ಅಂಗಾಂಗ ಕಸಿಗೂ ಕರೊನಾ ಕಸಿವಿಸಿ

Transplant problem 1
Published on

ಪಂಕಜ ಕೆ.ಎಂ.

ಬೆಂಗಳೂರು: ಅಂಗಾಂಗ ಕಸಿಗಾಗಿ ಕಾಯುತ್ತಿರುವ ರೋಗಿಗಳಿಗೂ ಕರೊನಾ ಸಂಕಷ್ಟ ತಂದಿಟ್ಟಿದ್ದು, ಮತ್ತಷ್ಟು ದಿನ ನೋವಿನಲ್ಲೇ ದಿನ ದೂಡುವುದು ಅನಿವಾರ್ಯ ಎದುರಾಗಿದೆ. ರಾಜ್ಯದಲ್ಲಿ ಅಂಗಾಂಗ ವೈಫಲ್ಯಕ್ಕೊಳಗಾಗಿರುವ 4,325 ಜನ ಕಸಿಗಾಗಿ ಹೆಸರು ನೋಂದಾಯಿಸಿ, ವರ್ಷಗಳಿಂದ ದಾನಿಗಳಿಗಾಗಿ ಕಾಯುತ್ತಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ ಮಿದುಳು ನಿಷ್ಕ್ರಿಯಗೊಂಡ 8 ಮಂದಿಯ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಆದರೆ, ಸೋಂಕಿನ ಭೀತಿಯಿಂದ ಕಸಿಗೆ ಅನುಮತಿ ದೊರೆಯದ ಕಾರಣ ಹತ್ತಾರು ಮಂದಿಯ ಜೀವ ಉಳಿಸಬಹುದಾದ ಅವಕಾಶ ಕೈತಪ್ಪಿ ಹೋಗಿದೆ.

ಹಿಂದೆ ಸರಿದ ದಾನಿಗಳು: ಈ ಮೊದಲು ಮಿದುಳು ನಿಷ್ಕ್ರಿಯಗೊಂಡರೆ ದಾನಿಗಳಿಂದ ಆರೋಗ್ಯಕರ ಅಂಗಾಂಗ ಪಡೆದು ಹೊಂದಿಕೆಯಾಗುವ ರೋಗಿಗಳನ್ನು ಪತ್ತೆ ಹಚ್ಚಿ ಕಸಿ ಮಾಡಲಾಗುತ್ತಿತ್ತು. ಆದರೆ, ಕರೊನಾ ವೈರಸ್ ವ್ಯಾಪಿಸಿದ ನಂತರ ದಾನಿಯ ಆರೋಗ್ಯ ಮತ್ತು ಅಂಗಾಂಗಳ ಪರೀಕ್ಷೆ ಜತೆಗೆ ಕರೊನಾ ಪರೀಕ್ಷೆ ಕಡ್ಡಾಯವಾಗಿದೆ. ಇದರಿಂದ ಅಂಗಾಂಗ ಪಡೆಯುವ ಪ್ರಕ್ರಿಯೆಯಲ್ಲಿ ವಿಳಂಬ ಆಗುವುದರಿಂದ ಕುಟುಂಬದ ಸದಸ್ಯರು ಹಿಂದೇಟು ಹಾಕುತ್ತಿದ್ದಾರೆ. ಈ ಮೊದಲು ಮಿದುಳು ನಿಷ್ಕ್ರಿಯ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ರೋಗಿಯನ್ನು ಸಂರ್ಪಸಿ ಅಂಗಾಂಗ ಪಡೆದು ದೇಹವನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಲಾಗುತ್ತಿತ್ತು. ಆದರೆ ಈಗ ಕರೊನಾ ಪರೀಕ್ಷೆ ನಡೆಸಿದ ನಂತರ ವರದಿಗಾಗಿ ಒಂದು ದಿನ ಕಾಯಬೇಕು. ನಂತರ ಉಳಿದ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತದೆ. ಮೊದಲು ಒಂದು ದಿನದಲ್ಲಿ ಆಗುತ್ತಿದ್ದ ಕೆಲಸಕ್ಕೆ ಈಗ 2-3 ದಿನ ಕಾಯಬೇಕಿದೆ. ಹೀಗಾಗಿ ಕುಟುಂಬ ಸದಸ್ಯರು ಅಂಗಾಂಗ ದಾನದಿಂದ ಹಿಂದೆ ಸರಿಯುತ್ತಿದ್ದಾರೆ.

ಸೋಂಕು ಭೀತಿ: ಇನ್ನು ಜೀವಂತ ಅಂಗಾಂಗ ದಾನಿಗಳಿಗೂ ಸೋಂಕಿನ ಭೀತಿ ಕಾಡುತ್ತಿದೆ. ಜೀವಂತವಾಗಿ ಇರುವವರು ಅಂಗಾಂಗಗಳ ದಾನ ಮಾಡುವುದನ್ನು ಮುಂದೂಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಸೂಚಿಸಿದೆ. ಲಾಕ್​ಡೌನ್ ಅವಧಿಯಲ್ಲಿ ಅಂಗಾಂಗ ದಾನಕ್ಕೆ ಅನುಮತಿ ನೀಡಿರಲಿಲ್ಲ. ಈಗ ಲಾಕ್​ಡೌನ್ ಸಡಿಲಿಕೆಯಾಗಿದ್ದು, ಅಂಗಾಂಗ ಕಸಿಗೆ ಸರ್ಕಾರ ಅನುಮತಿ ನೀಡಲು ನಿರ್ಧರಿಸಿದೆ. ಆದರೆ ಸೋಂಕು ಭೀತಿಯಿಂದಾಗಿ ದಾನಿಗಳೇ ಮುಂದೆ ಬರಲು ಯೋಚಿಸುತ್ತಿದ್ದಾರೆ. ಚಿಕಿತ್ಸೆ ನಂತರ ಅಂಗಾಂಗ ಕಸಿಗೆ ಒಳಗಾದವರಷ್ಟೇ ಅಂಗಾಂಗ ದಾನ ಮಾಡಿದವರೂ ಚೇತರಿಕೆ ಹೊಂದಲು ಸಮಯ ಬೇಕಾಗುತ್ತದೆ.

ನೋಂದಣಿಗೂ ಹಿಂದೇಟು: ಬೌರಿಂಗ್ ಮತ್ತು ಲೇಡಿ ಕರ್ಜನ್ ಸಂಶೋಧನಾ ಸಂಸ್ಥೆಯನ್ನು ಕರೊನಾ ವೈರಸ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರದ ಜೀವ ಸಾರ್ಥಕತೆ ಯೋಜನೆಯಡಿ ಕಳೆದ ಎರಡೂವರೆ ತಿಂಗಳಿನಿಂದ ಅಲ್ಲಿನ ಕಸಿ ರಹಿತ ಅಂಗ ಮರುಪಡೆಯುವಿಕೆ ಕೇಂದ್ರಕ್ಕೆ ಹೆಸರು ನೋಂದಾಯಿಸಲು ದಾನಿಗಳು ಮುಂದೆ ಬರುತ್ತಿಲ್ಲ. ಜಯನಗರ ಜನರಲ್ ಆಸ್ಪತ್ರೆಯಲ್ಲಿ ಶಂಕಿತರ ಕ್ವಾರಂಟೇನ್ ಮಾಡಲಾಗುತ್ತಿದೆ ಹೀಗಾಗಿ ಅಲ್ಲಿನ ಕೇಂದ್ರದಲ್ಲೂ ಇದೆ ಪರಿಸ್ಥಿತಿ. ಮಿದುಳು ನಿಷ್ಕ್ರಿಯಗೊಂಡು ಜೀವವೇ ಕೊನೆಯಾಗುವ ಹಂತದಲ್ಲಿ ವ್ಯಕ್ತಿ ಅಂಗಾಂಗ ದಾನ ಪ್ರಕ್ರಿಯೆಗೆ ಒಳಗಾದಲ್ಲಿ ಕನಿಷ್ಠ ಐದಾರು ಜೀವಗಳನ್ನು ಉಳಿಸಬಹುದಾಗಿದ್ದು, ಇಬ್ಬರಿಗೆ ದೃಷ್ಟಿ ಸಹ ನೀಡಬಹುದಾಗಿದೆ. ಅಂಗಾಂಗ ಕಸಿ ಬಗ್ಗೆ ಮೊದಲೇ ಜನರಿಗೆ ಅರಿವಿನ ಕೊರತೆ ಇದೆ. ಹೀಗಿರುವಾಗ ಕರೊನಾ ಭೀತಿ ದಾನಕ್ಕೆ ಮುಂದಾದವರನ್ನೂ ಹಿಂದೆ ಸರಿಸುತ್ತಿದೆ. ಇದರಿಂದ ರೋಗಿಗಳು ನರಳುವಂತಾಗಿದೆ ಎನ್ನುತ್ತಾರೆ ಜೀವ ಸಾರ್ಥಕತೆ ಯೋಜನೆ ಸಿಬ್ಬಂದಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net