

ಕಳೆದೆರಡು ವರ್ಷಗಳಿಂದ ಕರೊನಾ ಹಾವಳಿ. ಜನಜೀವನಕ್ಕೆ ಸಂಕಟದ ಬಳುವಳಿ. ಹಾಗಂತ ಜೀವನ ಸಾಗಲೇಬೇಕು. ಮನೋಸ್ಥೈರ್ಯವನ್ನು ಹಿಗ್ಗಿಸಿಕೊಂಡು ಕತ್ತೆತ್ತಿ ನೋಡಿದರೆ ಹತ್ತೆಂಟು ದಾರಿಗಳು. ನಡೆ ಮುಂದೆ ನಡೆ ಮುಂದೆ.... ಎಂಬುದೇ ಮಂತ್ರ. ಆಗ ಜೀವನಕ್ಕಿದೆ ನಾನಾ ತಂತ್ರ. ಆವಿಷ್ಕಾರ, ನಾವೀನ್ಯತೆ, ಸಾಹಸಕ್ಕೆ ಜಗತ್ತಿನಲ್ಲುಂಟು ಮನ್ನಣೆ. 2021ರ ಕಹಿನೆನಪುಗಳನ್ನು ಹಿಂದಿಕ್ಕಿ, 2022ರಲ್ಲಿ ಹೊಸ ದಾರಿಯಲ್ಲಿ ಹೆಜ್ಜೆ ಮುಂದಿಡಲು ನಾನಾ ರಂಗಗಳ ಗಣ್ಯರು ಇಲ್ಲಿ ಕೆಲವು ಟಿಪ್ಸ್ ನೀಡಿದ್ದಾರೆ. ಸರ್ವರಿಗೂ ಹೊಸ ವರ್ಷ ಹರ್ಷದಾಯಕವಾಗಲಿ ಎಂಬುದು ವಿಜಯವಾಣಿ ಆಶಯ.
| ಮೆರಿನಾ ಪ್ರಸಾದ್ ವಾಸ್ತುಶಿಲ್ಪಿ, ಮೈಸೂರು
ವಾಸ್ತುಶಿಲ್ಪಶಾಸ್ತ್ರ ಹಾಗೂ ಒಳಾಂಗಣ ಸೌಂದರ್ಯ ಕ್ಷೇತ್ರ ಮುಂಬರುವ ದಿನಗಳಲ್ಲಿ ಬಹಳ ಮುಖ್ಯವಾಗುವ ಸಾಧ್ಯತೆಗಳಿವೆ. ಇದು ಕ್ರಿಯಾತ್ಮಕವಾದ ಹಾಗೂ ವೈಜ್ಞಾನಿಕ ವಿಧಾನ ಅನುಸರಿಸುವ ಕ್ಷೇತ್ರ. ಯುವಕ, ಯುವತಿಯರು ಸಮಾನವಾಗಿ ತೊಡಗಿಕೊಳ್ಳುವ ಅವಕಾಶವಿದೆ. ಭಾರತದಲ್ಲಿ ಕೇವಲ 1.2 ಲಕ್ಷದಷ್ಟು ವಾಸ್ತುಶಿಲ್ಪಿಗಳಿದ್ದಾರೆ. ಆದರೆ ಈ ಸಂಖ್ಯೆ ದೇಶದಲ್ಲಿ ನಿರ್ಮಾಣ ಕ್ಷೇತ್ರಕ್ಕೆ ಸಾಲದು. ಆದ್ದರಿಂದ ಮುಂದಿನ ದಿನಗಳಲ್ಲಿ ಬಹಳ ಬೇಡಿಕೆಯ ಕ್ಷೇತ್ರ ಇದಾಗಲಿದೆ. ಕರ್ನಾಟಕದಲ್ಲಿ ಅಥವಾ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಇದರ ಬೇಡಿಕೆ ವ್ಯಾಪಕವಾಗುತ್ತಿದೆ. ವಾಸ್ತುಶಿಲ್ಪಶಾಸ್ತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಸಹ ಬಹಳ ವೇಗವಾಗಿ ಬೆಳೆಯುತ್ತಿದೆ. ಆದ್ದರಿಂದ ಆಸಕ್ತ ವಿದ್ಯಾರ್ಥಿಗಳು ಈ ಕೋರ್ಸ್ಗೆ ಸೇರ್ಪಡೆಯಾದರೆ ಇರುವ ಅವಕಾಶಗಳನ್ನು ಬಳಸಿಕೊಳ್ಳಬಹುದಾಗಿದೆ. ಜನ ಇಂದು ಬದಲಾಗುತ್ತಿರುವ ಜೀವನಶೈಲಿ, ಭೌಗೋಳಿಕ ವ್ಯವಸ್ಥೆಗೆ ಹೊಂದುವ ಸೃಜನಾತ್ಮಕ, ಸುರಕ್ಷಿತವಾದ, ಕಡಿಮೆ ವೆಚ್ಚದ ಕಟ್ಟಡಗಳ ನಿರ್ವಣಕ್ಕೆ ಆಸಕ್ತಿ ತೋರುತ್ತಿದ್ದಾರೆ. ಆದ್ದರಿಂದ ಹೊಸತನಕ್ಕೆ ವಾಸ್ತುಶಿಲ್ಪಿಗಳು ಹಾಗೂ ಒಳಾಂಗಣ ಸೌಂದರ್ಯಕ್ಕೆ ತುಡಿಯುವವರಿಗೆ ಈ ಕ್ಷೇತ್ರದ ಶಿಕ್ಷಣ ಉತ್ತಮ. ಸಾಕಷ್ಟು ಕಾಲೇಜುಗಳು ಇವೆ. ಸದಾ ಹೊಸತನಕ್ಕೆ ತುಡಿಯುವ, ಕ್ರಿಯೇಟಿವ್ ಆಗಿ ಆಲೋಚಿಸುವ ಯುವ ಸಮೂಹಕ್ಕೆ ವಾಸ್ತುಶಿಲ್ಪ ಆಕರ್ಷಣೀಯ ಕ್ಷೇತ್ರವಾಗಿದೆ. ನಗರಗಳು ಬೆಳೆದಂತೆ ಈ ಕ್ಷೇತ್ರದ ವ್ಯಾಪ್ತಿ ಹೆಚ್ಚಾಗುತ್ತ, ಅವಕಾಶಗಳು ತೆರೆದುಕೊಳ್ಳುತ್ತಿವೆ.