ನೈಟ್ ಕರ್ಫ್ಯೂ ಉಲ್ಲಂಘಿಸಿ ಬೆಂಜ್ ಕಾರಲ್ಲಿ ಜಾಲಿರೈಡ್; ತಡರಾತ್ರಿ ತೆರೆದ ಕಾರಲ್ಲಿ ಮದ್ಯ-ಮಾನಿನಿಯರೊಂದಿಗೆ ಮೋಜು-ಮಸ್ತಿ

Jolly Ride
Published on

ಬೆಂಗಳೂರು: ರಾಜಧಾನಿಯಲ್ಲಿ ವೀಕೆಂಡ್ ಮೋಜು-ಮಸ್ತಿ ಇನ್ನೂ ನಿಂತೇ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಸದಾಶಿವನಗರದಲ್ಲಿ ಶನಿವಾರ ರಾತ್ರಿ ಐಷಾರಾಮಿ ಮರ್ಸಿಡೆಸ್​ ಬೆಂಜ್ ಕಾರಿನಲ್ಲಿ ಯುವಕ-ಯುವತಿಯರು ಬಿಂದಾಸ್ ಆಗಿ ಜಾಲಿ ರೈಡ್ ಮಾಡಿದ್ದು, ಸದಾಶಿವನಗರ ಸಂಚಾರ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ಕಾರು ಜಪ್ತಿ ಮಾಡಿದ್ದಾರೆ.

ತಡರಾತ್ರಿ ಕಾರಿನ ಎರಡು ಕಡೆ ಡೋರ್, ರೂಫ್ ಟಾಪ್ ತೆರೆದು ಡ್ಯಾನ್ಸ್ ಮಾಡುತ್ತ ಪೊಲೀಸರ ಎದುರಿಗೆ ಕೂಗಾಡುತ್ತ ಅತಿವೇಗವಾಗಿ ಕಾರು ಚಲಾಯಿಸಿದ್ದರು. ರೆಸಿಡೆನ್ಸಿಯಲ್ ಪ್ರದೇಶದಲ್ಲಿ ಜೋರಾಗಿ ಮ್ಯೂಸಿಕ್ ಹಾಕಿ ಮೂವಿಂಗ್ ಕಾರ್‌ನಲ್ಲೇ ಕೈಯಲ್ಲಿ ಮದ್ಯದ ಬಾಟಲ್ ಹಿಡಿದು ಡ್ಯಾನ್ಸ್ ಮಾಡಿ ವೇಗವಾಗಿ ಕಾರು ಚಲಾಯಿಸಿಕೊಂಡು ಸಂಚಾರ ನಿಯಮ ಹಾಗೂ ನೈಟ್‌ಕರ್ಫ್ಯೂ ನಿಯಮ ಉಲ್ಲಂಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಬೆಂಜ್ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕಾರು ಸಂಜಿತ್ ಎಸ್. ಶೆಟ್ಟಿ ಎಂಬುವವರಿಗೆ ಸೇರಿದ್ದಾಗಿದ್ದು, ಜಾಲಿ ರೈಡ್ ವೇಳೆ ಕಾರು ಚಲಾಯಿಸುತ್ತಿದ್ದವರು ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಎರಡನೇ ಮದ್ವೆಯಾಗಿ ಹೊಸ ಜೀವನದ ಕನಸು ಕಂಡಿದ್ದವಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ಯಾಗ್ ಕದ್ದು ಜೈಲುಪಾಲಾದ್ಲು…

ಅಗತ್ಯ ಸೇವೆ ಹೆಸರಲ್ಲಿ ಓಡಾಟ, ಪುಂಡಾಟ: ಎಲೆಕ್ಟ್ರಿಕ್ ಕಂಪನಿ ಸಿಬ್ಬಂದಿಯೆಂದು ಹೇಳಿಕೊಳ್ಳುವುದರ ಜತೆಗೆ ತಮ್ಮ ಕಾರಿನಲ್ಲಿ ತುರ್ತು ಅಗತ್ಯ ಸೇವೆ ಫಲಕ ಹಾಕಿಕೊಂಡು ಜಾಲಿ ರೈಡ್ ಮಾಡಿದ್ದಾರೆ. ಕಾರಿನ ಹಿಂಭಾಗ ಸೋಹಮ್ ರಿನ್ಯೂವೇಬಲ್​ ಎನರ್ಜಿ ಪ್ರೈ.ಲಿ. ನಾಮ ಫಲಕ ಹಾಕಿಕೊಂಡು ಸದಾಶಿವನಗರದ ಹಲವೆಡೆ ಸುತ್ತಾಡಿದ್ದಾರೆ.

ಪುಂಡಾಟ ಪ್ರಕರಣದ ದೃಶ್ಯಾವಳಿ ನೋಡಿದ ಬಳಿಕ ಕಾರು ಮಾಲೀಕರಿಂದ ಮಾಹಿತಿ ಪಡೆಯಲು ಪೊಲೀಸರು ಅವರ ಮನೆಗೆ ಬಂದಾಗ ಪೊಲೀಸರನ್ನೂ ಒಳಗೆ ಬಿಟ್ಟುಕೊಂಡಿರಲಿಲ್ಲ. ಸೆಕ್ಯುರಿಟಿ ಬಳಿ ಮನೆಯಲ್ಲಿ ಯಾರೂ ಇಲ್ಲ ಎಂದು ಹೇಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಕೋರಮಂಗಲದಲ್ಲಿ 7 ಮಂದಿಯನ್ನು ಬಲಿ ಪಡೆದಿದ್ದ ಭೀಕರ ರಸ್ತೆ ಅಪಘಾತದ ಬಳಿಕವೂ ವೀಕೆಂಡ್ ಜಾಲಿ ರೈಡ್ ಹುಚ್ಚಾಟ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net