ದುಸ್ವಪ್ನವಾದ ಆನ್​ಲೈನ್​ ತರಗತಿ; ಆರನೇ ತರಗತಿ ವಿದ್ಯಾರ್ಥಿನಿಯರಿಗೆ ಅತ್ಯಾಚಾರ ಬೆದರಿಕೆ

online class
Published on

ಕೋಲ್ಕತ್ತ: ಶಾಲಾ- ಕಾಲೇಜುಗಳು ಶುರುವಾಗಿಲ್ಲ. ಆದರೆ, ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಬೇಕಾದ ಅನಿವಾರ್ಯತೆಯಿಂದಾಗಿ ಆನ್​ಲೈನ್​ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಈ ತರಗತಿಯೇ ವಿದ್ಯಾರ್ಥಿಗಳಿಗೆ ದುಸ್ವಪ್ನವಾಗಿ ಪರಿಣಮಿಸಿದೆ.

ಕೋಲ್ಕತ್ತದ ಶಾಲೆಯೊಂದರ ಆರನೇ ತರಗತಿ ಮಕ್ಕಳು ಮಂಗಳವಾರ ಆನ್​ಲೈನ್​ ತರಗತಿಗೆಂದು ಸಜ್ಜಾಗಿದ್ದರು. ಆದರೆ ಅತ್ತ ಕಡೆಯಿಮದ ಪಾಠ ಶುರುವಾಗುವ ಬದಲು, ಚಿತ್ರ-ವಿಚಿತ್ರ ಶಬ್ಧಗಳು ಕೇಳಿ ಬಂದಿವೆ. ಇದರಿಂದ ಮಕ್ಕಳಿಗೆ ಭೀತಿಯಾದರೂ ಸರಿಯಾಗಬಹುದು ಎಂದು ಕಾದಿದ್ದಾರೆ.

ಶಿಕ್ಷಕರ ಬದಲು ಇನ್ಯಾರೋ ಅವರ ಆನ್​ಲೈನ್​ ತರಗತಿಯನ್ನು ಅಕ್ರಮಿಸಿದ್ದರು. ಅಂದರೆ ಆನ್​ಲೈನ್​ ತರಗತಿಯನ್ನು ಹ್ಯಾಕ್​ ಮಾಡಲಾಗಿತ್ತು. ಪಾಠವನ್ನು ಕೇಳಬೇಕೆಂದು ಕೂತಿದ್ದ ವಿದ್ಯಾರ್ಥಿನಿಯರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ. ಜೀವ ಬೆದರಿಕೆಯನ್ನು ಒಡ್ಡಿದ್ದಾರೆ.

ಇದಾಗುತ್ತಿದ್ದಂತೆ ಮಕ್ಕಳು ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಹ್ಯಾಕರ್​ಗಳೊಂದಿಗೆ ಪಾಲಕರು ಮಾತನಾಡಲು ಶುರು ಮಾಡುತ್ತಿದ್ದಂತೆ ಸಂಪರ್ಕ ಕಡಿತಗೊಂಡಿದೆ.

ಇದಾದ ಬಳಿಕ ಹ್ಯಾಕರ್​ಗಳು ಚಾಟ್​ ಬಾಕ್ಸ್​ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಶುರು ಮಾಡಿದ್ದಾರೆ. ಕೂಡಲೇ ತರಗತಿಯನ್ನು ನಿಲ್ಲಿಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಯಿತು.

ತನಿಖೆ ಕಂಡುಬಂದ ಅಂಶವೆಂದರೆ ವಿದ್ಯಾರ್ಥಿಯೊಬ್ಬನ ಹೆಸರಿನಲ್ಲಿ ಎರಡು ಲಾಗಿನ್​ಗಳು ಸೃಷ್ಟಿಯಾಗಿವೆ. ಜತೆಗೆ, ತತರಗತಿಯ ಪಾಸ್​ವರ್ಡ್​ ಯಾರಿಗೆಲ್ಲ ಶೇರ್​ ಮಾಡಲಾಗಿದೆ ಎಂಬುದನ್ನು ಕಂಡುಹಿಡಿಯಲಾಗುತ್ತಿದೆ. ಈ ಘಟನೆಯಿಂದ ಆನ್​​ಲೈನ್​ ತರಗತಿಗಳು ಎಷ್ಟು ಸುರಕ್ಷಿತ ಎಂಬ ಬಗ್ಗೆ ಪ್ರಶ್ನೆಗಳೆದ್ದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net