ಕೋತಿಗಳ ಮೇಲೆ ಯಶಸ್ವಿಯಾಯ್ತು ಕರೊನಾ ಲಸಿಕೆ...!

Monkey
Published on

ಲಂಡನ್​: ಕರೊನಾ ಲಸಿಕೆ ಕಂಡು ಹಿಡಿಯಲು ಜಗತ್ತಿನಾದ್ಯಂತ ಔಷಧ ಕಂಪನಿಗಳು ಪೈಪೋಟಿ ನಡೆಸಿವೆ. ನೂರಕ್ಕೂ ಅಧಿಕ ಕಂಪನಿಗಳು ಈ ಕಾರ್ಯದಲ್ಲಿ ತೊಡಗಿವೆ. ಆದರೆ, ಈ ಪೈಕಿ 7-8 ಸಂಸ್ಥೆಗಳು ಇದರಲ್ಲಿ ಮುಂಚೂಣಿಯಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ತಂಡ ಲಸಿಕೆ ಸಂಶೋಧನೆಯ ಮಹತ್ವದ ಘಟ್ಟವೊಂದರಲ್ಲಿ ಯಶಸ್ಸು ಪಡೆದಿದೆ.

ಕೋತಿಗಳ ಮೇಲೆ ಪ್ರಯೋಗಿಸಿದ್ದ ಔಷಧ ಪರೀಕ್ಷೆಯ ಫಲಿತಾಂಶ ಲಭ್ಯವಾಗಿದೆ. ಇದು ಅತ್ಯಂತ ಪರಿಣಾಮಕಾರಿಯಾಗಿರುವುದು ಕಂಡು ಬಂದಿದೆ. ಕರೊನಾ ವೈರಸ್​ ನಿಗ್ರಹಿಸಲು ಕೋತಿಗಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿರುವುದು ಗೊತ್ತಾಗಿದೆ. ಜತೆಗೆ, ಯಾವುದೇ ಅಡ್ಡಪರಿಣಾಮಗಳು ಕಂಡುಬಾರದಿರುವುದು ಅತ್ಯಂತ ಭರವಸೆದಾಯಕ ಅಂಶವಾಗಿದೆ ಎಂದು ಸಂಶೋಧನಾ ತಂಡ ಹೇಳಿದೆ.

ಈ ಫಲಿತಾಂಶವನ್ನು ಉನ್ನತ ಮಟ್ಟದ ತಜ್ಞರ ತಂಡ ಪರಿಶೀಲನೆ ನಡೆಸಬೇಕಿದೆ. ಆದರೆ, ಲಸಿಕೆಯ ಒಂದು ಡೋಸ್​ನಿಂದಲೇ ತೀವ್ರ ಹಾನಿಗೊಳಗಾಗಿರುವ ಶ್ವಾಸಕೋಶ ಹಾಗೂ ಮತ್ತಿತರ ಅಂಗಗಳಿಗೆ ಕರೊನಾ ವೈರಸ್​ ಇನ್ನಷ್ಟು ಹಾನಿ ಉಂಟುಮಾಡುವುದನ್ನು ತಪ್ಪಿಸಬಹುದು ಎಂದು ತಂಡ ತಿಳಿಸಿದೆ.

ಶ್ವಾಸಕೋಶಗಳಲ್ಲಿ ಕರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಲಸಿಕೆ ನೀಡಿದ ಕೋತಿಗಳಲ್ಲಿ ನ್ಯುಮೋನಿಯಾ ಕಂಡುಬಂದಿಲ್ಲ. ಹೆಚ್ಚು ಸೋಂಕಿಗೆ ಒಳಗಾಗಿರುವ ಕೋತಿಗಳಲ್ಲೂ ಪುಪ್ಪುಸ ಜ್ವರ ಕಂಡು ಬಂದಿಲ್ಲ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ತಂಡ ಈಗಾಗಲೇ ಮಾನವರ ಮೇಲೂ ಲಸಿಕೆಯನ್ನು ಪ್ರಯೋಗ ಮಾಡಿದೆ. ಅದರ ಫಲಿತಾಂಶ ಇನ್ನಷ್ಟೇ ಬರಬೇಕಿದೆ. ಅದಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೇವೆ. ಆದರೆ, ಕೋತಿಗಳ ಮೇಲೆ ಕಂಡು ಬಂದಿರುವ ಪರಿಣಾಮಗಳು ಕ್ಲಿನಿಕಲ್​ ಟ್ರಯಲ್​ಗೆ ಪೂರಕವಾಗಿವೆ ಎಂದು ಲಂಡನ್​ ಕಿಂಗ್ಸ್​ ಕಾಲೇಜಿನ ಪ್ರಾಧ್ಯಾಪಕ ಡಾ.ಪೆನ್ನಿ ವಾರ್ಡ್​ ತಿಳಿಸಿದ್ದಾರೆ.

ಆಕ್ಸ್​ಫರ್ಡ್​ ವಿವಿ ಸಂಶೋಧನಾ ತಂಡವನ್ನು ಮುನ್ನಡೆಸುತ್ತಿರುವ ಡಾ. ಸಾರಾ ಗಿಲ್ಬರ್ಟ್​ ಸೆಪ್ಟಂಬರ್​ ಒಳಗಾಗಿ ಲಸಿಕೆ ಸಿದ್ಧವಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಲಸಿಕೆ ಪಡೆದವರು ಮತ್ತೆ ಸೋಂಕಿಗೆ ಒಳಗಾಗಕೂಡದು. ಇದೇ ಮುಂದಿನ ಹಂತದ ಪರೀಕ್ಷೆಯಾಗಿದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ಸದ್ಯ ಯುನೈಟೆಡ್​ ಕಿಂಗ್​ಡಂನಲ್ಲಿ ಕ್ಲಿನಿಕಲ್​ ಟ್ರಯಲ್​ ನಡೆಯುತ್ತಿದೆ. ಇದಾದ ಬಳಿಕ ಕೀನ್ಯಾದಲ್ಲಿ ಮಾನವರ ಮೇಲೆ ಪ್ರಯೋಗ ನಡೆಸಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಕೀನ್ಯಾ ಸರ್ಕಾರದ ಅನುಮತಿ ಪಡೆಯಲಾಗುತ್ತಿದೆ. ಜತೆಗೆ, ಅಗತ್ಯವಿರುವವರಿಗೆ ಲಸಿಕೆ ಲಭ್ಯವಾಗುವಂತಾಗಲು ಬೃಹತ್​ ಪ್ರಮಾಣದಲ್ಲಿ ಉತ್ಪಾದನೆಗೆ ಯೋಜನೆ ರೂಪಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net