

ನವದೆಹಲಿ: ಶೈಕ್ಷಣಿಕ ಸಂಸ್ಥೆಗಳ ಮರು ಆರಂಭಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಇದರಂತೆ ಸೆಪ್ಟೆಂಬರ್ 1ರಿಂದ ನವೆಂಬರ್ 14ರವರೆಗೆ ಹಂತಹಂತಗಳಲ್ಲಿ ಶಾಲಾ- ಕಾಲೇಜುಗಳನ್ನು ಆರಂಭಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ.
ಶಿಕ್ಷಣ ಸಂಸ್ಥೆಗಳ ಆರಂಭದ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕಾರ್ಯದರ್ಶಿಗಳ ಗುಂಪು ಚರ್ಚೆ ನಡೆಸಿದೆ. ಇದನ್ನು ಕೇಂದ್ರ ಸಚಿವ ಡಾ. ಹರ್ಷವರ್ಧನ್ ನೇತೃತ್ವದ ಕೋವಿಡ್-19 ಕುರಿತಾದ ಸಚಿವರ ಗುಂಪಿಗೆ ಸಲ್ಲಿಸಿದೆ.
ಆಗಸ್ಟ್ 31ರ ನಂತರ ರಾಜ್ಯಗಳಿಗೆ ಸೂಚಿಸಲಾಗುವ ಅನ್ಲಾಕ್ 4.0 ಮಾರ್ಗಸೂಚಿಯನ್ವಯ ಇದನ್ನು ಮಾರ್ಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ರಾಜ್ಯ ಸರ್ಕಾರಗಳ ತೀರ್ಮಾನವೇ ಅಂತಿಮವಾಗಿರಲಿದೆ.
ಯಾವಾಗ ಮತ್ತು ಹೇಗೆ ಮಕ್ಕಳನ್ನು ತರಗತಿಗಳಿಗೆ ಕರೆತರಬೇಕು ಎಂಬ ನಿರ್ಧಾರವನ್ನು ರಾಜ್ಯ ಸರ್ಕಾರಗಳೇ ಕೈಗೊಳ್ಳಲಿವೆ. ಕೇಂದ್ರದಿಂದ ಅನುಮತಿ ನೀಡುವುದು ಅಥವಾ ನಿರ್ಬಂಧಗಳನ್ನು ಸಡಿಲಿಸಲಾಗುತ್ತದೆ. ಇದಕ್ಕೆ ಕೇಂದ್ರದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (SOP) ಪಾಲಿಸಬೇಕಾಗುತ್ತದೆ.
ಶಾಲಾ-ಕಾಲಾಜುಗಳ ಆರಂಭಕ್ಕೆ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಶಿಕ್ಷಣ ಇಲಾಖೆ ಜುಲೈನಲ್ಲಿ ಸಮೀಕ್ಷೆಯೊಂದನ್ನು ನಡೆಸಿ ಸಿದ್ಧಪಡಿಸಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಸಿದ್ಧರಿಲ್ಲ ಎಂಬುದು ಕೂಡ ಈ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಆದರೆ, ಶಾಲೆಯಿಂದ ಹೊರಗುಳಿಯುವುದರಿಂದ ಬಡಮಕ್ಕಳು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಹಲವು ರಾಜ್ಯ ಸರ್ಕಾರಗಳು ಕೇಂದ್ರದ ಮುಂದೆ ವಾದ ಮಂಡಿಸಿವೆ. ಕೋವಿಡ್ ಪ್ರಕರಣಗಳು ಕಡಿಮೆಯಿರುವ ರಾಜ್ಯಗಳು ಶಾಲಾರಂಭಕ್ಕೆ ಒಲವು ತೋರಿವೆ. ಅದರಲ್ಲೂ ಹಿರಿಯ ತರಗತಿಗಳನ್ನು ಮೊದಲು ಶುರು ಮಾಡಲಿಚ್ಛಿಸಿವೆ ಎಂದು ಕೇಂದ್ರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ; ಆ.10ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ
ಮಾರ್ಗಸೂಚಿಯಲ್ಲೇನಿದೆ?: ಹಂತ ಹಂತವಾಗಿ ಶಾಲಾರಂಭಕ್ಕೆ ಯೋಜಿಸಲಾಗಿದೆ. ಮೊದಲ 15 ದಿನ 10-12ನೇ ತರಗತಿ ವಿದ್ಯಾರ್ಥಿಗಳು ಕ್ಲಾಸ್ಗೆ ಹಾಜರಾಗಲಿದ್ದಾರೆ. ಒಂದೊಂದು ತರಗತಿ ವಿದ್ಯಾರ್ಥಿಗಳು ನಿಗದಿತ ದಿನದಂದು ಶಾಲೆಗೆ ಹಾಜರಾಗಲಿದ್ದಾರೆ. ಅದರಲ್ಲೂ ಆಯಾ ಸೆಕ್ಷನ್ನ ಅರ್ಧದಷ್ಟು ವಿದ್ಯಾರ್ಥಿಗಳಷ್ಟೇ ಶಾಲೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ.
ಶಿಫ್ಟ್ನಲ್ಲಿ ತರಗತಿ: ಹಿಂದಿನಂತೆ ಪೂರ್ಣ ಅವಧಿಗೆ ಶಾಲೆ- ಕಾಲೇಜುಗಳು ತೆರೆದಿರುವುದಿಲ್ಲ. ವಿದ್ಯಾರ್ಥಿಗಳು 5-6 ತಾಸಿನ ಬದಲು 2-3 ತಾಸಷ್ಟೇ ಶಾಲೆಯಲ್ಲಿರಬೇಕು. ಅದರಲ್ಲೂ ಶಾಲೆಗಳು ಶಿಫ್ಟ್ನಲ್ಲಿ ಕಾರ್ಯ ನಿರ್ವಹಿಸಲಿವೆ. ಅಂದರೆ, ಬೆಳಗ್ಗೆ 8ರಿಂದ 11 ಗಂಟೆಗೆ ಒಂದು ಶಿಫ್ಟ್, ಮಧ್ಯಾಹ್ನ 12-3 ಗಂಟೆ ಮತ್ತೊಂದು ಶಿಫ್ಟ್ ಇರಲಿದೆ.
ಈ ನಡುವೆ ಮಧ್ಯಾಹ್ನದ ಊಟದ ಅವಧಿಯಲ್ಲಿ ಒಂದು ತಾಸು ಶಾಲೆಯಲ್ಲಿ ಸ್ಯಾನಿಟೈಸ್ ಮಾಡಬೇಕಾಗುತ್ತದೆ. ಪ್ರತಿದಿನ ಒಟ್ಟು ಬೋಧಕರ ಪೈಕಿ ಶೇ.33 ಶಿಕ್ಷಕರನ್ನಷ್ಟೇ ಬಳಸಿಕೊಳ್ಳಬಹುದು. ಇಷ್ಟೇ ಪ್ರಮಾಣದ ವಿದ್ಯಾರ್ಥಿಗಳನ್ನು ಶಾಲೆಗೆ ಹಾಜರಾಗಲು ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.
ಪ್ರಾಥಮಿಕ- ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳಿಗೆ ಆನ್ಲೈನ್ ಕ್ಲಾಸ್ಗಳನ್ನು ಮುಂದುವರಿಸಲು ಉದ್ದೇಶಿಸಲಾಗಿದೆ. 10-12ನೇ ತರಗತಿಯ ಮಕ್ಕಳು ಶಾಲೆಗೆ ಹಾಜರಾಗುವುದು ಆರಂಭವಾದ ನಂತರ 6- 9ನೇ ಕ್ಲಾಸ್ ಮಕ್ಕಳಿಗೆ ಅವಕಾಶವಿರಲಿದೆ. ಒಂದು ವೇಳೆ ಹೈಸ್ಕೂಲ್ ಹಾಗೂ ಪ್ರಾಥಮಿಕ ಶಾಲೆಗಳು ಒಟ್ಟಿಗೆ ಇದ್ದರೆ, ಪ್ರಾಥಮಿಕ ಶಾಲೆ ಕೊಠಡಿಗಳನ್ನು ಪ್ರೌಢಶಾಲೆ ಮ್ಕಕಳಿಗಾಗಿ ಬಳಸಿಕೊಳ್ಳಬಹುದು.
ಸ್ವಿಜರ್ಲೆಂಡ್ ಸೇರಿ ಹಲವು ದೇಶಗಳಲ್ಲಿ ಶಾಲಾರಂಭಕ್ಕೆ ಕೈಗೊಳ್ಳಲಾಗಿರುವ ಕ್ರಮಗಳನ್ನು ಅಧ್ಯಯನ ಮಾಡಿದ್ದೇವೆ. ಅದರಂತೆ ಇಲ್ಲಿಯೂ ವ್ಯವಸ್ಥೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಈಶಾನ್ಯ ರಾಜ್ಯಗಳು, ಹಿಮಾಚಲಪ್ರದೇಶ, ಉತ್ತರಾಖಂಡ್ ಹಾಗೂ ಕೆಲ ಕೇಂದ್ರಾಡಳಿತ ಪ್ರದೇಶಗಳು ಶಾಲಾರಂಭಕ್ಕೆ ಸಿದ್ಧವಾದಂತಿವೆ. ಕೇಂದ್ರದ ಮಾರ್ಗಸೂಚಿ ಬಳಿಕ ರಾಜ್ಯಗಳು ಅಂತಿಮ ನಿರ್ಧಾರ ಕೈಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.