

| ರವಿ ಬಸ್ರೂರು ‘ಕೆಜಿಎಫ್’ ಖ್ಯಾತಿಯ ಸಂಗೀತ ನಿರ್ದೇಶಕ
ಅವಕಾಶಗಳು ಯಾವಾಗಲೂ ಒಂದಲ್ಲ ಒಂದು ರೂಪದಲ್ಲಿ ಸಿಗುತ್ತಲೇ ಇರುತ್ತವೆ. ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿರಬೇಕು. ಅವಕಾಶಗಳು ಸಿಕ್ಕಾಗ ಸರಿಯಾಗಿ ಬಳಸಿಕೊಳ್ಳಬೇಕು ಅಷ್ಟೇ. ಪ್ರತಿಭೆ ತೋರಿಸುವುದಕ್ಕೆ ಇಂದು ಸಾಕಷ್ಟು ವೇದಿಕೆಗಳಿವೆ. ಕೆಲವು ವರ್ಷಗಳ ಹಿಂದೆ ಗುರುತಿಸಿಕೊಳ್ಳುವುದಕ್ಕೆ ಚಿತ್ರರಂಗ ಮತ್ತು ಚಿತ್ರಗೀತೆಗಳು ಹೆಚ್ಚು ಬೇಕಾಗಿತ್ತು. ಆದರೆ, ಇಂದು ಆನ್ಲೈನ್ನಲ್ಲಿ ಅವರವರೇ ಹಾಡುಗಳನ್ನು ಮಾಡಿಕೊಳ್ಳುತ್ತಿದ್ದಾರೆ, ಹೊಸ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೆಲವರನ್ನು ಜನ ಒಪ್ಪಿಕೊಳ್ಳುತ್ತಿದ್ದಾರೆ. ಗೆದ್ದವರಿಂದ ಇನ್ನೊಂದಿಷ್ಟು ಜನರಿಗೆ ಕೆಲಸ ಸಹ ಸಿಗುತ್ತಿದೆ. ಯಾರಿಗೆ ಶಕ್ತಿ ಇದೆಯೋ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಏನು ಬೇಕಾದರೂ ಮಾಡಬಹುದು ಮತ್ತು ತಮ್ಮದೇ ರೀತಿಯಲ್ಲಿ ಇಲ್ಲಿ ಬೆಳೆಯಬಹುದು. ಆದರೆ, ಕಾಲೆಳೆಯುವ ಕೆಲಸ ಹೆಚ್ಚಾಗುತ್ತಿದೆ. ಎಲ್ಲರೂ ತಮ್ಮ ಮೂಗಿನ ನೇರಕ್ಕೆ ಮಾತಾಡುತ್ತಿದ್ದಾರೆ. ಪ್ರತಿಯೊಬ್ಬರೂ ಇನ್ನೊಬ್ಬನ ಹುಳುಕನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲರೂ ಎ.ಆರ್. ರೆಹಮಾನ್ ಆಗುವುದಕ್ಕೆ ಸಾಧ್ಯವಿಲ್ಲ. ಹುಳುಕು ಹುಡುಕುವ ಬದಲು, ಪ್ರೋತ್ಸಾಹ ಮಾಡಿದರೆ ಖಂಡಿತ ಎಲ್ಲರೂ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಕಾಲೆಳೆತ ಜಾಸ್ತಿಯಾಗಿರುವುದರಿಂದ ಅವಕಾಶಗಳಿಲ್ಲ ಎಂದನಿಸುತ್ತಿದೆ. ಇದನ್ನು ಹೊರತುಪಡಿಸಿದರೆ, ಹಿಂದೆಂದಿಗಿಂತಲೂ ಈಗ ಹೆಚ್ಚು ಅವಕಾಶಗಳಿವೆ.