಈ ಮೊತ್ತವನ್ನು ಮೀರಿಸಿ, ಭಾರತದ ಅತಿದೊಡ್ಡ ಐಪಿಒ ಆಗಲಿದೆ. ಹ್ಯುಂಡೈ ಮೋಟಾರ್ ಐಪಿಒದಲ್ಲಿ 14,21,94,700 ಇಕ್ವಿಟಿ ಷೇರುಗಳನ್ನು ಮಾರಾಟಕ್ಕೆ ಒದಗಿಸಲಾಗುತ್ತಿದೆ. ಹ್ಯುಂಡೈ ಮೋಟಾರ್ ಕಂಪನಿಯು ಈ ಐಪಿಒ ಮೂಲಕ ಕನಿಷ್ಠ 3 ಶತಕೋಟಿ ಡಾಲರ್ (ಅಂದಾಜು 25,000 ಕೋಟಿ ರೂ.) ಸಂಗ್ರಹಿಸಲು ಉದ್ದೇಶಿಸಿದೆ. ಈ ಹಣ ಸಂಗ್ರಹದಿಂದ ಕಂಪನಿಯ ಪಾಲು 15-20ರಷ್ಟು ಕಡಿಮೆಯಾಗಬಹುದು ಎಂದು ಮೂಲಗಳು ತಿಳಿಸಿವೆ. ಮಾರುತಿ ಸುಜುಕಿ ಇಂಡಿಯಾದ ನಂತರ ಭಾರತದಲ್ಲಿ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿದೆ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net