

ಕೊಚ್ಚಿ: ಕಳ್ಳತನ ಮಾಡಿದ ಬಳಿಕ ಕೆಲವೊಮ್ಮೆ ತನ್ನ ತಪ್ಪಿನ ಅರಿವಾಗಿ ಕಳ್ಳ, ಕ್ಷಮಾಪಣೆ ಪತ್ರ ಬರೆದಿಟ್ಟು ಹೋಗುವಂತಹ ಪ್ರಸಂಗಗಳನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ, ಈ ವಿಚಿತ್ರ ಪ್ರಕರಣದಲ್ಲಿ ಅಪರಿಚಿತನೊಬ್ಬ ರಸ್ತೆ ಪಕ್ಕದ ಬೈಕ್ನಲ್ಲಿ ಪೆಟ್ರೋಲ್ ಕದ್ದು ಕ್ಷಮೆಯಾಚಿಸಿದ್ದಾನೆ.
ಕ್ಷಮೆಯಾಚಿಸಿ ಪತ್ರ ಬರೆದಿರುವುದಲ್ಲದೆ, ಬೈಕ್ ಮಾಲೀಕನಿಗೆ ಐದು ರೂಪಾಯಿಯ ಎರಡು ನಾಣ್ಯಗಳನ್ನು ಇಟ್ಟು ಹೋಗಿದ್ದಾನೆ. ಅಪರಿಚಿತ ಬರೆದಿರುವ ಪತ್ರದ ಸ್ಕ್ರೀನ್ಶಾಟ್ ಅನ್ನು ಬೈಕ್ ಮಾಲೀಕ ಅರುಣ್ಲಾಲ್ ಎಂಬುವರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಶೇರ್ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿವರಣೆಗೆ ಬರುವುದಾದರೆ, ಅರುಣ್ಲಾಲ್ ಎಂಬುವರು ಕೋಯಿಕ್ಕೋಡ್ ಬೈಪಾಸ್ನಲ್ಲಿ ತಮ್ಮ ಬುಲೆಟ್ ಅನ್ನು ಪಾರ್ಕ್ ಮಾಡಿ, ಎಲ್ಲೋ ಹೋಗಿದ್ದರು. ವಾಪಸ್ ಬಂದು ನೋಡುವಾಗ ಬುಲೆಟ್ ಮೇಲೆ ಇದ್ದ ಪತ್ರ ಮತ್ತು ಐದು ರೂಪಾಯಿ ಎರಡು ನಾಣ್ಯಗಳನ್ನು ನೋಡಿದ್ದಾರೆ.
ಪತ್ರವನ್ನು ಓದಿದಾಗ, ನಾನು ನಿಮ್ಮ ವಾಹನದಲ್ಲಿ ಒಂದಿಷ್ಟು ಪೆಟ್ರೋಲ್ ತೆಗೆದುಕೊಂಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ನನಗೆ ಬೇರಿ ದಾರಿ ಇರಲಿಲ್ಲ. ನಾವು 10 ರೂಪಾಯಿಯನ್ನು ಬೈಕ್ನಲ್ಲಿ ಇಟ್ಟಿದ್ದೆವು. ಪೆಟ್ರೋಲ್ ಬಂಕ್ಗಳಲ್ಲಿ ಬಾಟಲ್ಗೆ ಪೆಟ್ರೋಲ್ ಕೊಡದಿರುವುದರಿಂದ ಪೆಟ್ರೋಲ್ ಪಂಪ್ ತಲುಪಲು ನಮಗೆ ಬೇರೆ ದಾರಿ ಕಾಣಲಿಲ್ಲ ಎಂದು ಬರೆದಿದ್ದಾರೆ.
ಇದೀಗ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬಗೆ ಬಗೆಯ ಕಾಮೆಂಟ್ಗಳನ್ನು ಹರಿಬಿಡುತ್ತಿದ್ದಾರೆ. ಈ ಸ್ಟೋರಿ ಓದಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)