

ಲಂಡನ್: ಆನ್ಲೈನ್ನಲ್ಲಿ ಖರೀದಿ ಮಾಡುವುದು ಎಷ್ಟು ಸುಲಭವೋ ಅಷ್ಟು ನಂಬಿಕೆಯಿಂದ ಹೊರಗುಳಿದ ವಿಚಾರ ಕೂಡ. ಕೇವಲ ಫೋಟೋ ನೋಡಿ ತರಿಸಿಕೊಳ್ಳುವ ಎಷ್ಟೋ ವಸ್ತುಗಳು ನಮ್ಮ ನಿರೀಕ್ಷೆಗಿಂತ ಕಳಪೆಯಾಗಿಬಿಡುತ್ತವೆ. ಇನ್ನು ಕೆಲವರಿಗಂತು ಮೊಬೈಲ್ ಬುಕ್ ಮಾಡಿದರೆ, ಕಲ್ಲು ಬಂದಿರುವ ಘಟನೆಗಳನ್ನೂ ನಾವು ನೋಡಿದ್ದೇವೆ. ಅದರೆ ಇಲ್ಲೊಬ್ಬ ದಂಪತಿ ಅಲಂಕಾರಕ್ಕೆಂದು ಲೈಟ್ ಬುಕ್ ಮಾಡಿದರೆ ದೊಡ್ಡ ಗಾತ್ರದ ಜೇಡವೇ ಪಾರ್ಸೆಲ್ನಲ್ಲಿ ಬಂದುಬಿಟ್ಟಿದೆ.
ಪಾರ್ಸೆಲ್ನಲ್ಲಿ ಇರಬೇಕಿದ್ದ ಲೈಟ್ಗಳ ಬದಲಾಗಿ ಸುಮಾರು 10 ಸೆಂ.ಮೀ ಉದ್ದದ ಜೇಡವಿತ್ತಂತೆ. ಅದನ್ನು ಕಂಡ ಪತ್ನಿ ಗಾಬರಿಗೊಂಡಿದ್ದಾರೆ. ಕೂಡಲೇ ಗಂಡನಿಗೆ ಕರೆ ಮಾಡಿ ಮನೆಗೆ ಬರಲು ಹೇಳಿದ್ದಾರೆ. ಮನೆಗೆ ಬಂದ ಗಂಡನಿಗೆ ಪತ್ನಿ ಹೆದರಿದ ಬಗೆ ಕಂಡು ನಗು ಬಂದಿದ್ದರೆ, ಆನ್ಲೈನ್ನಲ್ಲಿ ಮೋಸ ಹೋದೆವಲ್ಲ ಎಂದು ಸಿಟ್ಟು ಬಂದಿದೆ.
ಈ ವಿಚಾರವನ್ನು ಮಾರ್ಕ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನ್ನ ಹೆಂಡತಿ ಚಿಕ್ಕ ಮಗುವಿನಂತೆ ಹೆದರಿಕೊಂಡಿದ್ದು ನೋಡಿ ನನಗೆ ನಗು ಬಂದಿತು ಎಂದು ಹೇಳಿದ್ದಾರೆ. ಜೇಡದ ಫೋಟೋ ಹಂಚಿಕೊಂಡಿರುವ ಅವರು, ಈ ಜೇಡ ಯಾವ ತಳಿಗೆ ಸೇರಿರುವುದು ಎನ್ನುವುದು ಗೊತ್ತಿದ್ದರೆ ತಿಳಿಸಿ ಎಂದೂ ಹೇಳಿದ್ದಾರೆ. (ಏಜೆನ್ಸೀಸ್)