

ನವದೆಹಲಿ: 75ನೇ ಗಣರಾಜ್ಯೋತ್ಸವ ಮುನ್ನಾ ದಿನ ಕೇಂದ್ರ ಸರ್ಕಾರವು 2024ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಲವಾರು ಗಣ್ಯರ ಪೈಕಿ ವಿವಿಧ ಕ್ಷೇತ್ರಗಳಲ್ಲಿನ ಕೊಡುಗೆಗಾಗಿ ಕರ್ನಾಟಕದ ಇಬ್ಬರು ಈ ಬಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮ ಪ್ರಶಸ್ತಿಯನ್ನು ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ - ಹೀಗೆ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಕಲೆ-ಸಾಹಿತ್ಯ, ಸಮಾಜ ಸೇವೆ, ಸಾರ್ವಜನಿಕ ವ್ಯವಹಾರಗಳು ಇತ್ಯಾದಿ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆಯೊಂದಿಗೆ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳಿಗೆ ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.
ಈ ಪ್ರಶಸ್ತಿಗಳನ್ನು ಭಾರತದ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದಲ್ಲಿ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಸಮಾರಂಭ ಆಯೋಜಿಸಿ ಪ್ರಶಸ್ತಿ ನೀಡುತ್ತಾರೆ. ಈ ಬಾರಿ 34 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕರ್ನಾಟಕದ ಮೈಸೂರು ಮೂಲದ ಸೋಮಣ್(66) ಹಾಗೂ ಪ್ರೇಮಾ ದೇವರಾಜ್ (72) ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೈಸೂರು ಮೂಲದವರಾದ ಸೋಮಣ್ಣ (66) ಜೇನು ಕುರುಬ ಬುಡಕಟ್ಟು ಸಮುದಾಯದ ಹಕ್ಕುಗಳಿಗಾಗಿ ಕಳೆದ 4 ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳ ಜನರ ರಕ್ಷಣೆ ಹಾಗೂ ಸುರಕ್ಷತೆ ಬಗ್ಗೆ ಇವರು ನಿರಂತರವಾಗಿ ಸರ್ಕಾರದ ಗಮನವನ್ನು ಸೆಳೆಯುತ್ತ ಬಂದಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ಪ್ರೇಮಾ ದೇವರಾಜ್ (72) ಅವರು ಅಗ್ನಿ ರಕ್ಷಾ ಎಂಬ ಸರ್ಕಾರೇತರ ಸಂಸ್ಥೆಯ ಮೂಲಕ ಸುಟ್ಟ ಗಾಯಗಳಿಗೆ ತುತ್ತಾದ 25, 000ಕ್ಕೂ ಅಧಿಕ ಮಂದಿಗೆ ಉಚಿತ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಕುರಿತು 3 ಪುಸ್ತಕಗಳನ್ನು ಬರೆದಿದ್ದಾರೆ. 8 ನೇ ವಯಸ್ಸಿಗೆ ಗ್ಯಾಸ್ ದುರಂತದಲ್ಲಿ ಶೇ.50ರಷ್ಟು ಸುಟ್ಟ ಗಾಯಗಳಿಂದ ಬದುಕುಳಿದಿದ್ದ ಇವರು ಬಾಲ್ಯದಲ್ಲಿ 14 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ವೆಲ್ಲೂರು ಕಾಲೇಜಿನಲ್ಲಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.