

BBK11:ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 11ರ ಆಟದ ತೆರೆಗೆ ಇನ್ನೂ ಉಳಿದಿರುವುದು ಕೇವಲ ಎರಡೇ ವಾರಗಳು ಮಾತ್ರ. ಈ ವಾರದ ಮಧ್ಯೆ 100 ದಿನಗಳನ್ನು ಪೂರೈಸಿದ ಬಿಗ್ ಮಂದಿ, ವಾರಾಂತ್ಯದೊಳಗೆ ಆಡಿದ ಅಷ್ಟು ಮಾರಿಹಬ್ಬದ ಟಾಸ್ಕ್ಗಳಲ್ಲಿ ಬಿರುಸಿನ ಪೈಪೋಟಿ ನೀಡಿರುವುದು ಸದ್ಯ ವೀಕ್ಷಕರ ಕಣ್ಣಿನಲ್ಲಿ ಕಟ್ಟಿದಂತಿದೆ. ವೀಕ್ಷಕರ ನೋಟ ಒಂದಾದರೆ, ಸ್ಪರ್ಧಿಗಳ ಭಾವನೆ, ಆಟದ ದಾಟಿ, ಗುರಿ, ಉದ್ದೇಶಗಳನ್ನು ಸೂಕ್ಷ್ಮವಾಗಿ ಗಮನಿಸುವ ಕಿಚ್ಚ ಸುದೀಪ್, ಫಿನಾಲೆ ವಾರದಲ್ಲಿ ಕೆಲವರು ಆಡುವ ಭರದಲ್ಲಿ ತೋರಿದ ವರ್ತನೆ ಮತ್ತು ಮಾಡಿದ ತಪ್ಪುಗಳನ್ನು ಈ ವಾರದ ಕಿಚ್ಚನ ಪಂಚಾಯತಿಯಲ್ಲಿ ಎತ್ತಿಹಿಡಿದಿದ್ದಾರೆ.
ಫಿನಾಲೆ ಟಿಕೆಟ್ಗಾಗಿ ವಾರದಲ್ಲಿ ತ್ರಿವಿಕ್ರಮ್, ರಜತ್, ಭವ್ಯ ಆಡಿದ ಆಟಕ್ಕಿಂತ ಒಂದು ಹೆಜ್ಜೆ ಮುಂದೋದ ಹನುಮಂತು, ಅದ್ಭುತ ಪ್ರದರ್ಶನ ತೋರುವಲ್ಲಿ ಮೇಲುಗೈ ಸಾಧಿಸಿದರು. ನಿರ್ಣಯದ ಟಾಸ್ಕ್ನಲ್ಲಿ ತ್ರಿವಿಕ್ರಮ್ ಜತೆ ಸಮಯದಲ್ಲಿ ಸೆಣಸಾಡಿದ ಹನುಮಂತು, ಫಿನಾಲೆ ಟಿಕೆಟ್ ಗೆದ್ದು, ಗ್ರ್ಯಾಂಡ್ ಫಿನಾಲೆ ತಲುಪಿದ ಮೊದಲ ಸ್ಪರ್ಧಿಯಾಗಿ ಮಿಂಚಿದರು. ಹನುಮಂತು ನಂತರದಲ್ಲಿ ಬಂದ ತ್ರಿವಿಕ್ರಮ್, ಭವ್ಯ ಮತ್ತು ರಜತ್ ಫಿನಾಲೆ ಟಿಕೆಟ್ನಿಂದ ಸದ್ಯ ದೂರ ಉಳಿದಿದ್ದಾರೆ. ಆಟದ ಕಾವು ಹೆಚ್ಚಿರುವ ನಡುವೆಯೇ ಕಿಚ್ಚನ ವಾರದ ಪಂಚಾಯತಿ ಬಂದಿರುವುದು ವೀಕ್ಷಕರ ಕುತೂಹಲ ಹೆಚ್ಚಿಸಿದೆ.
ಮೋಕ್ಷಿತಾ, ಚೈತ್ರಾ, ಭವ್ಯ, ತ್ರಿವಿಕ್ರಮ್ ಮತ್ತು ಧನರಾಜ್ ನಡುವೆ ಯಾರು ಈ ವಾರ ಮನೆಯಿಂದ ಹೊರ ಹೋಗಲಿದ್ದಾರೆ? ಯಾರ ಮುಡಿಗೆ ಸೀಸನ್ 11ರ ಪಟ್ಟ ಸಿಗಲಿದೆ ಎಂಬುದು ಸದ್ಯ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ವಾರದಲ್ಲಿ ವೇಗದ ಮಿತಿ ಮೀರಿ ಆಡಿದವರಾರು, ಆಟದ ಗತಿ ತಪ್ಪಿಸಿದವರು ಯಾರಾರು? ಅನ್ನೋದು ಇಂದಿನ 'ವಾರದ ಕಥೆ ಕಿಚ್ಚನ ಜತೆ' ಸಂಚಿಕೆಯಲ್ಲಿ ತಿಳಿಯಲಿದೆ. ಅಂತಿಮವಾಗಿ ಫಿನಾಲೆ ವಾರದ ಓಟದಿಂದ ಹೊರಗುಳಿಯುವ ಆ ಸ್ಪರ್ಧಿ ಯಾರೆಂಬುದು ಇದೀಗ ವೀಕ್ಷಕರನ್ನು ಕೆರಳಿಸಿರುವ ಕೌತುಕದ ಪ್ರಶ್ನೆ.