ನೀರಾವರಿಗೆ ಶಾಶ್ವತ ಪರಿಹಾರ; ದಿಗ್ವಿಜಯ ನ್ಯೂಸ್ ಸ್ಟುಡಿಯೋದಲ್ಲಿ ಜಲವ್ಯಾಜ್ಯ ಇತ್ಯರ್ಥದ ಬದ್ಧತೆ ಪ್ರದರ್ಶಿಸಿದ ಸಿಎಂ

CM Front
Published on

ಬೆಂಗಳೂರು: ರಾಜ್ಯದ ನೀರಾವರಿ ವಿಚಾರದಲ್ಲಿ ತುಸು ಹೆಚ್ಚೇ ವಿಶೇಷ ಒಲವು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮ್ಮ ಆಡಳಿತಾವಧಿಯಲ್ಲಿ ವಿವಿಧ ಪ್ರಮುಖ ಯೋಜನೆಗಳ ಕಗ್ಗಂಟನ್ನು ಬಿಡಿಸಲು ಕಾರ್ಯತಂತ್ರದ ಮೂಲಕ ಕಾರ್ಯೋನ್ಮುಖರಾಗಿದ್ದಾರೆ. ಭಾನುವಾರ ದಿಗ್ವಿಜಯ ನ್ಯೂಸ್ 247 ಕಚೇರಿಗೆ ಭೇಟಿ ನೀಡಿದ್ದ ಬೊಮ್ಮಾಯಿ, ನಾಡಿನ ನೀರಾವರಿ ಯೋಜನೆಗಳ ಮೇಲೆ ಕವಿದಿರುವ ಸಮಸ್ಯೆಗಳ ಬಗ್ಗೆ ತಮಗಿರುವ ಅಧ್ಯಯನ, ಕಾಳಜಿ, ಬದ್ಧತೆಯನ್ನು ಜನರ ಮುಂದೆ ಬಿಚ್ಚಿಟ್ಟರು. ಕೃಷ್ಣ, ಮಹದಾಯಿ ಮೇಕೆದಾಟು ಯೋಜನೆಗಳಿಗೆ ಸಂಬಂಧಿಸಿದ ಅಂತಾರಾಜ್ಯ ಜಲವಿವಾದಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಖಚಿತ ಭರವಸೆ ನೀಡಿದರು.

ತಮ್ಮ ತಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ಗೋವಾಗೆ ವಿದ್ಯುತ್ ನೀಡಿ, ನಾವು ಮಹದಾಯಿ ನೀರು ಬಳಸಿಕೊಳ್ಳುವುದಾಗಿ ಗೋವಾ ಸರ್ಕಾರದೊಂದಿಗೆ ಒಪ್ಪಂದವಾಗಿತ್ತು, ಆದರೆ, ನಂತರ ಬಂದ ಗೋವಾ ಸರ್ಕಾರಗಳು ಒಪ್ಪಿಕೊಳ್ಳಲಿಲ್ಲ. ಹಾಗೆಯೇ, ನಾನು ಮಹದಾಯಿ ನೀರು ಬಳಕೆ ಸಂಬಂಧ 253 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದೆ. ಜನರ ಬಳಿಗೂ ಹೋಗಿದ್ದೆ. ಯಶಸ್ವಿಯೂ ಆಯಿತು. ಅಷ್ಟಕ್ಕೇ ಬಿಡದೆ ಬೆನ್ನು ಹತ್ತಿದ್ದೆ ಎಂದು ನೆನಪಿಸಿಕೊಂಡರು. ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಬಿಎಸ್​ವೈ ಡಿಸಿಎಂ ಆಗಿದ್ದ ವೇಳೆ ಯೋಜನೆಗೆ ಸಂಬಂಧಪಟ್ಟಂತೆ ಅರಣ್ಯೇತರ ಜಾಗದಲ್ಲಿ ಕಾಮಗಾರಿ ಆರಂಭಿಸಲು ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಪ್ರಯತ್ನಿಸಿದೆವು. ಐದೂವರೆ ಕಿಲೋಮೀಟರ್ ಇಂಟರ್ ಲಿಂಕ್ ಚಾನಲ್ ಕೂಡ ಆಯಿತು. ಇನ್ನೊಂದು ವರ್ಷ ಕೆಲಸ ಮುಂದುವರಿಸಿದ್ದರೆ ಕನಿಷ್ಠ ನೀರಾದರೂ ಪ್ರಾಕೃತಿಕವಾಗಿ ಸಿಗುತ್ತಿತ್ತು. ಆದರೆ ಟ್ರಿಬ್ಯುನಲ್ ರಚನೆಯಾಗಿ ವರದಿ ಕೊಡುವುದು ತಡವಾಗಿದ್ದರಿಂದ ನಮಗೆ ದೊಡ್ಡ ಹಿನ್ನಡೆಯಾಯಿತು. ಈಗ ಸುಪ್ರಿಂಕೋರ್ಟ್ನಲ್ಲಿ ಕಾನೂನು ಹೋರಾಟ ನಡೆದಿದೆ. ಎಲ್ಲೂ ಕೇಳರಿಯದ್ದು ದುರ್ದೈವ ಎಂದರೆ ನಾವೇ ಒಪ್ಪಿಕೊಂಡು ಚಾನಲ್​ಗೆ ನಾವೇ ಗೋಡೆ ಕಟ್ಟುವಂತಾಗಿದ್ದು ದುಃಖಕರ ಸಂಗತಿ. ಇದೀಗ ಗೋಡೆ ತೆರವಿಗೆ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಶೀಘ್ರವೇ ಫಾರೆಸ್ಟ್ ಕ್ಲಿಯರೆನ್ಸ್​ಗೆ ಏನು ಬೇಕೋ ಅದನ್ನು ಕೆಲವೇ ದಿನಗಳಲ್ಲಿ ಸಲ್ಲಿಕೆ ಮಾಡುತ್ತೇವೆ ಮತ್ತು ಕೋರ್ಟ್​ನಲ್ಲಿ ತೀವ್ರವಾದ ವಾದ ಮಾಡಬೇಕು, ಗೋಡೆ ತೆಗೆಯಬೇಕು, ಪ್ರಾಕೃತಿಕ ಹರಿವಿಗೆ ಅವಕಾಶ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದೇವೆ, ಈ ಪ್ರಯತ್ನದಲ್ಲಿ ಯಶ ಸಿಗುವ ವಿಶ್ವಾಸವಿದೆ ಎಂದರು.

ಹೋರಾಟ ನಿಲ್ಲದು: ನೀರು ಬಳಸಿಕೊಳ್ಳಲು ಅಧಿಸೂಚನೆ ಆಗಿದೆಯಾದರೂ, ನಾವು ಕ್ಲಿಯರ್ ಮಾಡದೇ ಮುಂದುವರಿಯಬೇಡಿ ಎಂದು ಸುಪ್ರಿಂಕೋರ್ಟ್ ಹೇಳಿದೆ. ಜತೆಗೆ ಬೇರೆ ಬೇರೆ ಸಮಸ್ಯೆ ಇದೆ. ಎಲ್ಲವನ್ನೂ ಒಂದೇ ಬಾರಿಗೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ವಕೀಲರೊಂದಿಗೆ, ಕೇಂದ್ರ ಸಚಿವರೊಂದಿಗೆ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು. ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ನಾವು ಹೋರಾಡುತ್ತೇವೆ, ಅದರಲ್ಲಿ ಯಾವುದೇ ಮುಲಾಜಿಲ್ಲ ಎಂದೂ ಸಹ ಈ ವೇಳೆ ಸ್ಪಷ್ಟಪಡಿಸಿದರು.

ಟ್ರಿಬ್ಯುನಲ್ ಆದೇಶದ ಮೇಲೆ ಕಾಮಗಾರಿ ನಡೆಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಅರಣ್ಯ ಹಾಗೂ ಪರಿಸರ ನಿರಾಕ್ಷೇಪಣೆ ಪಡೆದುಕೊಳ್ಳದೆ ಕಾಮಗಾರಿ ಮಾಡಲು ಸಾಧ್ಯವಿಲ್ಲ. ಅದು ಮೂಲಭೂತ ವಿಚಾರ. ಅದನ್ನು ಡಿಪಿಆರ್ ಪಡೆದು ಪರಿಸರ ಅನುಮತಿ ಪಡೆದು ಕಾಮಗಾರಿ ಪ್ರಾರಂಭ ಮಾಡಲು ಎಲ್ಲ ಕ್ರಮಕೈಗೊಳ್ಳುತ್ತೇವೆ. ಅಂತಾರಾಜ್ಯ ವಿವಾದ ಇರುವುದರಿಂದ ಎಲ್ಲವನ್ನೂ ಇಲ್ಲಿ ಬಹಿರಂಗ ಹೇಳಲು ಆಗಲ್ಲ. ಹೇಳಿದರೆ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಂತಾಗಲಿದೆ. ಇದು ನನ್ನ ಹೋರಾಟ, ಬಗೆಹರಿಸುವುದು ನನ್ನ ಜವಾಬ್ದಾರಿ. ಹೋರಾಟಗಾರರ ಬೇಡಿಕೆ ನ್ಯಾಯಸಮ್ಮತವಾಗಿದೆ. ಅಲ್ಲದೇ ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ, ಖಂಡಿತವಾಗಿ ಅದರ ಲಾಭ ಪಡೆದುಕೊಳ್ಳುತ್ತೇವೆ. ಅಂತಾರಾಜ್ಯ ಜಲ ಕಾನೂನೇ ದೊಡ್ಡ ಕಂಟಕವಾಗಿದೆ. ವಿವಾದ ಸೃಷ್ಟಿಯಾಗುವ ಕಾನೂನಾಗಿದೆ. ಅದೇ ಸಮಗ್ರವಾಗಿ ಬದಲಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಮೇಕೆದಾಟಿಗೆ ತಯಾರಿ: ಮೇಕೆದಾಟು ಯೋಜನೆ ಡಿಪಿಆರ್ ಹಂತದಲ್ಲಿದೆ. ಸಮಗ್ರ ಯೋಜನಾ ವರದಿಗೆ ಒಪ್ಪಿಗೆ ಸಿಗಬೇಕೆಂದರೆ ಕಾವೇರಿ ಮಾನಿಟರಿಂಗ್ ಬೋರ್ಡ್ ಮುಂದೆ ಹೋಗಬೇಕೆಂಬ ಷರತ್ತಿನ ಮೇಲೆ ಡಿಪಿಆರ್ ಮಾಡಲು ಅವಕಾಶ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಸಭೆಯಲ್ಲಿ ಚರ್ಚೆ ಬರುತ್ತದೆ. ಈ ವೇಳೆ ಯಾವೆಲ್ಲ ಒತ್ತಡ ಹಾಕಬೇಕು, ಯಾವ ರೀತಿ ಲಾಬಿ ಮಾಡಬೇಕೆಂದು ಚರ್ಚೆ ಮಾಡಿದ್ದೇವೆ. ಕೇಂದ್ರ ಸಚಿವರೊಂದಿಗೆ ಚರ್ಚೆ ಮಾಡಿದ್ದು, ಅನುಮತಿ ಸಿಗುವ ವಿಶ್ವಾಸವಿದೆ. ಬಳಿಕ ಪರಿಸರ ನಿರಾಕ್ಷೇಪಣಾ ಅನುಮತಿಗೆ ಅಗತ್ಯ ತಯಾರಿ ಮಾಡಿಕೊಳ್ಳುತ್ತೇವೆ ಎಂದರು.

ನೆರೆ ರಾಜ್ಯಗಳ ಮನವೊಲಿಕೆ ಸಾಧ್ಯತೆಯನ್ನು ಪರೋಕ್ಷವಾಗಿ ತಳ್ಳಿಹಾಕಿದ ಅವರು, ಕೆಆರ್​ಎಸ್ ನಿರ್ಮಾಣ ಮಾಡುವಾಗಲೂ ತಮಿಳುನಾಡಿನವರು ವಿರೋಧಿಸಿದ್ದರು. ಇತ್ತೀಚೆಗೆ ಮೇಕೆದಾಟು ವಿಚಾರದಲ್ಲಿ ಚರ್ಚೆ ಮಾಡೋಣ ಎಂದು ಬಿ.ಎಸ್.ಯಡಿಯೂರಪ್ಪನವರು ತಮಿಳುನಾಡಿಗೆ ಪತ್ರ ಬರೆದು ಸ್ಪಷ್ಟ ಮಾಹಿತಿ ಕೊಟ್ಟರೂ ಅಲ್ಲಿನ ಸಿಎಂ ಸ್ಟಾಲಿನ್ ಅವಕಾಶ ತಿರಸ್ಕರಿಸಿದರು. ಹೀಗಿರುವಾಗ ಮಾತುಕತೆ ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ಕಾರಂಜ ಯೋಜನೆಗೆ ಸಂಬಂಧಿಸಿದಂತೆ ಅಲ್ಲಿನ ರೈತರ ಬೇಡಿಕೆಗೆ ಕಿವಿಯಾಗುವ ಭರವಸೆ ನೀಡಿದರು. ರೈತರು ಜಾಗ ಕೊಡದೇ ಇದ್ದರೆ ಡ್ಯಾಂ ನಿರ್ಮಾಣ ಆಗುತ್ತಿರಲಿಲ್ಲ. ಕೆಲವರಿಗೆ ಹೆಚ್ಚಿನ ಪರಿಹಾರ ಬೇಕೆಂಬ ಬೇಡಿಕೆ ಇದೆ. ಅಂತವರಿಗೆ ಕಾನೂನಿನ ಚೌಕಟ್ಟಿನಲ್ಲಿ ಎಕ್ಸ್​ಗ್ರೇಷಿಯಾ ಕೊಡಲು ಸಹಾಯ ಮಾಡುತ್ತೇನೆ ಎಂದರು.

ಬಾಯಾರಿದ ಭೂಮಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಒದಗಿಸುವ ಎತ್ತಿನ ಹೊಳೆ ಯೋಜನೆ ಕುರಿತು ಭೂ ಸ್ವಾಧೀನ ಸಮಸ್ಯೆ ಇದ್ದು, ಒಂದು ತಿಂಗಳೊಳಗೆ ವರದಿ ಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ಭಾಗದಲ್ಲಿನ ಸಮಸ್ಯೆ ಪರಿಹರಿಸಲು ಸಭೆ ಕರೆಯುವವನಿದ್ದೇನೆ. ಇದು ಬಗೆಹರಿದರೆ ಬಹುತೇಕ ಸಮಸ್ಯೆ ಬಗೆಹರಿದಂತೆ ಎಂದರು.

ಚಿತ್ರಮಂದಿರಗಳಿಗೆ ಪೂರ್ಣ ಅವಕಾಶ?

ಚಿತ್ರಮಂದಿರಗಳ ಪೂರ್ಣ ಭರ್ತಿಗೆ ಅವಕಾಶ ನೀಡದೇ ಇದ್ದರೆ ಆಗುವ ಸಮಸ್ಯೆಗಳ ಕುರಿತು ನಟ ಶಿವರಾಜ್ ಕುಮಾರ್ ಕೋರಿಕೆಯನ್ನು ಆಲಿಸಿದ ಸಿಎಂ ತಜ್ಞರ ಜತೆ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಕರೊನಾ ತಗ್ಗಿದೆ, ಆದರೂ ಮೂರನೇ ಅಲೆಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಜತೆಗೆ ವ್ಯಾಕ್ಸಿನ್ ಹೆಚ್ಚಾಗಬೇಕು. ಆಗ ಅವಕಾಶ ಕೊಡಬಹುದು. ಈ ನಿಟ್ಟಿನಲ್ಲಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು. ಚಿತ್ರಮಂದಿರ ಪೂರ್ಣ ಭರ್ತಿಗೆ ಅವಕಾಶ ಕೊಡದೇ ಇದ್ದಲ್ಲಿ ಈ ಉದ್ಯಮ ನಂಬಿದ ಕಲಾವಿದರು, ಚಿತ್ರಕಾರ್ವಿುಕರಿಗೆ ಆಗುವ ಸಮಸ್ಯೆಗಳ ಕುರಿತಂತೆ ಶಿವರಾಜ್ ಕುಮಾರ್ ವಿವರಿಸಿದ್ದರು.

ಸಿಎಂ ಗಮನಕ್ಕೆ ಷರತ್ತಿನ ಶಾಪ

ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ ನೀಡುವ ವಿಷಯದಲ್ಲಿ ಹಾಕಿರುವ ಷರತ್ತಿನಿಂದಾದ ಸಮಸ್ಯೆ ಬಗ್ಗೆ ರೈತರು ಮುಖ್ಯಮಂತ್ರಿಯವರ ಗಮನಕ್ಕೆ ತಂದರು. ಇದಕ್ಕುತ್ತರಿಸಿದ ಸಿಎಂ, ತುರ್ತು ಪರಿಹಾರ ಕೊಡಲಾಗಿದೆ. ಮನೆ ಕಳೆದುಕೊಂಡವರಿಗೂ ಹಣ ಕೊಡಲಾಗಿದೆ. ಮನೆ ಕಟ್ಟಿಕೊಳ್ಳಲು 5 ಲಕ್ಷ ಪರಿಹಾರ ಕೊಡಲು ಬಿಎಸ್​ವೈ ತೀರ್ವನಿಸಿದ್ದರು. ಅದೊಂದು ಭಾಗ. ಕೆಳಹಂತದ ಅಧಿಕಾರಿಗಳು ಸರಿಯಾದ ಮಾಹಿತಿ ಕೊಡದೇ ಇದ್ದುದರಿಂದ ಪರಿಹಾರದ ವ್ಯಾಪ್ತಿಗೆ ಅನೇಕರು ಬಂದಿಲ್ಲ. ಕೆಲವರಿಗೆ ಭೂ ದಾಖಲೆ ಸಮಸ್ಯೆ ಇದೆ ಎಂದರು. ನಿಜವಾಗಿ ತೊಂದರೆಯಾದವರನ್ನು ಗುರುತಿಸಿದ್ದು, ಬಾಕಿ ಇರುವ ಬಿಲ್ ಪಾವತಿ ಮಾಡಲು ಆಜ್ಞೆ ಮಾಡಿದ್ದೇನೆ. ಮಂಜೂರಾಗದೇ ಇರುವ ಅರ್ಹ ಪ್ರಕರಣಕ್ಕೂ ಕೊಡಲು ಸೂಚಿಸಲಾಗಿದೆ. 2019-20, 2020-21ರಲ್ಲಿ ಮನೆ ಕಳೆದುಕೊಂಡವರಿಗೆ ಕಾನೂನಾತ್ಮಕವಾಗಿ ಕೆಲವು ರಿಯಾಯಿತಿ ಕೊಡಲು ನಿರ್ಧರಿಸಿದ್ದೇವೆ. ಇನ್ನೂ ಕೆಲವರು ಶೆಡ್​ಗಳಲ್ಲಿದ್ದು ಅವರಿಗೆ ಗ್ರಾಮೀಣ ವಸತಿ ಯೋಜನೆಯಡಿ ಮನೆ ಕೊಡಲು ಆದ್ಯತೆ ಕೊಡಲಾಗುತ್ತದೆ ಎಂದು ಹೇಳಿದರು.

ಬೊಮ್ಮಾಯಿ ಹೇಳಿದ್ದು

  • ನಾಯಕತ್ವ ಬದಲಾವಣೆ ವೇಳೆ ನನ್ನ ಹೆಸರು ರೇಸ್​ನಲ್ಲಿರಲಿಲ್ಲ, ಹೀಗಾಗಿ ದೆಹಲಿಗೆ ಹೋಗಲಿಲ್ಲ
  • ನನ್ನನ್ನು ಬಿಎಸ್​ವೈ ಕೈಗೊಂಬೆ ಅನ್ನೋದು ಸಹಜ. ಇಂತಹ ವಿಶ್ಲೇಷಣೆ ಇದ್ದಿದ್ದೇ
  • ಬಿಎಸ್​ವೈ ನಮ್ಮ ನಾಯಕರು. ಅವರ ಸಲಹೆ ಪಡೆಯುವೆ
  • ಲಾಕ್​ಡೌನ್​ನಿಂದ ಕಂಗೆಟ್ಟಿರುವ ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಪರಿಹಾರ ಕಂಡುಕೊಳ್ಳಲು ಕ್ರಮ
  • ಬೆಂಗಳೂರಿನಲ್ಲಿ ಟೋಯಿಂಗ್ ದಂಧೆಗೆ ಬ್ರೇಕ್ ಹಾಕಲು ಕ್ರಮ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net