More

    400 ಸ್ಥಾನ ಗೆದ್ರೆ ಸಂವಿಧಾನ ತಿದ್ದುಪಡಿ! ಅನಂತ ಕುಮಾರ್​ ಹೆಗಡೆ ಹೇಳಿಕೆ, ರಾಹುಲ್​ ವಾಗ್ದಾಳಿ, ಬಿಜೆಪಿ ಸ್ಪಷ್ಟನೆ ಹೀಗಿದೆ…

    ಬೆಂಗಳೂರು: ಸಂವಿಧಾನ ತಿದ್ದುಪಡಿ ಕುರಿತು ಉತ್ತರ ಕನ್ನಡ ಸಂಸದ ಅನಂತ ಕುಮಾರ್​ ಹೆಗಡೆ ಆಡಿರುವ ಮಾತುಗಳು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ವಯನಾಡು ಸಂಸದ ರಾಹುಲ್​ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರೆ, ಇದಕ್ಕೆ ಪ್ರತಿಯಾಗಿ ಬಿಜೆಪಿ ಸ್ಪಷ್ಟನೆ ನೀಡುವ ಮೂಲಕ ಕಾಂಗ್ರೆಸ್​ಗೆ ತಿರುಗೇಟು ನೀಡಿದೆ.

    ಮೊದಲಿಗೆ ಅನಂತ ಕುಮಾರ್​ ಹೆಗಡೆ ಏನು ಹೇಳಿದರು ಎನ್ನುವುದನ್ನು ನೋಡುವುದಾದರೆ, ಉತ್ತರ ಕನ್ನಡದ ಸಿದ್ದಾಪುರದ ಹಲಗೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್​ನವರು ಸಂವಿಧಾನದಲ್ಲಿ ಬೇಡವಾದದನ್ನೆಲ್ಲ ಸೇರಿಸಿದ್ದಾರೆ. ಅದರ ತಿದ್ದುಪಡಿ ಮಾಡಬೇಕಿದೆ ಎಂದರು.

    ಲೋಕಸಭೆಯಲ್ಲಿ 400 ಸ್ಥಾನ ಗೆಲ್ಲಬೇಕು ಎಂದು ಪ್ರಧಾನಿ ಹೇಳಿದ್ದಾರೆ. 400ಸ್ಥಾನ ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡಬಹುದು. 400 ಸ್ಥಾನ ಯಾಕೆ ಅಂದರೆ, ನಮಗೆ ಲೋಕಸಭೆಯಲ್ಲಿ ಬಹುಮತ ಇದೆ. ಆದರೆ, ರಾಜ್ಯಸಭೆಯಲ್ಲಿ ಇಲ್ಲ. ಸಂವಿಧಾನ ತಿದ್ದುಪಡಿ ಮಾಡುವುದಾದರೆ ಬಹುಮತ ಅವಶ್ಯ. ಕಾಂಗ್ರೆಸ್​ನವರು ಸಂವಿಧಾನ ಮೂಲರೂಪವನ್ನು ತಿರುಚಿದ್ದಾರೆ. ಅದರಲ್ಲಿ ಬೇಡದೇ ಇರೋದನ್ನೆಲ್ಲ ತುರುಕಿದ್ದಾರೆ. ಇಡೀ ಹಿಂದು ಸಮಾಜವನ್ನು ದಮನಿಸೋ ರೀತಿ ಕಾನೂನು ತಂದಿಟ್ಟಿದ್ದರು. ಇದೆಲ್ಲವೂ ಬದಲಾಗಬೇಕಿದ್ದರೆ, ಈ ಅಲ್ಪಮತದಲ್ಲಿ ಆಗುವುದಿಲ್ಲ. ಎರಡೂ ಕಡೆ 2/3 ಬಹುಮತ ಬೇಕಾಗುತ್ತದೆ ಎಂದರು.

    ಕಾಂಗ್ರೆಸ್​ನವರು ಜಾಸ್ತಿ ಆದಾಗ ಏನೇ ತಿದ್ದುಪಡಿ ತಂದರು ಅದು ರಾಜ್ಯಸಭೆಯಲ್ಲಿ ಪಾಸ್ ಆಗಲ್ಲ. ಸಿಎಎಗೆ ರಾಜ್ಯಗಳಿಂದ ಒಪ್ಪಿಗೆ ಬಂದಿಲ್ಲ. ಸಿಎಎ ತರದಿದ್ರೆ ದೇಶದಲ್ಲಿ ಕಾನೂನು ಸುವ್ಯವಸ್ಥೆ ನಮ್ಮ ಕೈಲಿ ಇರಲ್ಲ. ಇದೊಂದು ದೇಶದ್ರೋಹಿಗಳ ಆಡಂಬರ ಆಗುತ್ತೆ. ಎಲ್ಲಾ ಕಡೆ 2/3 ಮೆಜಾರಿಟಿ ಬರಲಿ, ಆಮೇಲೆ ನೋಡಿ ಮಾರಿ ಜಾತ್ರೆ ಹೇಗಿರುತ್ತೆ ಅಂತಾ! ಜಾತ್ರೆಗೆ ಒಂದು ಕಳೆ ಬರೋದು ಅಷ್ಟು ಸ್ಥಾನದ ನಂತರ. ಗೆದ್ದ ನಂತರ ನಾವು ಮೇಲೆ ಹೋಗಿಬಿಡುತ್ತೇವೆ. ಗ್ರಾಮ ಪಂಚಾಯತಿ, ಲೋಕಸಭೆ ಹಾಗೂ ವಿಧಾನಸಭೆ ಯಾವುದೇ ಇರಲಿ, ನಾನೇ ಅನ್ನೋದು ಬಂದುಬಿಡುತ್ತದೆ. ನಾನೇ ದೇವರು ಅನ್ನೋ ಭಾವನೆ ಬಂದುಬಿಡುತ್ತೆ. ಪತನ ಶುರುವಾಗುವುದೇ ಅಲ್ಲಿಂದ ಎಂದು ಹೆಗಡೆ ಹೇಳಿದ್ದಾರೆ.

    ಹೆಗಡೆ ಆಡಿರುವ ಮಾತುಗಳು ಇದೀಗ ಈ ಮಾತು ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಈ ರೀತಿಯ ಮಾತು ಹೆಗಡೆ ಅವರಿಗೆ ಹೊಸದೇನಲ್ಲ, ಈ ಹಿಂದೆಯು ಕೂಡಾ ತಾವು ಬಂದಿರೋದೆ ಸಂವಿಧಾನ ಬದಲಾಯಿಸಲು ಎಂದಿದ್ದರು.

    ರಾಹುಲ್​ ಗಾಂಧಿ ವಾಗ್ದಾಳಿ
    ಹೆಗಡೆ ಹೇಳಿಕೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ವಿರುದ್ಧ ರಾಹುಲ್​ ಗಾಂಧಿ ಅವರು ತಮ್ಮ ಎಕ್ಸ್​ ಖಾತೆ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನವನ್ನು ಬದಲಿಸಲು 400 ಸ್ಥಾನಗಳು ಬೇಕು ಎಂಬ ಬಿಜೆಪಿ ಸಂಸದರ ಹೇಳಿಕೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಘ ಪರಿವಾರದ ಗುಪ್ತ ಉದ್ದೇಶಗಳ ಬಹಿರಂಗ ಘೋಷಣೆಯಾಗಿದೆ. ಬಾಬಾ ಸಾಹೇಬರ ಸಂವಿಧಾನವನ್ನು ನಾಶ ಮಾಡುವುದೇ ಮೋದಿ ಮತ್ತು ಬಿಜೆಪಿಯ ಅಂತಿಮ ಗುರಿಯಾಗಿದೆ. ಅವರು ನ್ಯಾಯ, ಸಮಾನತೆ, ನಾಗರಿಕ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತಾರೆ. ಸಮಾಜವನ್ನು ವಿಭಜಿಸುವ ಮೂಲಕ, ಮಾಧ್ಯಮವನ್ನು ಗುಲಾಮರನ್ನಾಗಿ ಮಾಡುವ ಮೂಲಕ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ ಮತ್ತು ಸ್ವತಂತ್ರ ಸಂಸ್ಥೆಗಳನ್ನು ದುರ್ಬಲಗೊಳಿಸುವ ಮೂಲಕ, ತಮ್ಮ ವಿರೋಧವನ್ನು ತೊಡೆದುಹಾಕಲು ಸಂಚು ರೂಪಿಸುವ ಮೂಲಕ ಭಾರತದ ಮಹಾನ್ ಪ್ರಜಾಪ್ರಭುತ್ವವನ್ನು ಸಂಕುಚಿತ ಸರ್ವಾಧಿಕಾರವಾಗಿ ಪರಿವರ್ತಿಸಲು ಬಯಸುತ್ತಾರೆ. ಸ್ವಾತಂತ್ರ್ಯ ವೀರರ ಕನಸುಗಳ ಜೊತೆಗೆ ಈ ಷಡ್ಯಂತ್ರಗಳನ್ನು ನಾವು ಯಶಸ್ವಿಯಾಗಲು ಬಿಡುವುದಿಲ್ಲ ಮತ್ತು ನಮ್ಮ ಕೊನೆಯ ಉಸಿರು ಇರುವವರೆಗೂ ಸಂವಿಧಾನದ ಭರವಸೆಯ ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ. ಸಂವಿಧಾನದ ಪ್ರತಿಯೊಬ್ಬ ಸೈನಿಕರು, ವಿಶೇಷವಾಗಿ ದಲಿತರು, ಆದಿವಾಸಿಗಳು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಎಚ್ಚೆತ್ತುಕೊಳ್ಳಿ, ನಿಮ್ಮ ಧ್ವನಿಯನ್ನು ಎತ್ತಿಕೊಳ್ಳಿ ಇಡೀ ಭಾರತವು ನಿಮ್ಮೊಂದಿಗಿದೆ ಎಂದು ರಾಹುಲ್​ ಕರೆ ನೀಡಿದ್ದಾರೆ.

    ಬಿಜೆಪಿ ಕೊಟ್ಟ ಸ್ಪಷ್ಟನೆ ಏನು?
    ಅನಂತ ಕುಮಾರ್​ ಹೆಗಡೆ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಬಿಜೆಪಿ ಸ್ಪಷ್ಟನೆ ನೀಡಿದೆ, ಸಂವಿಧಾನ ಕುರಿತು ಸಂಸದ ಅನಂತ ಕುಮಾರ್ ಹೆಗಡೆಯವರ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಹೊರತು ಅದು ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ. ರಾಷ್ಟ್ರದ ಸಂವಿಧಾನವನ್ನು ಎತ್ತಿಹಿಡಿಯುವ ನಮ್ಮ ಅಚಲ ಬದ್ಧತೆಯನ್ನು ಬಿಜೆಪಿ ಪುನರುಚ್ಚರಿಸುತ್ತದೆ ಮತ್ತು ಹೆಗ್ಗಡೆಯವರ ಅಭಿಪ್ರಾಯಗಳಿಗೆ ಸಂಬಂಧಿಸಿದಂತೆ ಅವರಿಂದ ವಿವರಣೆಯನ್ನು ಕೇಳುತ್ತೇವೆ ಎಂದು ಹೇಳಿದೆ.

    ನಾಯಿ ರೀತಿ ಇರುತ್ತೇನೆಂದರು, ರೂಮಿಗೆ ಕರೆದರು… ಹಲವು ವರ್ಷಗಳ ಬಳಿಕ ನಟಿ ಲಕ್ಷ್ಮೀ ರಹಸ್ಯ ಬಯಲು

    ನಾಳೆ ಬಿಜೆಪಿ ಸಿಇಸಿ ಸಭೆ: 2ನೇ ಪಟ್ಟಿ ಕುರಿತು ಚರ್ಚೆ, ರಾಜ್ಯದ ಪ್ರಮುಖ ನಾಯಕರು ಭಾಗಿ ಸಾಧ್ಯತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts