

ಕಳೆದೆರಡು ವರ್ಷಗಳಿಂದ ಕರೊನಾ ಹಾವಳಿ. ಜನಜೀವನಕ್ಕೆ ಸಂಕಟದ ಬಳುವಳಿ. ಹಾಗಂತ ಜೀವನ ಸಾಗಲೇಬೇಕು. ಮನೋಸ್ಥೈರ್ಯವನ್ನು ಹಿಗ್ಗಿಸಿಕೊಂಡು ಕತ್ತೆತ್ತಿ ನೋಡಿದರೆ ಹತ್ತೆಂಟು ದಾರಿಗಳು. ನಡೆ ಮುಂದೆ ನಡೆ ಮುಂದೆ.... ಎಂಬುದೇ ಮಂತ್ರ. ಆಗ ಜೀವನಕ್ಕಿದೆ ನಾನಾ ತಂತ್ರ. ಆವಿಷ್ಕಾರ, ನಾವೀನ್ಯತೆ, ಸಾಹಸಕ್ಕೆ ಜಗತ್ತಿನಲ್ಲುಂಟು ಮನ್ನಣೆ. 2021ರ ಕಹಿನೆನಪುಗಳನ್ನು ಹಿಂದಿಕ್ಕಿ, 2022ರಲ್ಲಿ ಹೊಸ ದಾರಿಯಲ್ಲಿ ಹೆಜ್ಜೆ ಮುಂದಿಡಲು ನಾನಾ ರಂಗಗಳ ಗಣ್ಯರು ಇಲ್ಲಿ ಕೆಲವು ಟಿಪ್ಸ್ ನೀಡಿದ್ದಾರೆ. ಸರ್ವರಿಗೂ ಹೊಸ ವರ್ಷ ಹರ್ಷದಾಯಕವಾಗಲಿ ಎಂಬುದು ವಿಜಯವಾಣಿ ಆಶಯ.
| ಡಾ. ಗಿರಿಧರ ಕಜೆ
ಇಂದಿನ ಆಯುರ್ವೆದ ಕೆಲವು ದಶಕಗಳ ಹಿಂದಿನ ಆಯುರ್ವೆದ ಆಗಿ ಉಳಿದಿಲ್ಲ. ಎಲ್ಲೆಡೆ ಸಲ್ಲುವವರೇ ಇಲ್ಲಿಗೆ ಬಂದು ಗೆಲ್ಲುತ್ತಿದ್ದಾರೆ. ಸಂಸ್ಕೃತ ಮೊದಲೇ ತಿಳಿದಿದ್ದರೆ ಆಯುರ್ವೆದದ ಅಂತರಾಳಕ್ಕೆ ಇಳಿಯುವುದು ಸುಲಭವಾಗುತ್ತದೆ. ಸಂಸ್ಕೃತದ ಜ್ಞಾನವೇ ಇಲ್ಲದವರಿಗೂ ಸಾಧನೆಯ ಹಾದಿಯೇನು ದುರ್ಗಮವಲ್ಲ. ಕೇವಲ ಬಿಎಎಂಎಸ್ ಪದವಿ ಪಡೆದಿದ್ದರೂ ಅವರ ಕಾರ್ಯಕ್ಷೇತ್ರ ವಿಶಾಲ. ಜಗತ್ತಿನೆಲ್ಲೆಡೆ ಹೋಗಿ ಈ ಭಾರತೀಯ ವಿದ್ಯೆಯಿಂದ ಜನರನ್ನು ಸಲಹುವ ಅಪ್ರತಿಮ ಅವಕಾಶವಿದೆ. ಇಪ್ಪತ್ತಕ್ಕೂ ಹೆಚ್ಚಿನ ವಿಷಯಗಳಲ್ಲಿ ಎಮ್ಡಿ/ಎಮ್ಎಸ್. ಪದವಿಗಾಗಿ ಮೂರು ವರ್ಷಗಳ ಸ್ನಾತಕೋತ್ತರ ವ್ಯಾಸಂಗದ ಅವಕಾಶವೂ ಇದೆ, ಅದಕ್ಕೆ ಬಹುಬೇಡಿಕೆಯೂ ಇದೆ. ಮತ್ತೂ ಮುಂದುವರಿದರೆ ಪಿಎಚ್ಡಿ ಬಿರುದಿನೊಂದಿಗೆ ಸಂಶೋಧನೆಯನ್ನೂ ಮಾಡಬಹುದು. ಹೀಗೆ ಆಯುರ್ವೆದ ವೈದ್ಯರಾಗಿ ಜನಸೇವೆ ಮಾಡಬಹುದು, ಆಯುರ್ವೆದ ವಿದ್ಯಾಲಯಗಳಲ್ಲಿ ತಜ್ಞ ಉಪನ್ಯಾಸಕರಾಗಬಹುದು, ಆಯುರ್ವೆದ ಔಷಧಿ ತಯಾರಿಕಾ ಕಂಪನಿಯನ್ನು ಪ್ರಾರಂಭಿಸ ಬಹುದು, ಪಂಚಕರ್ಮ ಚಿಕಿತ್ಸಾಲಯ ತೆರೆಯಬಹುದು, ಔಷಧಾಲಯಗಳನ್ನು ನಡೆಸಬಹುದು, ವಿದೇಶಗಳಿಗೆ ತೆರಳಿ ಜಾಗೃತಿ ಉಪನ್ಯಾಸ ನೀಡಿ ಆಯುರ್ವೆದವನ್ನು ಪಸರಿಸಬಹುದು, ಲೇಖಕರಾಗಿಯೂ ಪ್ರಕಾಶಿಸಬಹುದು, ಔಷಧೀಯ ಸಸ್ಯಗಳ ಕೃಷಿ, ಸಸ್ಯೌಷಧಿ ಸಾರಗಳ ರಫ್ತು, ಔಷಧೀಯ ವನಗಳನ್ನೂ ನಿರ್ವಿುಸಬಹುದು, ಆಯುರ್ವೆದ ಸಂಶೋಧನಾ ಕೇಂದ್ರವನ್ನೂ ಸ್ಥಾಪಿಸಬಹುದು, ನಿರಂತರ ಸಂಶೋಧನೆಯಲ್ಲಿ ತೊಡಗಿ ವಿಜ್ಞಾನಿಯೂ ಆಗಬಹುದು! ಇಂದು ಆಯುರ್ವೆದ ಕ್ಷೇತ್ರವನ್ನೊಮ್ಮೆ ಪ್ರವೇಶಿಸಿದರೆ ವಿಶಾಲ ಜಗತ್ತೇ ಕಾರ್ಯಕ್ಷೇತ್ರ. ಎಲ್ಲಕ್ಕಿಂತ ಮುಖ್ಯವಾಗಿ ಮಾನವ, ಪರಿಸರವನ್ನೂ ಸಮಗ್ರವಾಗಿ ಅರ್ಥೈಸಿಕೊಳ್ಳಲು ಆಯುರ್ವೆದವೇ ಬೇಕು.