

| ಸುಜಾತಾ ಎಸ್. ಪಾಟೀಲ್ ಕೈಗಾರಿಕೋದ್ಯಮಿ, ಕಲಬುರಗಿ
ಉದ್ಯೋಗಗಳನ್ನು ಅರಸಿ ಅಲೆದಾಡುವುದಕ್ಕಿಂತ ಉದ್ಯಮಿಗಳಾಗುವ ಯುವಜನತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಾಕಷ್ಟು ಅವಕಾಶಗಳಿವೆ. ಅವುಗಳ ಸದ್ಬಳಕೆಗೆ ಮುಂದಾಗಬೇಕಷ್ಟೆ. ಸರ್ಕಾರ ಭೂಮಿ ಬ್ಯಾಂಕ್ ಸ್ಥಾಪಿಸಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯೂ ನೆರವು ನೀಡುತ್ತಿದೆ. ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಕೈಗಾರಿಕೆಗಳು ವಿಸ್ತರಣೆಯಾಗಬೇಕೆಂಬ ಉದ್ದೇಶದಿಂದ ಉತ್ತರ ಕರ್ನಾಟಕದಲ್ಲಿ ಸ್ಥಾಪಿಸುವವರಿಗೆ ಹೆಚ್ಚಿನ ವಿನಾಯ್ತಿ ಹಾಗೂ ರಿಯಾಯ್ತಿಗಳಿವೆ. ಎಂಎಸ್ಎಂಇಗಳಿಗೆ ಆತ್ಮನಿರ್ಭರ ಯೋಜನೆಯಲ್ಲಿಯೂ ಸೌಲಭ್ಯ ಸಿಗುತ್ತದೆ. ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗದ ಅವಕಾಶಗಳನ್ನು ಸಣ್ಣ ಪ್ರಮಾಣದಲ್ಲಿ ಸೃಷ್ಟಿಸಬಹುದಾಗಿದೆ. ಐಟಿ-ಬಿಟಿ ಸೇರಿದಂತೆ ತಂತ್ರಜ್ಞಾನ ವಲಯದಲ್ಲಿಯೂ ಕೈಗಾರಿಕೆಗಳನ್ನು ಸ್ಥಾಪಿಸಬಹುದಾಗಿದೆ. ನವೋದ್ಯಮಗಳಿಗೆ ದುಡಿಯುವ ಬಂಡವಾಳ ಕೊಡಿಸುವ ಯೋಜನೆಯೂ ಇದೆ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಕೈಗಾರಿಕೆಗೆ ಅವಕಾಶಗಳಿವೆ. ಬಳ್ಳಾರಿ, ಚಿತ್ರದುರ್ಗದಲ್ಲಿ ಜವಳಿ, ರೆಡಿಮೇಡ್ ಗಾರ್ವೆಂಟ್ಸ್ ಉದ್ಯಮ, ಯಾದಗಿರಿಯಲ್ಲಿ ಫಾರ್ವ ಕಂಪೆನಿಗಳು, ಕಲಬುರಗಿಯಲ್ಲಿ ಸೋಲಾರ್ ಪ್ಯಾನಲ್ಗಳ ಜೋಡಣೆ, ಅಲ್ಲದೇ ಬೇರೆ ಬೇರೆ ಕಡೆ ತೋಟಗಾರಿಕೆ ಬೆಳೆ ಆಧಾರಿತ ಉದ್ಯಮ, ಅಣಬೆಯಿಂದ ಬಿಸ್ಕತ್ ತಯಾರಿ ಹಾಗೂ ರಫ್ತು, ಬಯೋ ಫರ್ಟಿಲೈಸರ್ ಉತ್ಪಾದನೆಯಂಥ ಅವಕಾಶಗಳಿವೆ. ಸರ್ಕಾರದ ನೆರವೂ ಸಿಗುತ್ತದೆ. ಕೈಗಾರಿಕೆ ಸ್ಥಾಪಿಸಲು ಮುಂದಾಗುವ ಮಹಿಳೆಯರಿಗೆ ರಾಜ್ಯದ ಮೂರು ಕಡೆ ಪ್ರತ್ಯೇಕ ಪಾರ್ಕ್ಗಳ ನಿರ್ಮಾಣ ಮಾಡಲಾಗಿದೆ. ಡಿಜಿಟಲ್ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಅವಕಾಶವಿದೆ.