ಮೆದುಳಿನ ಶಸ್ತ್ರ ಚಿಕಿತ್ಸೆ ಸಮಯದಲ್ಲೂ ಬಿಗ್​ ಬಾಸ್​ ನೋಡಿದ ರೋಗಿ; ಕಾರಣವೇನು ಗೊತ್ತಾ?

biggboss
Published on

ಅಮರಾವತಿ: ಆಸ್ಪತ್ರೆ ಎಂದರೆ ಭಯ ಪಡುವವರಿದ್ದಾರೆ. ಇನ್ನು ಆಪರೇಷನ್​ ಅಂದು ಬಿಟ್ಟರೆ ಮುಗಿದೇ ಹೋಯಿತು. ಆದರೆ ಕೆಲವರಿಗೆ ಇಂತದ್ದರಲ್ಲಿ ಹೆದರಿಕೆಯೇ ಇರುವುದಿಲ್ಲ. ಇಲ್ಲೊಬ್ಬ ರೋಗಿ ತನ್ನ ಮೆದುಳಿನ ಆಪರೇಷನ್​ ಆಗುತ್ತಿದ್ದರೂ ಯಾವುದೇ ಭಯ, ಚಿಂತೆಯಿಲ್ಲದೆ ಬಿಗ್​ ಬಾಸ್​ ರಿಯಾಲಿಟಿ ಶೋ ಹಾಗೂ ಹಾಲಿವುಡ್​ನ ಅವತಾರ್​ ಸಿನಿಮಾ ನೋಡಿದ್ದಾನೆ.

ಈ ರೀತಿಯ ಘಟನೆ ಆಂಧ್ರ ಪ್ರದೇಶದ ಗುಂಟೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಆಪರೇಷನ್​ ಸಮಯದಲ್ಲಿ ರೋಗಿ ಈ ರೀತಿ ನಡೆದುಕೊಂಡಿರುವುದಕ್ಕೂ ಒಂದು ಕಾರಣವಿದೆ.

ವರ ಪ್ರಸಾದ್​ ಹೆಸರಿನ 33 ವರ್ಷದ ವ್ಯಕ್ತಿಗೆ ಮೆದುಳಿನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಆತನ ಮೆದುಳಿನ ಎಡ ಪ್ರೀಮಿಯೊಟರ್​ ಪ್ರದೇಶದಲ್ಲಿ ಉಂಟಾಗಿದ್ದ ಗ್ಲಿಯೊಮಾವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಶಸ್ತ್ರಚಿಕಿತ್ಸೆ ಮಾಡುವ ಸಮಯದಲ್ಲಿ ರೋಗಿ ಎಚ್ಚರವಾಗಿಯೇ ಇರಬೇಕಂತೆ. ಅದೇ ಕಾರಣದಿಂದಾಗಿ ರೋಗಿಗೆ ಬಿಗ್​ ಬಾಸ್​ ನೋಡಲು ಅವಕಾಶ ಮಾಡಿಕೊಡಲಾಗಿದೆ.

ವರ ಪ್ರಸಾದ್​ಗೆ ಈ ಹಿಂದೆ 2016ರಲ್ಲಿಯೂ ಮೆದುಳಿನ ಆಪರೇಷನ್​ ಆಗಿತ್ತಂತೆ. ಆದರೆ ಆ ಸಮಯಲ್ಲಿ ಸರಿಯಾದ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಕಾಯಿಲೆ ಮತ್ತೊಮ್ಮೆ ಕಾಣಿಸಿಕೊಂಡಿತ್ತು. ಇದೀಗ ಸಂಪೂರ್ಣ ಚಿಕಿತ್ಸೆ ನೀಡಲಾಗಿದ್ದು, ಶನಿವಾರ ಆತ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net