More

    ನಕ್ಸಲ್ ಆತಂಕದ ವಣಚಲುವಿನಲ್ಲಿ ಭದ್ರತೆ ಇಲ್ಲ

    ಮಡಿಕೇರಿ:

    ಹಿಂದೊಮ್ಮೆ ನಕ್ಸಲರು ಇಲ್ಲಿಗೆ ಭೇಟಿ ನೀಡಿದ್ದರಿಂದ ನಕ್ಸಲ್‌ಪೀಡಿತ ಹಣೆಪಟ್ಟಿಯ ವಣಚಲುವಿನಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಮಡಿಕೇರಿ ತಾಲೂಕಿನ ಈ ಕುಗ್ರಾಮದಲ್ಲಿ ಕೊರತೆಗಳ ದೊಡ್ಡ ಪಟ್ಟಿಯೇ ಇದ್ದು, ಎಲ್ಲವನ್ನೂ ‘ಹೊಟ್ಟೆಗೆ ಹಾಕಿಕೊಂಡು’ ಸ್ಥಳೀಯರು ತಮ್ಮ ಹಕ್ಕು ಚಲಾಯಿಸಿದರು. ತಿಂಗಳ ಹಿಂದೆ ಇಲ್ಲಿಗೆ ಕೂಗಳತೆ ದೂರದಲ್ಲಿ ನಕ್ಸಲ್ ಚಟುವಟಿಕೆ ಕಂಡುಬAದಿದ್ದರೂ ಮತಗಟ್ಟೆಗೆ ದೊಡ್ಡ ಮಟ್ಟದ ಭದ್ರತೆ ಕಲ್ಪಿಸದಿರುವುದು ಅಚ್ಚರಿಗೆ ಕಾರಣವಾಯಿತು.
    ಕೊಡಗು – ದಕ್ಷಿಣ ಕನ್ನಡ ಗಡಿಗೆ ಸಮೀಪವಿರುವ ವಣಚಲು ಗ್ರಾಮಸ್ಥರು ಕೊರತೆಗಳ ಮಧ್ಯೆಯೇ ಶುಕ್ರವಾರ ಉತ್ಸಾಹದಿಂದ ಮತದಾನ ಮಾಡಿದರು. 194 ಮತದಾರರು ಇಲ್ಲಿದ್ದು ಬೆಳಗ್ಗೆ 11.15ರ ಸುಮಾರಿಗೆ 80 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಮೂಲಭೂತ ಸೌಕರ್ಯಗಳಿಂದ ಈ ಗ್ರಾಮ ವಂಚಿತವಾಗಿದ್ದು, ಚುನಾವಣಾ ಸಿಬ್ಬಂದಿಗೂ ಇದರ ಬಿಸಿ ತಟ್ಟಿತು.

    ಗುರುವಾರ ಸಂಜೆ ಮತಗಟ್ಟೆಗೆ ಆಗಮಿಸಿದ್ದಾಗ ಇಲ್ಲಿ ವಿದ್ಯುತ್ ದೀಪವೇ ಇರಲಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಿರಲಿಲ್ಲ. ವಿಷಯ ಸ್ಥಳೀಯ ಗ್ರಾಮಸ್ಥರ ಗಮನಕ್ಕೆ ಬಂದ ಕೂಡಲೇ ಮಾನವೀಯ ನೆಲೆಯಲ್ಲಿ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಮಾಡಲಾಯಿತು. ಶುಕ್ರವಾರ ಬೆಳಗ್ಗೆ ತಿಂಡಿಯೂ ಇವರಿಗೆ ತಡವಾಗಿ ಲಭ್ಯವಾಯಿತು.
    ಹಿಂದೊಮ್ಮೆ ನಕ್ಸಲರು ಈ ಗ್ರಾಮಕ್ಕೆ ಭೇಟಿ ನೀಡಿ ಮರಳಿದ್ದರು. ತಿಂಗಳ ಹಿಂದೆಯಷ್ಟೇ ಈ ಗ್ರಾಮದಿಂದ ಕೆಲವೇ ಕಿಮೀ ದೂರದಲ್ಲಿ ನಕ್ಸಲ್ ಚಟುವಟಿಕೆ ಕಂಡುಬAದಿತ್ತು. ಆದರೆ ಮಾಧ್ಯಮ ತಂಡ ಇಲ್ಲಿಯ ಮತಗಟ್ಟೆಗೆ ತೆರಳುವ ಸಂದರ್ಭ ದೊಡ್ಡ ಮಟ್ಟಿಗೆ ಯಾವುದೇ ಭದ್ರತಾ ವ್ಯವಸ್ಥೆ ಕಂಡುಬAದಿರಲಿಲ್ಲ.

    ಕೆಎಸ್‌ಆರ್‌ಪಿ ಸಿಬ್ಬಂದಿ, ನಾಗರಿಕ ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಹೋಂ ಗಾರ್ಡ್ ಇಲ್ಲಿದ್ದರು. ಇವರ ಕೈಯಲ್ಲಿ ಕೇವಲ ಬೆತ್ತ ಮಾತ್ರ ಇತ್ತು.

    ವಣಚಲು ಗ್ರಾಮ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮದವರ ಜತೆ ಸ್ಥಳೀಯರು ನೋವು ಹಂಚಿಕೊAಡರು. ಮೊಬೈಲ್ ಕ್ರಾಂತಿಯಾಗಿ 5ಜಿ ಜಮಾನದಲಿದ್ದರೂ ಇಲ್ಲಿ 2ಜಿ ಸಂಪರ್ಕವೂ ಸಿಗುವುದಿಲ್ಲ. ಗ್ರಾಮಕ್ಕೊಂದು ಟವರ್ ಕೊಡಿ ಎಂದು ಬಿಎಸ್‌ಎನ್‌ಎಲ್ ಕದ ತಟ್ಟಿದರೂ ಈತನಕ ಪ್ರಯೋಜನ ಆಗಿಲ್ಲ. ಯಾರ ಜೊತೆಯಾದರೂ ಫೋನ್‌ನಲ್ಲಿ ಮಾತನಾಡಬೇಕೆಂದರೆ ಮರ ಹತ್ತಬೇಕಾದ ಸ್ಥಿತಿ ಇಲ್ಲಿದೆ.

    ಅತ್ಯಂತ ಹೆಚ್ಚು ಮಳೆ ಬೀಳುವ ಜಿಲ್ಲೆಯ ಪ್ರದೇಶಗಳ ಪೈಕಿ ವಣಚಲು ಕೂಡ ಒಂದು ಆದರೆ ಈ ಬಾರಿ ಇಲ್ಲಿಗೂ ಬರದ ಬಿಸಿ ತಟ್ಟಿದೆ. ಆನೆ ದಾಳಿಯ ಭಯದಿಂದ ಭತ್ತ, ಬಾಳೆ, ಅಡಿಕೆ, ತೆಂಗು ಬೆಳೆಯುವುದನ್ನೇ ಇಲ್ಲಿಯವರು ಮರೆತುಬಿಟ್ಟಿದ್ದಾರೆ. ಅಲ್ಲಲ್ಲಿ ಇದ್ದ ಕಾಫಿ ತೋಟಗಳು ಈಗ ನೀರಿನ ಕೊರತೆಯಿಂದ ಒಣಗುತ್ತಿವೆ. ಹಾಗಾಗಿ ಮುಂದೇನು ಮಾಡುವುದು ಎನ್ನುವ ಚಿಂತೆಯಲ್ಲಿ ಸ್ಥಳೀಯರು ಇದ್ದಾರೆ.

    ಈ ಗ್ರಾಮದಲ್ಲಿ ಜೀವನಕ್ಕೆ ಅಗತ್ಯ ವರಮಾನ ಇಲ್ಲದ ಕಾರಣ ಬಹುತೇಕ ಯುವ ಜನಾಂಗ ನಗರಗಳ ಕಡೆಗೆ ವಲಸೆ ಹೋಗಿದೆ. ಹಿರಿಯರು ಮಾತ್ರ ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಈ ಅಸಮತೋಲನ ನಿವಾರಣೆಗೆ ಸರ್ಕಾರ ಸೂಕ್ತ ನೆರವು ನೀಡಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

    ಮಡಿಕೇರಿ ನಗರಕ್ಕೆ ನಮ್ಮ ಗ್ರಾಮದಿಂದಲೇ ಕುಡಿಯುವ ನೀರಿನ ಪೂರೈಕೆ ಆಗುತ್ತದೆ. ಆದರೆ ಸ್ಥಳೀಯರಿಗೆ ಇನ್ನೂ ಸರಿಯಾದ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಮೂಲಭೂತ ಸೌಕರ್ಯವಂತೂ ದೂರದ ಮಾತು. ನಮ್ಮಲ್ಲಿಗೆ ನಿಯೋಜನೆಗೊಂಡಿರುವ ಚುನಾವಣಾ ಸಿಬ್ಬಂದಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ವಿದ್ಯುತ್ ದೀಪವೂ ಇರಲಿಲ್ಲ. ನಾವು ಸ್ಥಳೀಯರು ಈ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ.
    ಮಂಜು ತಮ್ಮಯ್ಯ, ವಣಚಲು ನಿವಾಸಿ

    ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿಗೆ ದೊಡ್ಡ ಮಟ್ಟದ ಸಮಸ್ಯೆ ಇದೆ. ಬಾವಿಗಳಲ್ಲೂ ನೀರಿಲ್ಲ. ಕಾಡಿನೊಳಗೆ ಪೈಪ್ ಹಾಕಿ ನೀರು ತರಬೇಕು. ಆದರೆ ಅಲ್ಲಿಯೂ ಆನೆ ಹಾವಳಿ, ಪೈಪ್‌ಗಳನ್ನು ತುಳಿದು ಹಾಳು ಮಾಡುತ್ತಿವೆ. ವಿಷಯವನ್ನು ಪಂಚಾಯಿತಿ ಗಮನಕ್ಕೆ ತರಲಾಗಿದೆ. ಇಲ್ಲಿ ಯಾವ ಬೆಳೆಯನ್ನೂ ಬೆಳೆಯರಾದ ಪರಿಸ್ಥಿತಿ ಇದೆ. ಮೊಬೈಲ್ ನೆಟ್ವರ್ಕ್ ಕೂಡ ಸಿಗುವುದಿಲ್ಲ.
    ಜಾನಕಿ, ವಣಚಲು ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts