More

    ಜಾದೂಗಾರನಿಗೇ ಟೋಪಿ: ಉದಯ್ ಜಾದೂಗಾರ್ ಸಂಸ್ಥೆಗೆ ವೈದ್ಯನ ಸೋಗಲ್ಲಿ ಬಂದ, ಬಿಟ್ಟಿಯಾಗಿ ಮ್ಯಾಜಿಕ್ ಸಾಮಗ್ರಿ ಒಯ್ದ

    ಬೆಂಗಳೂರು: ಪ್ರಖ್ಯಾತ ಜಾದೂಗಾರ ಉದಯ್ ಅವರ ಉದಯ್ ಮ್ಯಾಜಿಕ್ ವರ್ಲ್ಡ್ ಸಂಸ್ಥೆಗೆ ವೈದ್ಯನ ಸೋಗಲ್ಲಿ ಭೇಟಿ ಕೊಟ್ಟವನೊಬ್ಬ 3,700 ರೂ. ಮೌಲ್ಯದ ಸಾಮಗ್ರಿ ಪಡೆದು ಹಣ ಕೊಡದೆ ವಂಚನೆ ಮಾಡಿದ್ದಾನೆ.

    ಮೈಸೂರು ರಸ್ತೆ ಬ್ಯಾಟರಾಯನಪುರದಲ್ಲಿ ಉದಯ್ ಮ್ಯಾಜಿಕ್ ವರ್ಲ್ಡ್ ಮಳಿಗೆ ತೆರೆದಿದ್ದು, ಮ್ಯಾಜಿಕ್ ಸಾಮಗ್ರಿಗಳನ್ನು ವಿದೇಶಕ್ಕೆ ರಫ್ತು ಮಾಡುತ್ತಾರೆ. ಇತ್ತೀಚೆಗೆ ಉದಯ್ ಜಾದೂಗಾರ್ ಮೊಬೈಲ್‌ಫೋನ್​ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಮ್ಯಾಜಿಕ್ ಸಾಮಗ್ರಿ ಬೇಕೆಂದು ಕೇಳಿದ್ದಾನೆ. ಅದಕ್ಕೆ ಅವರು ಮಳಿಗೆ ವಿಳಾಸ ಕೊಟ್ಟು, ‘ವ್ಯವಸ್ಥಾಪಕರು ಇರುತ್ತಾರೆ. ಹೋಗಿ ಖರೀದಿಸಿ’ ಎಂದು ತಿಳಿಸಿದ್ದಾರೆ.

    ಸೆಪ್ಟೆಂಬರ್ 4ರಂದು ಉದಯ್ ಜಾದೂಗಾರ್ ಇದ್ದಾಗಲೇ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿ, ಡಾ.ಹಬೀಬ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಎಂಬಿಬಿಎಸ್, ಎಂಎಸ್ ಮತ್ತು ತುರ್ತು ನಿಗಾ ಘಟಕದಲ್ಲಿನ ಚಿಕಿತ್ಸೆ ಸಹ ಓದಿರುವುದಾಗಿ ಹೇಳಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಮ್ಯಾಜಿಕ್‌ನಲ್ಲಿ ಆಸಕ್ತಿ ಇದ್ದು, ಕೆಲ ವಸ್ತುಗಳು ಬೇಕೆಂದು ಬಂದಿದ್ದೇನೆ ಎಂದು ವಿಶ್ವಾಸ ಗಳಿಸಿದ್ದಾನೆ. ಅಲ್ಲದೆ, ಮಳಿಗೆಯಲ್ಲಿಯೇ ಉದಯ್ ಜಾದೂಗಾರ್‌ರನ್ನು ಮಲಗಿಸಿ ಆರೋಗ್ಯ ತಪಾಸಣೆ ನಡೆಸಿ ರಕ್ತ ಪರೀಕ್ಷೆ ನಡೆಸಿ 100 ವರ್ಷ ಬದುಕುತ್ತೀರ ಎಂದು ಮೋಡಿ ಮಾಡಿದ್ದಾನೆ.

    ಇಷ್ಟೆಲ್ಲ ನೋಡಿದ ಮೇಲೆ ಉದಯ್ ಜಾದೂಗಾರ್ ಸಂಪೂರ್ಣ ನಂಬಿದ್ದರು. ಇತ್ತ 5 ಸಾವಿರ ರೂ. ಮೌಲ್ಯದ ಮ್ಯಾಜಿಕ್ ಸಾಮಗ್ರಿ ಖರೀದಿಸಿದ ಡಾ. ಹಬೀಬ್‌ಗೆ ರಿಯಾಯಿತಿ ಮಾಡಿ 3,700 ರೂ. ಕೊಡುವಂತೆ ಹೇಳಿದ್ದರು. ಡಾ.ಹಬೀಬ್, ವ್ಯಾಲೆಟ್‌ನಲ್ಲಿ ವರ್ಗಾವಣೆ ಮಾಡುತ್ತೇನೆ ಎಂದು ಹೇಳಿ ಹೊರಟಿದ್ದಾನೆ. ಕೆಲ ಸಮಯದ ಬಳಿಕ ಆಕೌಂಟ್ ಚೆಕ್ ಮಾಡಿದಾಗ ಹಣ ಬಂದಿಲ್ಲ. ಕರೆ ಮಾಡಿ ವಿಚಾರಿಸಿದಾಗ ಬರುತ್ತೆ ಎಂದು ಸಬೂಬು ಹೇಳಿದ್ದಾನೆ. ಮಾರನೇ ದಿನ ಕೇಳಿದಾಗ ವೈದ್ಯನಾಗಿ 3,700 ರೂ. ಕೊಡಲು ನನ್ನ ಕೈಯಲ್ಲಿ ಸಾಧ್ಯವಾಗುವುದಿಲ್ಲವಾ? ನನ್ನ ಮೇಲೆ ನಂಬಿಕೆ ಇಲ್ವಾ? ಎಂದು ಜೋರು ಮಾಡಿ ಸುಮ್ಮನಿರಿಸಿ ಮೊಬೈಲ್​ಫೋನ್​ ಸ್ವಿಚ್ ಆಫ್​ ಮಾಡಿದ್ದಾನೆ. ವಂಚಕ ಏನೆಲ್ಲ ಮಾಡಿದ ಎಂದು ಆತ್ಮೀಯರ ಬಳಿ ಹೇಳಿಕೊಂಡ ಉದಯ್ ಜಾದೂಗಾರ್ ಕೊನೆಗೆ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

    ಮೋಸ ಮಾಡುವರು ನಾನಾ ವೇಷದಲ್ಲಿ ಬರುತ್ತಾರೆ. ಅಪರಿಚಿತರ ಜೊತೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ವ್ಯವಹರಿಸಿ. ಯಾವುದೇ ಕಾರಣಕ್ಕೂ ಮೋಸಕ್ಕೆ ಒಳಗಾಗಬೇಡಿ.
    | ಉದಯ್​ ಜಾದೂಗಾರ್

    ವಿಕ್ಟೋರಿಯಾ ವೈದ್ಯನೆಂದು ಪರಿಚಯ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ತನ್ನ ಆತ್ಮೀಯರಿಗೆ ಕರೆ ಮಾಡಿ ಉದಯ್​ ಜಾದೂಗಾರ್​ ವಿಚಾರಿಸಿದಾಗ, ಡಾ.ಹಬೀಬ್ ಹೆಸರಿನ ವೈದ್ಯರು ಯಾರೂ ಇಲ್ಲವೆಂದು ಖಚಿತ ಪಡಿಸಿದ್ದಾರೆ. ಪೊಲೀಸರು ಆರೋಪಿಯ ಮೊಬೈಲ್​ಫೋನ್​ ನಂಬರ್‌ಗೆ ಕರೆ ಮಾಡಿದಾಗ ಸೈಯದ್ ಸಫೀಯನ್ ಎಂದು ಟ್ರೂ ಕಾಲರ್‌ನಲ್ಲಿ ತೋರಿಸುತ್ತಿದೆ.

    ಮಹಿಳೆ ಸತ್ತು 4 ತಿಂಗಳಾಗಿತ್ತು; ಮೊನ್ನೆ ಎರಡನೇ ಡೋಸ್ ಲಸಿಕೆಯೂ ಆಯ್ತು, ಪ್ರಮಾಣಪತ್ರವೂ ಬಂತು!

    ಕಡಿಮೆ ಆಗಲಿದೆ ಎಣ್ಣೆ ರೇಟು!; ಅದಕ್ಕೆಂದೇ ಸರ್ಕಾರ ಕಡಿತಗೊಳಿಸಿದೆ ಸೀಮಾ ಸುಂಕ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts