

ಬೆಂಗಳೂರು: ನಟ-ನಿರ್ದೇಶಕ-ನಿರ್ಮಾಪಕ ರಿಷಬ್ ಶೆಟ್ಟಿಗೆ ಈ ವರ್ಷ ಹೊಸ ವರ್ಷದ ಖುಷಿ ಜತೆಗೆ ಮತ್ತೆರಡು ಖುಷಿ ಸೇರಿಕೊಂಡಿವೆ. ಮಾತ್ರವಲ್ಲ, ಹ್ಯಾಪಿ ನ್ಯೂ ಇಯರ್ ಜತೆಗೇ ಅವರು ಇನ್ನೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದರಲ್ಲೂ ಹೊಸ ವರ್ಷದ ಹಿಂದಿನ ದಿನವೇ ಅವರು ತಮ್ಮ ಮುಂದಿನ ಪ್ರೊಡಕ್ಷನ್ ಕುರಿತು ಘೋಷಣೆ ಮಾಡಿಕೊಂಡಿದ್ದಾರೆ.
ರಿಷಬ್ ನಿರ್ದೇಶದನ 'ಕಿರಿಕ್ ಪಾರ್ಟಿ' ಸಿನಿಮಾ ದೊಡ್ಡ ಹೆಸರು ಮಾಡಿತ್ತು. ಮಾತ್ರವಲ್ಲ, ಈ ಚಿತ್ರ ಅವರ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿದ್ದಷ್ಟೇ ಅಲ್ಲ, ಇದರಲ್ಲಿ ನಟಿಸಿದ್ದವರಿಗೂ, ಇದರ ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಕೊಂಡಿದ್ದವರ ಜೀವನದ ಗತಿಯನ್ನೂ ಬದಲಿಸಿದೆ. ಅಂಥ 'ಕಿರಿಕ್ ಪಾರ್ಟಿ' ಸಿನಿಮಾ ತೆರೆಕಂಡು ನಿನ್ನೆಗೆ ಐದು ವರ್ಷ ಪೂರ್ಣಗೊಂಡಿದೆ. ನಾಳೆ ಎಂದರೆ ಹೊಸ ಕ್ಯಾಲೆಂಡರ್ ವರ್ಷ. ಇದರ ನಡುವೆಯೇ ರಿಷಬ್ ಮತ್ತೊಂದು ಖುಷಿ ಹಂಚಿಕೊಂಡಿದ್ದಾರೆ.
ಅದೇನೆಂದರೆ ಅವರ ಹೋಮ್ ಪ್ರೊಡಕ್ಷನ್ನ ಇನ್ನೊಂದು 'ಪ್ರೊಡಕ್ಷನ್'. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಅರ್ಥಾತ್, ತಮ್ಮ ಸಂಸಾರ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವುದನ್ನು ಅವರು ಸಿನಿಮಿಶ್ರಿತ ಶೈಲಿಯಲ್ಲೇ ಹೇಳಿಕೊಂಡಿದ್ದಾರೆ. "ಹೊಸ ವರ್ಷಕ್ಕೆ ಹೊಸ 'ಸಂತಸ'ವೊಂದು ನಮ್ಮ ಕುಟುಂಬದ ಜೊತೆಯಾಗಲಿದೆ, ರಣ್ವಿತ್ ಶೆಟ್ಟಿ ಸದ್ಯದಲ್ಲೇ ಅಣ್ಣನಾಗಲಿದ್ದಾನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದವಿರಲಿ.. ಪ್ರೊಡಕ್ಷನ್ ನಂ. 2" ಎಂದು ಅವರು ಸಂತೋಷ ಹಂಚಿಕೊಂಡಿದ್ದಾರೆ. ಅದರಲ್ಲೂ ರಣ್ವಿತ್ ಅಣ್ಣನಾಗಲಿದ್ದಾನೆ ಎನ್ನುವ ಮೂಲಕ ತಮ್ಮ ಮುಂದಿನ ಪ್ರೊಡಕ್ಷನ್ನಲ್ಲಿ ಇಂಟ್ರೊಡ್ಯೂಸ್ ಆಗಲಿರುವುದು ಹೀರೋನೋ ಹೀರೋಯಿನ್ನೋ ಎಂಬುದನ್ನು ಬುದ್ಧಿವಂತಿಕೆಯಿಂದಲೇ ಹೇಳಿ ಅವರು ಕುತೂಹಲವನ್ನು ಕಾಯ್ದಿರಿಸಿದ್ದಾರೆ.