ಪರಮಹಂಸ ನುಡಿದೀಪ | ಸಂಸಾರದಲ್ಲಿದ್ದುಕೊಂಡು ಭಗವಂತನ ಸಾಕ್ಷಾತ್ಕಾರ ಸಾಧ್ಯವೇ?

Sun (1)
Published on
ಸಂಸಾರ ಎಂದಾಕ್ಷಣ ಸಂಸಾರಿಗಳಿಗೆ ಅಧ್ಯಾತ್ಮ, ಅನುಭೂತಿ, ಭಗವತ್ ಸಾಕ್ಷಾತ್ಕಾರ ಖಂಡಿತ ಸಲ್ಲದು ಎಂಬ ಸುಳ್ಳು ಮಾತು ಪ್ರಚಲಿತವಾಗಿದೆ. ಅಂದರೆ ಕೇವಲ ಸಂನ್ಯಾಸಿಗಳು, ಸಾಧು, ಸಂತರಿಗೆ ಆಧ್ಯಾತ್ಮಿಕತೆ, ಬೇರೆಯವರೆಲ್ಲಾ ಕೇವಲ ಬಾಹ್ಯ ಪೂಜೆ, ಆರಾಧನೆ, ವ್ರತಗಳಿಗೆ ಸೀಮಿತ ಎಂಬ ಭಾವನೆ ಈ ಜಗತ್ತಿನಲ್ಲಿ ಆಳವಾಗಿದೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಸದಾ ಸಂಸಾರಿಗಳಿಗೇ ಪ್ರಾಮುಖ್ಯತೆಯನ್ನು ನೀಡಿ ಅವರಿಗೆ ಧೈರ್ಯ, ಸ್ಥೈರ್ಯ ಹಾಗೂ ಭಗವದ್ಭಕ್ತಿಯ ವಿಚಾರಗಳನ್ನು ಹೃದಯರ್ಸ³ಯಾಗಿ ಬೋಧಿಸುತ್ತಿದ್ದರು. ಅಂಥ ಒಂದು ಅದ್ಭುತ ಸತ್ಸಂಗದ ಸಂದರ್ಭ ಹೀಗಿತ್ತು: ಪರಮಹಂಸರ ಬಳಿ ಬರುತ್ತಿದ್ದ ನಾನಾ ರೀತಿಯ ಭಕ್ತರಲ್ಲಿ ಕೊಲ್ಕತ್ತಾ ನಗರದ ಸಬ್-ಜಡ್ಜ್ ಒಬ್ಬರು. ಅವರು ಮತ್ತು ಭಗವಾನರಲ್ಲಿ ಸಂಭಾಷಣೆ ನಡೆಯುತ್ತದೆ.

ಸಬ್​ಜಡ್ಜ್: ಮಹಾಶಯರೇ, ಸಂಸಾರವನ್ನು ನಾವು ತ್ಯಜಿಸಿ ಬಿಡಬೇಕೇನು?

ರಾಮಕೃಷ್ಣರು: ಇಲ್ಲ, ಬೇಕಾಗಿಲ್ಲ, ನೀವೇಕೆ ತ್ಯಜಿಸಬೇಕು, ಸಂಸಾರದಲ್ಲಿದ್ದರೂ ಭಗವಂತ ದೊರೆಯಬಹುದು. ಆದರೆ ಮೊದಲು ಮನಸ್ಸನ್ನು ಅಣಿಮಾಡಬೇಕು. ಭಗವಂತನ ಕೃಪೆಯನ್ನು ಪಡೆಯಲು ಮೊದಮೊದಲು ಕೆಲವು ದಿನ ನಿರ್ಜನ ಪ್ರದೇಶದಲ್ಲಿ ಇರಬೇಕು, ನಿರ್ಜನ ಪ್ರದೇಶದಲ್ಲಿದ್ದು ಸಾಧನೆ ಮಾಡಬೇಕು. ಸಂಸಾರವನ್ನು ಬಿಟ್ಟಾಕ್ಷಣಕ್ಕೆ ಸಾಧನೆಯಲ್ಲಿ ಮುಂದುವರಿದಿದ್ದಾರೆ ಎಂದರ್ಥ ಅಲ್ಲ. ನಿತ್ಯ ನಿರಂತರ ಮನಸ್ಸು ಸತ್​ಚಿಂತನೆಯತ್ತ ಕೇಂದ್ರೀಕೃತವಾಗಿರಬೇಕು.

ರಾಮಕೃಷ್ಣರು ಈ ಅಂಶವನ್ನು ಮತ್ತೂ ಸ್ಪಷ್ಟವಾಗಿ ತಮ್ಮದೇ ಆದ ಶೈಲಿಯಲ್ಲಿ ಹೀಗೆ ತಿಳಿಸುತ್ತಾರೆ: ಮನಸ್ಸನ್ನು ಚೆನ್ನಾಗಿ ಹದಮಾಡಿಕೊಳ್ಳದೆ ಇದ್ದರೆ ಮಡಕೆ, ಕುಡಿಕೆಗಳನ್ನು ತಯಾರು ಮಾಡಲಾಗುವುದಿಲ್ಲ. ಒಳಗೆ ಮರಳು, ಕಲ್ಲು ಸೇರಿಕೊಂಡಲ್ಲಿ ಮಡಕೆ ಬಿರುಕು ಬಿಡುತ್ತದೆ. ಅದಕ್ಕಾಗಿಯೇ ಕುಂಬಾರ ಮಣ್ಣನ್ನು ಮೊದಲು ಚೆನ್ನಾಗಿ ಹಸನು ಮಾಡಿಕೊಳ್ಳುತ್ತಾನೆ.

ಹಾಗೆಯೇ ಕನ್ನಡಿಯ ಮೇಲೆ ಧೂಳು ಇದ್ದರೆ ಪ್ರತಿಬಿಂಬ ಕಾಣಿಸದು. ಹಾಗೆಯೇ ಮನಸ್ಸೆಂಬ ದರ್ಪಣ ಪರಿಶುದ್ಧವಾಗದ ಹೊರತು ಏನೂ ಗೋಚರಿಸುವುದಿಲ್ಲ.

ಇದು ಅತ್ಯಮೂಲ್ಯವಾದ ಅಂಶ. ಸಂಸಾರವೆಂಬುದು ಒಂದು ಶಾಶ್ವತವಿಲ್ಲದ ಸ್ಥಿತಿ. ಈ ಸಂಸಾರದ ಮೂಲಕ ಜೀವನದ ಅನೇಕಾನೇಕ ಸತ್ಯದ ಅರಿವು ಉಂಟಾಗುತ್ತದೆ. ಸಂಸಾರ ಎಂಬುದು ಭಗವದ್ ಕೃಪೆಯತ್ತ ಸಾಗಲು ಅವಕಾಶ ನೀಡುವ ಒಂದು ಮಜಲು ಎಂದರೆ ತಪ್ಪಾಗಲಾರದು. ಈ ವಿಚಾರವನ್ನೆಲ್ಲಾ ತಿಳಿದು ಪರಾಮರ್ಶೆ ಮಾಡಬೇಕಾದರೆ ಮುಖ್ಯವಾಗಿ ಈ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಅದುಹೇಗೆ? ರಾಮಕೃಷ್ಣರಲ್ಲಿ ಉತ್ತರವಿದೆ. ಅದೇ ಹಾಲು- ಮೊಸರು- ಬೆಣ್ಣೆಯದು.

ಅಲುಗಾಡದ ಸ್ಥಳದಲ್ಲಿ ಹಾಲಿಗೆ ಹೆಪ್ಪು ಹಾಕಿ ಇಟ್ಟು ಅನಂತರ ಬೆಣ್ಣೆಯನ್ನು ತೆಗೆಯಬೇಕು. ಸುಮ್ಮನೆ ಹೆಪ್ಪುಹಾಕಿ ಆ ಪಾತ್ರೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜಾಗ ಬದಲಿಸುತ್ತಾ ಹೋದಂತೆ ಹಾಲು ಹೆಪ್ಪಾಗುವುದಿಲ್ಲ. ಹಾಗೆಯೇ ಮನಸ್ಸು ಕೂಡ. ಏಕಾಗ್ರತೆಯಿಂದ ಶುದ್ಧ ಸತ್ವದ ಬಗ್ಗೆ, ಅಧ್ಯಾತ್ಮ ಪ್ರಗತಿಯ ಬಗ್ಗೆ ಧ್ಯಾನಸ್ಥರಾಗಿ, ಸ್ಥಿರವಾಗಿದ್ದಾಗಲೇ ಮನಸ್ಸು ಹತೋಟಿಗೆ ಬರುವುದು. ಮನಸ್ಸೆಂಬ ಹಾಲಿನಿಂದ ಜ್ಞಾನ, ಭಕ್ತಿ ಎಂಬ ಬೆಣ್ಣೆಯನ್ನು ಸಂಸಾರವೆಂಬ ನೀರಿನಲ್ಲಿ ಇಟ್ಟರೂ ನಿರ್ಲಿಪ್ತವಾಗಿ ಮೇಲೆ ತೇಲುತ್ತದೆ. ಆದರೆ ಮನಸ್ಸನ್ನು ಅದರ ಅಪಕ್ವ ಸ್ಥಿತಿಯಲ್ಲಿ ಎಂದರೆ ಹಾಲಿನ ಸ್ಥಿತಿಯಲ್ಲಿ ಸಂಸಾರವೆಂಬ ನೀರಿನ ಮೇಲೆ ಇಡಬೇಕು, ಆಗ ಹಾಲು, ನೀರೂ ಎರಡು ಬೆರೆತುಬಿಡುತ್ತದೆ. ಬಳಿಕ ಮನಸ್ಸು ನಿರ್ಲಿಪ್ತವಾಗಿ ತೇಲಲಾರದು.

ಎಂತಹ ಅದ್ಭುತ ಉದಾಹರಣೆ! ಮೊದಲು ಸಂಸಾರಿಗಳು, ಗೃಹಸ್ಥರು ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು ಎಂಬ ದೃಢ ನಿರ್ಧಾರ ಮಾಡಿದ ನಂತರ ಸರಿಯಾದ ಮಾರ್ಗದರ್ಶಕರೊಂದಿಗೆ ತನ್ನ ಸರ್ವ ಕರ್ತವ್ಯಗಳನ್ನು ಪಾಲಿಸುತ್ತಾ ಆಂತರ್ಯದಲ್ಲಿ ಮಾತ್ರ ಸದಾ ಭಗವದ್ ಚಿಂತನೆಗಳಲ್ಲಿ ಮುಳುಗಿರಬೇಕು. ಒಳ್ಳೆಯ ವಿಚಾರಗಳ ಚಿಂತನ- ಮಂಥನ ನಡೆಸುತ್ತ ಒಂದು ಸಮಯದಲ್ಲಿ ಹೇಗೆ ಮೊಸರಿನಿಂದ ಬೆಣ್ಣೆ ಮೇಲೆ ಬರಲಾರಂಭಿಸುತ್ತದೆಯೋ ಹಾಗೆ ಸಾತ್ವಿಕತೆಯ ಚಿಂತನೆ ಹೆಚ್ಚಾಗುತ್ತಾ ಹೋದಂತೆ ಪರಿಶುದ್ಧವಾಗಿ ಘನ ರೂಪಕ್ಕೆ ಬರುತ್ತದೆ ಎಂದು ರಾಮಕೃಷ್ಣ ಪರಮಹಂಸರು ತಿಳಿಸುತ್ತಾರೆ. ಸಂಸಾರದಲ್ಲಿದ್ದು ಭಗವದ್ ಸಾಕ್ಷಾತ್ಕಾರ ಪಡೆಯಬೇಕಾದರೆ ಒಂದು ಕೈಯಿಂದ ಭಗವಂತನ ಪಾದಪದ್ಮಗಳನ್ನು ಹಿಡಿದುಕೊಂಡಿರಬೇಕು. ಇನ್ನೊಂದು ಕೈಯಿಂದ ಕರ್ತವ್ಯಕ್ಕೆ ಬಂದ ಕೆಲಸಗಳನ್ನು ಮಾಡುತ್ತಿರಬೇಕು. ಯಾವಾಗ ಕ್ರಮೇಣ ಈ ಭವಬಂಧನದಿಂದ ಬಿಡುಗಡೆ ಹೊಂದುವೆವೋ ಆಗ ಎರಡೂ ಕೈಗಳಿಂದ ಭಗವಂತನ ಪಾದಪದ್ಮಗಳನ್ನು ಹಿಡಿದುಕೊಳ್ಳಬೇಕು. ಇದೇ ರಾಮಕೃಷ್ಣರು ತಿಳಿಸಿದ ಉಪಾಯ.

(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net