ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ವರ್ಷಾಚರಣೆ; ಪಾಕ್​ ಚರ್ಚೆಯಲ್ಲಿ ಭಾಗವಹಿಸಿದ್ದು ಒಬ್ಬ ಭಯೋತ್ಪಾದಕ, ಮತ್ತೊಬ್ಬ ವಂಚಕ

imran khan
Published on

ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಅದನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ ಆಗಸ್ಟ್​ 5ಕ್ಕೆ ಒಂದು ವರ್ಷ ಸಂದಿದೆ. ಈ ಬಗ್ಗೆ ವಿದೇಶದಲ್ಲಿನ ಪಾಕ್​ ರಾಯಭಾರ ಕಚೇರಿಗಳು ಅಲ್ಲಲ್ಲಿ ವರ್ಚುವಲ್​ ಸಂವಾದಗಳನ್ನು ಏರ್ಪಡಿಸಿದ್ದವು. ಈ ಪೈಕಿ ಒಂದರಲ್ಲಿ ಭಯೋತ್ಪಾದಕ ಆಹ್ವಾನ ಪಡೆದರೆ, ಇನ್ನೊಂದರಲ್ಲಿ ವಂಚಕನನ್ನು ವಿಶೇಷ ಅತಿಥಿಯನ್ನಾಗಿಸಿತ್ತು.

ಅಫ್ಘಾನಿಸ್ತಾನದಲ್ಲಿರುವ ಪಾಕ್​ ರಾಯಭಾರ ಕಚೇರಿ ಆಯೋಜಿಸಿದ್ದ ಸಂವಾದದಲ್ಲಿ ಗುಲ್ಬುದ್ದೀನ್​ ಹೆಕ್ಮತ್ತಿಯಾರ್​ ಭಾಗವಹಿಸಿದ್ದ. ಇದನ್ನು ಕಾಬೂಲ್​ನ ಕೊಲೆಗಡುಕ ಎಂದೇ ಕರೆಯಲಾಗುತ್ತದೆ. ಇನ್ನೊಂದು ವಿಶೇಷವೆಂದರೆ, ಮೂರು ವರ್ಷಗಳ ಹಿಂದಿನವರೆಗೂ ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿದ್ದ ಅಫ್ಘಾನಿಸ್ತಾನದ ಹಿಂಸಾಚಾರದಲ್ಲಿ ಈತನಿಗೆ ಇಸ್ಲಾಮಾಬಾದ್​ ಸಂಪೂರ್ಣ ಬೆಂಬಲ ನೀಡಿತ್ತು. ಈ ಚರ್ಚೆಯಲ್ಲಿ ಅಫ್ಘಾನಿಸ್ತಾನದ ಪಾಕ್​ ರಾಯಭಾರಿ ಜಹೀದ್​ ನಸ್ರುಲ್ಲಾ ಖಾನ್​ ಕೂಡ ಹಾಜರಿದ್ದ.

ಇನ್ನೊಂದೆಡೆ, ನ್ಯೂಯಾರ್ಕ್​ನಲ್ಲಿ ಆಯೋಜಿಸಲಾಗಿದ್ದ ಇಂಥದ್ದೇ ಸಂವಾದದಲ್ಲಿ ಗುಲಾಮ್ ನಬಿ ಫೈ ಪಾಲ್ಗೊಂಡಿದ್ದ. ಇದನ್ನು ಪಾಕ್​ನ ವಿಶ್ವಸಂಸ್ಥೆ ರಾಯಭಾರ ಕಚೇರಿ ಆಯೋಜಿಸಿತ್ತು. ಈ ಗುಲಾಮ್​ ನಬಿ ಫೈ ಅಮೆರಿಕ ಕೋರ್ಟ್​ನಿಂದ 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ.

ಕಾಶ್ಮೀರದ ವಿಚಾರದಲ್ಲಿ ಅಮೆರಿಕದ ಮೇಲೆ ಪ್ರಭಾವ ಬೀರಲು ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್​ಐ 35 ಲಕ್ಷ ಡಾಲರ್​ ವರ್ಗಾಯಿಸಿದ್ದನ್ನು ಮುಚ್ಚಿಟ್ಟಿದ್ದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ. ಇಂಥವರನ್ನು ಸೇರಿಸಿಕೊಂಡು ಜಮ್ಮು ಕಾಶ್ಮೀರದ ಸ್ಥಾನಮಾನದ ಬಗ್ಗೆ ಚರ್ಚೆ ನಡೆಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್​ಗೆ ಮುಖಭಂಗ ಉಂಟು ಮಾಡಿದೆ.

ಇಂಥದ್ದೇ ಸಂವಾದ ಭಾರತದ ಜತೆ ಸಂಬಂಧಗಳನ್ನು ಕೆಡಿಸಿಕೊಂಡಿರುವ ಮಲೇಷ್ಯಾದಲ್ಲೂ ಪಾಕ್​ ರಾಯಭಾರ ಕಚೇರಿಯಿಂದ ಏರ್ಪಡಾಗಿತ್ತು. ಇದರಲ್ಲಿ ಸ್ವತಃ ಪ್ರಧಾನಿ ಮೊಹತೀರ್​ ಮಹಮ್ಮದ್​ ಕೂಡ ಭಾಗವಹಿಸಿದ್ದರು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಭಾರತದ ವಿರುದ್ಧ ಮಾತನಾಡಿದ್ದಕ್ಕೆ ಮೊಹತೀರ್​ಗೆ ಧನ್ಯವಾದ ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net