

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕನ್ನಡ ನಾಡು, ಕನ್ನಡ ಚಿತ್ರರಂಗ ಎಲ್ಲಾ ಭಾಷೆಯವರನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿ, ತನ್ನವರೆಂದು ಅಪ್ಪಿಕೊಳ್ಳುವ ನಾಡು. ಪರಭಾಕ್ಷಎಯಿಂದ ಬಂದ ನಟ, ನಟಿಯರು ಕೂಡ ಕನ್ನಡದ ಬಗ್ಗೆ ಅಪಾರ ಗೌರವ ಹಾಗೂ ಪ್ರೀತಿ ತೋರುವ ಅನೇಕ ಉದಾಹರಣೆಗಳಿವೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನೇಹಾ ಸಕ್ಸೇನಾ, ಸೋನಿ ಮುಲೇವ ಕನ್ನಡ ಪ್ರೇಮದ ಬಗ್ಗೆ ಹಂಚಿಕೊಂಡಿದ್ದಾರೆ..
ಕನ್ನಡವೇ ನನ್ನ ಮೊದಲ ಆದ್ಯತೆ
ರಾಜಸ್ಥಾನ ಮೂಲದ ಮಾರ್ವಾಡಿ ಕುಟುಂಬದ ಹುಡುಗಿ ಸೋನಿ ಮುಲೇವ. ಸದ್ಯ ಕುಟುಂಬ ಸಮೇತ ಮೈಸೂರಿನಲ್ಲಿ ನೆಲೆಸಿರುವ ಅವರು, ಕನ್ನಡ ಕಲಿತು ಚಿತ್ರರಂಗಕ್ಕೆ ಬಂದವರು. ‘ಒಂದಂಕೆ ಕಾಡು’, ‘ಜೆರ್ಸಿ ನಂಬರ್ 10’, ‘ಬೆಂಗಳೂರು ಬಾಯ್ಸ’ ಚಿತ್ರಗಳಲ್ಲಿ ನಟಿಸಿರುವ ಸೋನಿ, ‘ಅಪ್ಪನಿಗೆ ಕನ್ನಡವೆಂದರೆ ಅತ್ಯಂತ ಪ್ರೀತಿ. ನನ್ನಲ್ಲಿ ಕನ್ನಡ ಪ್ರೀತಿ ಮೂಡಲು ಅವರೇ ಕಾರಣ. ಎಂಟನೇ ತರಗತಿಯಿಂದ 12ನೇ ತರಗತಿವರೆಗೆ ನಾನು ಕನ್ನಡವನ್ನೇ ಮೊದಲ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದೆ. ಆಗಿನಿಂದಲೂ ಕನ್ನಡವೆಂದರೆ ನನಗೆ ಎಲ್ಲಿಲ್ಲದ ಪ್ರೀತಿ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ. ಬೇರೆ ಭಾಷೆಗಳಲ್ಲಿ ಅವಕಾಶ ಸಿಕ್ಕರೂ ಸೋನಿಗೆ ಕನ್ನಡವೇ ಮೊದಲ ಆದ್ಯತೆಯಂತೆ. ‘ಬೇರೆ ಕಡೆಯಿಂದ ಬಂದು ಕನ್ನಡ ಕಲಿತ ನನ್ನನ್ನು ಕನ್ನಡ ಚಿತ್ರರಂಗದಲ್ಲಿ ಗುರುತಿಸಿದ್ದಾರೆ. ಧಾರಾವಾಹಿ, ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ನಾನು ಕನ್ನಡದಲ್ಲಿಯೇ ಮೊದಲು ಡೆಬ್ಯೂ ಮಾಡಬೇಕು ಅನ್ನೋದು ಅಪ್ಪನ ಆಸೆಯೂ ಆಗಿತ್ತು. ಅದು ನೆರವೇರಿದೆ. ಬೇರೆ ಭಾಷೆಗಳಲ್ಲಿ ಅವಕಾಶ ಸಿಕ್ಕರೂ ನನಗೆ ಕನ್ನಡವೇ ಮೊದಲು. ಇದು ನನ್ನ ಭಾಷೆ, ನನ್ನ ಮನೆ ಎಂಬ ಭಾವ’ ಎಂದು ಹೇಳಿಕೊಳ್ಳುತ್ತಾರೆ ಸೋನಿ.
ಇದನ್ನೂ ಓದಿ : ಲಿಯೋ’ ಚಿತ್ರ ತಂಡ ‘ಸಕ್ಸಸ್ ಮೀಟ್’ ಆಯೋಜಿಸುತ್ತಿರುವುದೇಕೆ?
ಕನ್ನಡತಿಯೆಂದೇ ಗುರುತಿಸುತ್ತಾರೆ...
ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದು ನನಗೊಂದು ಅದ್ಭುತ ಅನುಭವ. ನನ್ನನ್ನು ಜನ ಈಗಲೂ ‘ತ್ರಿವಿಕ್ರಮ’ ಚಿತ್ರದ ತ್ರಿಷಾ ಪಾತ್ರದಿಂದ ಗುರುತಿಸುತ್ತಾರೆ. ಜಾಲತಾಣದಲ್ಲಿ ಆ ಚಿತ್ರದ ವಿಡಿಯೋ ಹಾಗೂ ಹಾಡುಗಳ ಬಿಟ್‌ಗಳನ್ನು ಕಳುಹಿಸುತ್ತಿರುತ್ತಾರೆ. ಕನ್ನಡಿಗರು ನನ್ನನ್ನು ಆತ್ಮೀಯವಾಗಿ ಚಿತ್ರರಂಗಕ್ಕೆ ಬರಮಾಡಿಕೊಂಡರು. ಸ್ಮರಿಸಿಕೊಂಡರಎ ಖುಷಿಯಾಗುತ್ತದೆ. ಮುಂದೆ ಅವಕಾಶಗಳು ಸಿಕ್ಕಲ್ಲಿ ಇನ್ನೂ ಹೆಚ್ಚಿನ ಕನ್ನಡ ಸಿನಿಮಾಗಳಲ್ಲಿ ನಟಿಸಲು ಇಚ್ಛಿಸುತ್ತೇನೆ ಎನ್ನುತ್ತಾರೆ ಆಕಾಂಕ್ಷಾ ಶರ್ಮಾ.