ಬಟ್ಟೆ ಬದಲಿಸುವಾಗ ನಿರ್ಮಾಪಕರು​ ವ್ಯಾನಿಟಿ ವ್ಯಾನ್​ಗೇ ಬಂದು ಬಿಟ್ಟರು; ಖ್ಯಾತ ನಟಿಯ ಆರೋಪ

mandana
Published on

ಮುಂಬೈ: ಬಾಲಿವುಡ್​ನ ನಟಿ ಮಂದನಾ ಕರಿಮಿ ಅವರು ಇದೀಗ ಹೊಸ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಸದ್ಯ ಚಿತ್ರೀಕರಣ ಹಂತದಲ್ಲಿರುವ ಕೋಕಾ ಕೋಲಾ ಚಿತ್ರದಲ್ಲಿ ಮಂದನಾ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರದ ನಿರ್ಮಾಪಕ ಮಹೇಂದ್ರ ಧಾರಿವಾಲ್​ರೊಂದಿಗೆ ನಟಿ ವಿವಾದ ಮಾಡಿಕೊಂಡಿದ್ದಾರೆ.

ದೀಪಾವಳಿಯ ಹಿಂದಿನ ದಿನ ಅಂದರೆ ನವೆಂಬರ್​ 13ರಂದು ಮಂದನಾ ಅವರು ವ್ಯಾನಿಟಿ ವ್ಯಾನ್​ನಲ್ಲಿ ಬಟ್ಟೆ ಬದಲಾಯಿಸುವಾಗ ಮಹೇಂದ್ರಾ ಅವರು ಅನುಮತಿಯಿಲ್ಲದೆಯೇ ಒಳಗೆ ನುಗ್ಗಿದರಂತೆ. ಹಾಗೆ ನುಗ್ಗಿದ ಅವರು ನಟಿಗೆ ಹಿಗ್ಗಾಮುಗ್ಗಾ ಬೈಯಲಾರಂಭಿಸಿದಾರಂತೆ. ಹೀಗೆಂದು ನಟಿ ಆರೋಪ ಮಾಡಿದ್ದಾರೆ.

ನನಗೆ ಅಂದು ಬೇರೊಂದು ಮೀಟಿಂಗ್​ ಇತ್ತು. ಆ ಕಾರಣಕ್ಕೆ ಶೂಟಿಂಗ್​ಗೆ ಬೇಗ ಹೋಗಿ, ಬೇಗ ವಾಪಾಸಾಗುವ ನಿರ್ಧಾರ ಮಾಡಿದ್ದೆ. ಅದರಂತೆ ಬೇಗ ಹೋದ ನಾನು ಬೇಗ ಹೊರಟೆ. ಮೊದಲಿಗೆ ಅನುಮತಿ ಕೊಟ್ಟ ಮಹೇಂದ್ರ ಅವರು, ನಾನು ಬಟ್ಟೆ ಬದಲಾಯಿಸಲು ವ್ಯಾನಿಟಿ ವ್ಯಾನ್​ಗೆ ಹೋದಾಗ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದರು. ಅನುಮತಿ ಕೇಳದೆ ಒಳಗಡೆ ಬಂದು ಬೈಯಲಾರಂಭಿಸಿದರು. ನಾನು ಚಿತ್ರದ ನಿರ್ಮಾಪಕ ನಾನು ಹೇಳಿದಂತೆ ನೀನು ಕೇಳಬೇಕು ಎಂದು ರೇಗಾಡಿದರು ಎಂದು ನಟಿ ದೂರಿದ್ದಾರೆ.

ಆದರೆ ನಿರ್ಮಾಪಕ ಮಹೇಂದ್ರ ಅವರು ಈ ದೂರನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಶೂಟಿಂಗ್​ ನಿಗದಿಯಾಗಿತ್ತು. ಮಂದನಾ ಅವರು 7 ಗಂಟೆಗೇ ವಾಪಾಸು ಹೊರಟರು. ಒಂದು ಗಂಟೆ ಇರುವಂತೆ ಕೇಳಿಕೊಂಡೆ. ಆಮೇಲೆ 8 ಗಂಟೆಗೆ ಹೊರಟು ನಿಂತರು. ಆಗಿನ್ನೂ ಶೂಟಿಂಗ್​ ಮುಗಿದಿರಲಿಲ್ಲ. ಹಾಡಿನ ಚಿತ್ರೀಕರಣ ಮಾಡುವುದಕ್ಕೆ ಅದು ಕೊನೆಯ ದಿನವಾಗಿತ್ತು. ಅದೇ ಕಾರಣಕ್ಕೆ ಅವರನ್ನು ಕೇಳಿಕೊಂಡೆ. ವ್ಯಾನಿಟಿ ವ್ಯಾನ್​ ಒಳಗೆ ಅವರ ಅನುಮತಿಯೊಂದಿಗೇ ಪ್ರವೇಶಿಸಿದ್ದೇನೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net