

- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಟಿ
ಬೆಂಗಳೂರು: ಚುನಾವಣಾ ಪ್ರಚಾರ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಲಭಿಸುತ್ತಿರುವ ಜನಸ್ಪಂದನೆ ಹಾಗೂ ಜನಸಾಗರ ಕಂಡು ಬೆಚ್ಚಿಬಿದ್ದ ಕಾಂಗ್ರೆಸ್ ಪಕ್ಷ ವಿಚಲಿತವಾಗಿ ಅಮಿತ್ ಷಾ ವಿರುದ್ಧ ದೂರು ಸಲ್ಲಿಸಿದೆ ಎಂದು ಕೇಂದ್ರ ಸಚಿವೆ, ಪಕ್ಷದ ರಾಜ್ಯ ಚುನಾವಣೆ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಚಾಟಿ ಬೀಸಿದರು.
ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಗುರುವಾರ ಮಾದ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ನಂತರ ದೇಶ ಕಂಡ ಅತ್ಯಂತ ದಕ್ಷ ಗೃಹ ಸಚಿವ ಅಮಿತ್ ಷಾ. ಭಯೋತ್ಪಾದಕ ಚಟುವಟಿಕೆಗಳನ್ನು ಮಟ್ಡಹಾಕುವ ಜತೆಗೆ ಪಿಎಫ್ ಐ ನಂತಹ ವಿಚ್ಛಿದ್ರಕಾರಿ ಶಕ್ತಿಗಳನ್ನು ಹೆಡೆಮುರಿ ಕಟ್ಟಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶವ್ಯಾಪಿ ಭಯೋತ್ಪಾದಕ ಕೃತ್ಯಗಳು ನಡೆದವು. ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ಅಶಾಂತಿ, ಗಲಭೆಗಳು ಸೃಷ್ಟಿಯಾಗಿದ್ಸವು. ಪಿಎಫ್ ಐ ವಿರುದ್ಧದ 175 ಕೇಸ್ ಗಳನ್ನು ಹಿಂಪಡೆದು 1,700 ಭಯೋತ್ಪಾದಕರನ್ನು ಬಿಡುಗಡೆ ಮಾಡಿ ಕುಮ್ಮಕ್ಕು ಕೊಟ್ಟಿದ್ದು ಯಾರು ? ಎನ್ನುವುದು ರಾಜ್ಯಕ್ಕೆ ಗೊತ್ರಿದೆ. ಟಿಪ್ಪು ಜಯಂತಿ ಸಂಘರ್ಷ, ಜಾತಿಗಳ ಮಧ್ಯೆ ಜಗಳ ಹುಟ್ಟಿಹಾಕಲಾಗಿತ್ತು ಎಂದು ಆರೋಪಿಸಿದರು.
ಈಗಲೂ ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದರೆ ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವುದಾಗಿ ಹೇಳುತ್ತಿದ್ದು, ಅಶಾಂತಿಗೆ ಕಾರಣವಾದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಶೆಟ್ಟರ್ಗೆ ಜಾತಿ ನೆನಪು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವುದೇ ಜಾತಿ-ವರ್ಗಕ್ಕೆ ಸೀಮಿತರಲ್ಲ. ಅಂತಹ ರಾಜಕಾರಣವನ್ನೂ ಮಾಡಿಲ್ಲ. ಜಗದೀಶ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಟೋಪಿ ಹಾಕಿಕೊಂಡ ನಂತರ ಜಾತಿ ನೆನಪಾಗಿದೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿದ್ದಾರೆಯೇ ಹೊರತು ಜಾತಿ ನಾಯಕರಾಗಿ ಅಲ್ಲವೆಂದು ಶೆಟ್ಟರ್ಗೆ ಕುಟುಕಿದರು.
ಮೋದಿ ಕಾರ್ಯಕ್ರಮ: ಪ್ರಧಾನಿ ನರೇಂದ್ರ ಮೋದಿಯವರ ವರ್ಚುವಲ್ ಸಂವಾದದಲ್ಲಿ 69 ಲಕ್ಷ ಕಾರ್ಯಕರ್ತರು ಭಾಗವಹಿಸಿದ್ದರು. ಏ 29 ಮತ್ತು 30ರಂದು ರಾಜ್ಯದ ಆರು ಪ್ರಚಾರ ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ. ಬೆಂಗಳೂರು, ಮೈಸೂರಿನಲ್ಲಿ ರೋಡ್ ಶೋ ಒಳಗೊಂಡಿದೆ. ಜತೆಗೆ ಮನ್ ಕೀ ಬಾತ್ 100ನೇ ಆವೃತ್ತಿ ಕಾರ್ಯಕ್ರಮವನ್ನು ವಿಶ್ವ ದಾಖಲೆ ಸ್ಥಾಪಿಸುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.