

ಮಧ್ಯಪ್ರದೇಶ: ಕಾಡಿನ ಕೆರೆಯಲ್ಲಿ ಮೂರು ಮರಿಗಳೊಂದಿಗೆ ತಾಯಿ ಹುಲಿ ನೀರು ಕುಡಿಯುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ಸೆರೆಹಿಡಿದ ವೈಲ್ಡ್ ಲೈಫ್ ಫೋಟೋಗ್ರಾಫರ್ ಸರೋಶ್ ಅವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, 'ಲವ್ಯೂ ಸೂಪರ್ ಮಾಮ್', 'ಪೆಂಚ್ ಕ್ವೀನ್'.. ಎಂದೆಲ್ಲ ನೆಟ್ಟಿಗರು ಕಮೆಂಟ್ಸ್ ಕೊಡುತ್ತಿದ್ದಾರೆ.
ಹೌದು, ಇದು ಅಂತಿಂಥ ಹುಲಿ ಅಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೊಂದರ ಸ್ಟಾರ್ ಆಫ್ ಅಟ್ರ್ಯಾಕ್ಷನ್. ಹದಿನಾಲ್ಕೂವರೆ ವರ್ಷ ವಯಸ್ಸಿನ ಹುಲಿ ಇದುವರೆಗೂ ಬರೋಬ್ಬರಿ ಮೂವತ್ತು ಮರಿಗಳಿಗೆ ಜನ್ಮನೀಡಿದ್ದು, 'ಸೂಪರ್ ಅಮ್ಮ' ಎನಿಸಿಕೊಂಡಿದೆ. ಕ್ವೀನ್ ಆಫ್ ಪೆಂಚ್ ಎಂದೇ ಕರೆಯಲ್ಪಡುವ ಈ ಹುಲಿಯ ಮತ್ತೊಂದು ಹೆಸರು 'ಕಾಲರ್ವಲ್ಲಿ ಬಾಗಿನ್'. ಇದನ್ನೂ ಓದಿರಿ ಒಂದು ವಿಭಿನ್ನ ಪ್ರತಿಭಟನೆ… ತಮ್ಮ ವಿವಾಹಕ್ಕೆ ಕುಂದು ತಂದ ಲಾಕ್ಡೌನ್ ನಿಯಮಾವಳಿಗಳ ವಿರುದ್ಧ ಇಟಲಿಯ ಯುವತಿಯರು ಮಾಡಿದ್ದೇನು?
2005ರ ಅಕ್ಟೋಬರ್ನಲ್ಲಿ ಜನಿಸಿದ ಕಾಲರ್ವಲ್ಲಿ ಬಾಗಿನ್ಗೆ 2008ರಿಂದ 2019ರವರೆಗೂ ಒಟ್ಟು ಎಂಟು ಬಾರಿ ಹೆರಿಗೆಯಾಗಿದ್ದು, 30 ಮರಿಗಳು ಜನಿಸಿವೆ. ಅಂದಹಾಗೆ ಈ 'ಕಾಲರ್ವಲ್ಲಿ ಬಾಗಿನ್' ಇರೋದು ಭಾರತದ ಪ್ರಮುಖ ಹುಲಿ ನಿಕ್ಷೇಪಗಳಲ್ಲಿ ಒಂದಾದ ಪೆಂಚ್ ನ್ಯಾಷನಲ್ ಪಾರ್ಕ್(ಪೆಂಚ್ ಟೈಗರ್ ರಿಸರ್ವ್) ನಲ್ಲಿ. ಈ ಉದ್ಯಾನವನ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳ ಮಧ್ಯೆ ಇದ್ದು, ಬಹುತೇಕ ಭಾಗ ಮಧ್ಯಪ್ರದೇಶ ವ್ಯಾಪ್ತಿಯಲ್ಲಿದೆ.
ಪೆಂಚ್ ಟೈಗರ್ ಅರಣ್ಯಪ್ರದೇಶದಲ್ಲಿ ಮೊದಲ ಬಾರಿಗೆ ರೇಡಿಯೋ ಕಾಲರ್ ಅಳವಡಿಸಿದ್ದು 'ಸೂಪರ್ ಅಮ್ಮ' ಎಂಬ ಹುಲಿಗೆ. 2008ರ ಮಾರ್ಚ್ನಲ್ಲಿ ಈ ಹುಲಿಗೆ ರೇಡಿಯೋ ಕಾಲರ್ ಹಾಕಲಾಗಿತ್ತು. ಹಾಗಾಗಿ ಇದಕ್ಕೆ ಕಾಲರ್ವಲ್ಲಿ ಬಾಗಿನ್ ಎಂದು ಹೆಸರು ಇಡಲಾಯಿತು.
ಭಾರತದ ಈ ರಾಷ್ಟ್ರೀಯ ಉದ್ಯಾನಕ್ಕೆ 'ಪೆಂಚ್' ಎಂಬ ಹೆಸರು ಬರೋದಕ್ಕೂ ಒಂದು ಕಾರಣವಿದೆ. ಈ ಕಾಡಿನಲ್ಲಿ ಉತ್ತರದಿಂದ ದಕ್ಷಿಣಕ್ಕೆ 'ಪೆಂಚ್' ಎಂಬ ನದಿ ಹರಿಯುತ್ತಿದೆ. ಆಗಾಗಿ ಈ ಹೆಸರು ಬಂದಿದೆ.
ಇದೇ ತಿಂಗಳ(ಜುಲೈ) 6ರಂದು ಕಾಲರ್ವಲ್ಲಿ ತನ್ನ ಮರಿಗಳೊಂದಿಗೆ ಕೆರೆಯಲ್ಲಿ ನೀರು ಕುಡಿಯುತ್ತಿದ್ದ ದೃಶ್ಯವನ್ನು ವೈಲ್ಡ್ ಲೈಫ್ ಫೋಟೋಗ್ರಾಫರ್ ಸರೋಶ್ ಅವರು ಸೆರೆ ಹಿಡಿದಿದ್ದು, ಈ ಫೋಟೋಗಳು ಸಖತ್ ವೈರಲ್ ಆಗಿವೆ. ತನ್ನ ಮರಿಗಳೊಂದಿಗೆ ಕಾಲರ್ವಲ್ಲಿಯನ್ನು ಕಂಡ ಪ್ರಾಣಿಪ್ರಿಯರು ಫುಲ್ ಖುಷಿಯಾಗಿದ್ದಾರೆ.