ಜೀವನದಲ್ಲಿ ಒಮ್ಮೆಯೂ… ಪವನ್​ ಕಲ್ಯಾಣ್​ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಸಚಿವೆ ರೋಜಾ

Minister Roja
Published on

ವಿಜಯವಾಡ: ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಫೈರ್​ಬ್ರ್ಯಾಂಡ್​ ಹಾಗೂ ಆಂಧ್ರ ಪ್ರದೇಶದ ಪ್ರವಾಸೋದ್ಯಮ ಸಚಿವೆ ರೋಜಾ ಸೆಲ್ವಮಣಿ, ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ನಟ ಪವನ್​ ಕಲ್ಯಾಣ್​ ಮತ್ತು ತೆಲುಗು ದೇಶಂ ಪಕ್ಷದ ನಾಯಕ ನಾರಾ ಲೋಕೇಶ್​ ಕುರಿತು ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ.

ಇಂದು ಅನಂತಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವೆ ರೋಜಾ, ಪವನ್​ ಕಲ್ಯಾಣ್​ ಮತ್ತು ನಾರಾ ಲೋಕೇಶ್​ ಇಬ್ಬರು ಜೀವನದಲ್ಲಿ ಒಮ್ಮೆಯೂ ಶಾಸಕರಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಟಿಡಿಪಿ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ರೋಜಾ ಮೈತ್ರಿ ವಿರುದ್ಧ ಕಿಡಿಕಾರಿದ್ದಾರೆ. ಬಂಧನದಿಂದ ಪಾರಾಗುವ ಉದ್ದೇಶದಿಂದ ಚಂದ್ರಬಾಬು ನಾಯ್ಡು ಅವರು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಸೋಲುತ್ತೇವೆ ಎಂಬ ಭಯದಿಂದ ಚಂದ್ರಬಾಬು ಮತ್ತು ಪವನ್​ ಕಲ್ಯಾಣ್​ ಬಿಜೆಪಿ ಜತೆ ಕೈಜೋಡಿಸಿದ್ದಾರೆ ಎಂದು ರೋಜಾ ವ್ಯಂಗ್ಯವಾಡಿದ್ದಾರೆ.

ಚಂದ್ರಬಾಬು ಮತ್ತು ಪವನ್ ಕಲ್ಯಾಣ್ ಅವರಿಗೆ ರಾಜ್ಯ ಮತ್ತು ರಾಜ್ಯದ ಜನರ ಮೇಲೆ ಪ್ರೀತಿ ಇಲ್ಲ. ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬರುವುದು, ಲೂಟಿ ಹೊಡೆಯುವುದು ಹಾಗೂ ಅಡಗಿಕೊಳ್ಳುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅಧಿಕಾರದಲ್ಲಿದ್ದಾಗ ಜನರನ್ನು ಗಾಳಿಗೆ ತೂರಿ ರಾಜ್ಯವನ್ನು ಒಡೆದು ಸರ್ವನಾಶ ಮಾಡಿದರು ಎಂದು ರೋಜಾ ವಾಗ್ದಾಳಿ ನಡೆಸಿದ್ದಾರೆ.

ಮೈತ್ರಿಗಳೊಂದಿಗೆ ಮೋಸಗಾರರನ್ನು ಓಡಿಸಿ ಎಂದು ಕರೆ ಕೊಟ್ಟ ರೋಜಾ, ನಾರಾ ಲೋಕೇಶ್​ ಶಾಸಕರಾಗಿ ಗೆದ್ದಿಲ್ಲ, ಅವನು ನಮಗೆ ಏನು ತಾನೇ ಮಾಡುತ್ತಾನೆ? ನಾವೇನಾದರೂ ಬ್ಲೂ ಬುಕ್ ಬರೆದಿದ್ದರೆ ಅವರು ರಾಜ್ಯದಲ್ಲಿ ಇರುತ್ತಿದ್ದರೇ? ಪವನ್ ಮತ್ತು ಲೋಕೇಶ್ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯೂ ಶಾಸಕರಾಗುವುದಿಲ್ಲ. ಲೋಕೇಶ್ ಮತ್ತು ಪವನ್ ಕಲ್ಯಾಣ್ ಬಗ್ಗೆ ನಾವು ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ ಎಂದು ಸಚಿವೆ ರೋಜಾ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net