

ಒಂದಷ್ಟು ಆತ್ಮವಿಶ್ವಾಸ, ಒಂದಷ್ಟು ಧೈರ್ಯ-ಹುಮ್ಮಸ್ಸು, ರಿಸ್ಕ್ ತೆಗೆದುಕೊಳ್ಳುವ ಮನೋಭಾವ, ಹೊರಗಿನ ಆಗುಹೋಗುಗಳತ್ತ ಗಮನ ಇಡುವ ಮೂಲಕ, ಮೂಗಿನ ಮೇಲೆ ಬೆರಳಿಡುವಂಥ ಸಾಧನೆ ಮಾಡಬಹುದು ಎಂದು ಹುರಿದುಂಬಿಸಿದ್ದಾರೆ ನಾನಾ ಕ್ಷೇತ್ರಗಳ ಪ್ರಮುಖರು. ಆಲ್ ದಿ ಬೆಸ್ಟ್!
ಸಿನಿಮಾದಲ್ಲಿ ಎಲ್ಲ ವಿಭಾಗಗಳಲ್ಲೂ ಅವಕಾಶಗಳು ಇದ್ದೇ ಇರುತ್ತವೆ. ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ನೃತ್ಯ ಕ್ಷೇತ್ರದ ಬಗ್ಗೆ ಹೇಳುವುದಾದರೆ, ಇಲ್ಲಿ ಅವಕಾಶಗಳೂ ಇವೆ, ಅವಕಾಶ ಹುಡುಕಿ ಬಂದವರು ಸಹ ದೊಡ್ಡ ಸಂಖ್ಯೆಯಲ್ಲೇ ಸಿಗುತ್ತಾರೆ. ನೃತ್ಯದಲ್ಲಿ ಆಸಕ್ತಿ ಇರುವವರಿಗೆ ಸಿನಿಮಾ ಅಷ್ಟೇ ಅಲ್ಲ, ಅದರಾಚೆಗೂ ಅವಕಾಶಗಳಿವೆ. ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ನೃತ್ಯ ಮಾಡುವವರಿಗೆ, ಹೇಳಿಕೊಡುವವರಿಗೆ ಬೇಡಿಕೆ ಇದೆ. ಪ್ರತಿಯೊಬ್ಬರೂ ಬೇರೆಬೇರೆ ರೀತಿಯಲ್ಲಿ ಇಲ್ಲಿ ಬರುತ್ತಾರೆ. ಆದರೆ, ಅಂತಿಮವಾಗಿ ಎಷ್ಟು ಜನ ಉಳಿದು ಕೊಳ್ಳುತ್ತಾರೆ ಎನ್ನುವುದು ಬಹಳ ಮುಖ್ಯ. ಹಾಗೆ ಉಳಿದುಕೊಳ್ಳುವುದಕ್ಕೆ ಪ್ರತಿಭೆ ಜತೆಗೆ, ಅದೃಷ್ಟ ಸಹ ಬೇಕು. ಹಾಗಂತ ಇಲ್ಲಿ ಯಾರೂ ಒಂದೇ ದಿನದಲ್ಲಿ ಸ್ಟಾರ್ ಆಗಲು ಸಾಧ್ಯ ಇಲ್ಲ. ಹಂತಹಂತವಾಗಿ ಮೇಲೇರಬೇಕು. ನಾನು ಚಿತ್ರರಂಗಕ್ಕೆ ಬಂದು 18 ವರ್ಷಗಳಾಗಿವೆ. ಈ ಸುದೀರ್ಘ ಅವಧಿಯಲ್ಲಿ ನಾನು ನೋಡಿದ ಯಾರೂ ಸಹ ರಾತ್ರೋರಾತ್ರಿ ಸ್ಟಾರ್ ಆದ ಉದಾಹರಣೆ ಇಲ್ಲ. ಅವಕಾಶಕ್ಕಾಗಿ ಕಾಯಬೇಕು, ಅದನ್ನು ಚೆನ್ನಾಗಿ ಬಳಸಿಕೊಂಡು ಹಂತಹಂತವಾಗಿ ಬೆಳೆಯಬೇಕು.