ಪಾಕ್‌ನ ನಕಲಿ ಪೈಲಟ್‌ಗಳ ಭಯಾನಕ ಸತ್ಯ ಬಯಲು! ವಿಶ್ವಾದ್ಯಂತ ತಲೆದಂಡ...

pilot
Published on

ಕರಾಚಿ: ಭಾರತದ ನೋಟನ್ನು ಮುದ್ರಿಸುವ ಮೂಲಕ ಕಳ್ಳನೋಟು ವ್ಯವಹಾರಕ್ಕಿಳಿದು ಸಿಕ್ಕಿಬಿದ್ದಿದ್ದ ಪಾಕಿಸ್ತಾನ, ಇದೀಗ ನಕಲಿ ಪೈಲಟ್‌ಗಳನ್ನು ಸೃಷ್ಟಿಸಿ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದ ಭಯಾನಕ ಸತ್ಯ ಇದೀಗ ಹೊರಬಿದ್ದಿದೆ.

ಪಾಕ್‌ನ ಮೋಸ, ವಂಚನೆಯ ಬುದ್ಧಿ ಹೊಸದೇನಲ್ಲ. ಆದರೆ ಪೈಲಟ್‌ಗಳಿಗೂ ನಕಲಿ ಪರವಾನಗಿ ನೀಡುವ ಮೂಲಕ ವಿಮಾನ ಪ್ರಯಾಣಿಕರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿರುವುದು ಇದೀಗ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಅನೇಕ ರಾಷ್ಟ್ರಗಳು ಪಾಕ್‌ನ ನೂರಾರು ಪೈಲೆಟ್‌ಗಳನ್ನು ಕಳೆದೆರಡು ದಿನಗಳಿಂದ ಅಮಾನತು ಮಾಡುತ್ತಿದೆ.

ಅಷ್ಟಕ್ಕೂ ಇಂಥದ್ದೊಂದು ಮೋಸದ ಜಾಲ ಬೆಳಕಿಗೆ ಬಂದುದು ಕಳೆದ ಮೇ 22ರಂದು ಕರಾಚಿಯ ಅಂತಾರಾಷ್ಟ್ರೀಯ ಏರ್‌ಲೈನ್ಸ್‌ನಲ್ಲಿ ನಡೆದ ಭೀಕರ ಅಪಘಾತದಿಂದಾಗಿ!

97 ಜನರ ಪ್ರಾಣವನ್ನು ತೆಗೆದುಕೊಂಡು ಈ ಅಪಘಾತಕ್ಕೆ ಮೂಲ ಕಾರಣ ಹುಡುಕುತ್ತಾ ಹೋದಾಗ ತನಿಖೆಯ ವೇಳೆ ತಿಳಿದುಬಂದದ್ದು ಪೈಲಟ್‌ಗಳ ಅಜಾಗರೂಕತೆ ಎಂಬುದು. ನಂತರ ಪೈಲಟ್‌ಗಳ ಹಿನ್ನೆಲೆ ಹುಡುಕಿದಾಗ ಅವರು ನಕಲಿ ಪರವಾನಗಿ ಹೊಂದಿರುವುದು ತಿಳಿದುಬಂದಿದೆ. ನಂತರ ಪಾಕಿಸ್ತಾನದಲ್ಲಿ ಶೇ.30ಕ್ಕೂ ಅಧಿಕ ಪೈಲೆಟ್‌ಗಳು ನಕಲಿ ಪರವಾನಗಿ ಹೊಂದಿರುವ ವಿಷಯವೂ ಬಹಿರಂಗಗೊಂಡಿತ್ತು. ಈ ಬಗ್ಗೆ ಖುದ್ದು ವಾಯುಯಾನ ಸಚಿವ ಗುಲಾಮ್ ಸರ್ವಾರ್ ಖಾನ್ ಅವರೇ ತಿಳಿಸಿದ್ದರು.

ಪೈಲಟ್‌ಗೆ ಆಯ್ಕೆಯಾಗುವ ಸಂದರ್ಭದಲ್ಲಿ ನಡೆಯುವ ಪರೀಕ್ಷೆಗೆ ಬೇರೆಯವರನ್ನು ಕಳಿಸುವ ಮೂಲಕ ಇಂಥದ್ದೊಂದು ಕಳ್ಳವ್ಯವಹಾರ ನಡೆಯುತ್ತಿರುವ ವಿಷಯ ತಿಳಿದಿದೆ. ಇದರ ತನಿಖೆಯನ್ನು ಇನ್ನಷ್ಟು ವಿಸ್ತರಣೆ ಮಾಡಿದ ಸಂದರ್ಭದಲ್ಲಿ ಪಾಕಿಸ್ತಾನದ ಪೈಲೆಟ್‌ಗಳು ವಿಯಾಟ್ನಾಂ, ಕುವೈತ್‌, ಗಲ್ಫ್‌ ಏರ್‌ಲೈನ್ಸ್‌ ಸೇರಿದಂತೆ ಹಲವಾರು ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ತಿಳಿದಿದೆ.

ಈ ವಿಷಯ ಜಗಜ್ಜಾಹೀರ ಆಗುತ್ತಿದ್ದಂತೆಯೇ, ಮುಜುಗರಕ್ಕೆ ಒಳಗಾದ ಪಾಕಿಸ್ತಾನವು ತನ್ನ ಅಂತಾರಾಷ್ಟ್ರೀಯ ಏರ್‌ಲೈನ್ಸ್‌ನಲ್ಲಿ (ಪಿಐಎ) ಕೆಲಸ ನಿರ್ವಹಿಸುತ್ತಿದ್ದ 141 ಪೈಲಟ್‌ಗಳನ್ನು ಕೆಲಸದಿಂದ ತೆಗೆದಿದೆ. 434 ಮಂದಿ ಅಂತಾರಾಷ್ಟ್ರಿಐ ಪೈಲೆಟ್‌ಗಳು ಇಲ್ಲಿ ಇದ್ದು, ಇವರ ಪೈಕಿ ಇನ್ನೆಷ್ಟು ಮಂದಿ ನಕಲಿ ಪರವಾನಗಿ ಹೊಂದಿದ್ದಾರೆ ಎಂಬುದು ಬೆಳಕಿಗೆ ಬರಬೇಕಿದೆ.

ವಿಮಾನಯಾನ ಸಚಿವರ ಸಂಕ್ಷಿಪ್ತ ಪ್ರಕಾರ, 753 - ದೇಶೀಯ ವಿಮಾನಯಾನಗಳನ್ನು ಹಾರಾಟ ನಡೆಸುತ್ತಾರೆ ಎನ್ನಲಾಗಿದ್ದು, ಇವರ ಅಸಲಿಯತ್ತು ಕೂಡ ತಿಳಿದುಬರಬೇಕಿದೆ.

ಈ ಬೆಳವಣಿಗೆಯ ನಡುವೆಯೇ ಕುವೈತ್ ಏರ್‌ಲೈನ್ಸ್‌ ತನ್ನ ಎಲ್ಲಾ 7 ಪಾಕಿಸ್ತಾನಿ ಪೈಲಟ್‌ಗಳನ್ನು ಅಮಾನತು ಮಾಡಿದೆ. ಅಷ್ಟೇ ಅಲ್ಲದೇ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದವರೇ ಆದ 56 ಮಂದಿ ಇಂಜಿನಿಯರ್‌ಗಳನ್ನು ಹಾಗೂ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದೆ. ಇದರ ಬೆನ್ನಲ್ಲೇ ಕತಾರ್, ಓಮನ್, ಎಮಿರೇಟ್ಸ್ ಮತ್ತು ವಿಯೆಟ್ನಾಂ ಏರ್‌ಲೈನ್ಸ್‌ಗಳಲ್ಲಿಯೂ ಪಾಕ್‌ ಪೈಲಟ್‌ಗಳ ಅಮಾನತು ಪ್ರಕ್ರಿಯೆ ಮುಂದುವರೆದಿದೆ.

ಕಳೆದ ವರ್ಷ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರ ಶೌರ್ಯವನ್ನು ಇಡೀ ವಿಶ್ವವೇ ಕೊಂಡಾಡಿತ್ತು. ಇದಕ್ಕೆ ಕಾರಣ, ಅಭಿನಂದನ್‌ ಅವರು ಚಲಾಯಿಸುತ್ತಿದ್ದ 50 ವರ್ಷಗಳಷ್ಟು ಹಳೆಯದಾದ ಮಿಗ್‌-21 ವಿಮಾನಕ್ಕೆ ಪಾಕ್‌ನ ಅತ್ಯಾಧುನಿಕ ಪಿಎಎಫ್‌-16 ಮುಖಾಮುಖಿಯಾಗಿತ್ತು. ಆದರೆ ಭಾರತದ ವಿಮಾನವು ಪಾಕ್‌ನ ವಿಮಾನವನ್ನು ಹೊಡೆದುರುಳಿಸಿತ್ತು. ಈ ಘಟನೆ ಭಾರತದ ಪೈಲೆಟ್‌ಗಳನ್ನು ಇಡೀ ವಿಶ್ವವೇ ಕೊಂಡಾಡುವಂತೆ ಮಾಡಿತ್ತು. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net