ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ: ಹಳೇ ಕಟ್ಟಡದಲ್ಲಿ ಶುರು, ಹೊಸ ಕಟ್ಟಡದಲ್ಲಿ ಅಂತ್ಯ

Parliament Monsoon Session
Published on

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20 ರಿಂದ ಆರಂಭವಾಗಿ ಆಗಸ್ಟ್​ 11ರವರೆಗೆ ನಡೆಯಲಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ ಅವರು ಇಂದು (ಜುಲೈ 1) ತಿಳಿಸಿದ್ದಾರೆ.

ಬಹುಶಃ ಮುಂಗಾರು ಅಧಿವೇಶನ ಹಳೆಯ ಸಂಸತ್​ ಕಟ್ಟಡದಲ್ಲಿ ಆರಂಭವಾಗಿ, ಮಧ್ಯದಲ್ಲಿ ನೂತನ ಸಂಸತ್​ ಭವನಕ್ಕೆ ಸ್ಥಳಾಂತರವಾಗು ಸಾಧ್ಯತೆ ಇದೆ. ಒಂದು ವೇಳೆ ಈ ರೀತಿ ನಡೆದರೆ, ಹೊಸ ಸಂಸತ್​ ಭವನದಲ್ಲಿ ನಡೆಯುವ ಮೊದಲ ಅಧಿವೇಶ ಇದೇ ಆಗಿರಲಿದೆ.

ದಿನಾಂಕವನ್ನು ಘೋಷಣೆ ಮಾಡಿದ ಪ್ರಲ್ಹಾದ್​ ಜೋಶಿ ಅವರು, ಅಧಿವೇಶನದಲ್ಲಿ ಅಭಿವೃದ್ಧಿ ಪರ ಚರ್ಚೆಗಳಿಗೆ ರಾಜಕೀಯ ಪಕ್ಷಗಳು ಕೊಡುಗೆ ನೀಡುವಂತೆ ಒತ್ತಾಯಿಸಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಕಣಕ್ಕಿಳಿಯಲು ಪ್ರತಿಪಕ್ಷಗಳು ಕಸರತ್ತು ನಡೆಸುತ್ತಿರುವುದರಿಂದ ಈ ಅಧಿವೇಶನ ತುಂಬಾ ಬಿರುಸು ಪಡೆದುಕೊಳ್ಳುವ ನಿರೀಕ್ಷೆಯಿದೆ. ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಮುಗಿಬೀಳುವ ಸಾಧ್ಯತೆ ಇದೆ. ಅಲ್ಲದೆ, ಈಗಾಗಲೇ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಈ ಸಂದರ್ಭದಲ್ಲೇ ಅಧಿವೇಶನ ಆರಂಭವಾಗುತ್ತಿರುವುದರಿಂದ ಸಂಸತ್ತಿನಲ್ಲಿ ನಾಗರಿಕ ಸಂಹಿತೆ ಕಾವು ಹೆಚ್ಚಾಗುವ ಲಕ್ಷಣಗಳಿವೆ.

ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆಗೊಂಡಿರುವ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮಸೂದೆ ಸೇರಿದಂತೆ ಹಲವು ಮಸೂದೆಗಳು ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net