

ಹೆಚ್ಚು ವಾಹನ ದಟ್ಟಣೆ ಇರುವ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿರುವ 8 ಬ್ಲಾೃಕ್ಸ್ಪಾಟ್ಗಳನ್ನು ‘ಅಪಘಾತಮುಕ್ತ ವಲಯ’ ಆಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಈ ಭಾಗದಲ್ಲಿ ಅಪಘಾತಗಳ ಪ್ರಮಾಣ ತಗ್ಗಿಸಲು ಅಂಡರ್ ಪಾಸ್, ಓವರ್ಪಾಸ್ ನಿರ್ಮಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 127.01 ಕೋಟಿ ರೂ. ವೆಚ್ಚದ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿದೆ.
ಈಗಾಗಲೇ ಟೆಂಡರ್ ಕರೆದು ಗುತ್ತಿಗೆದಾರರಿಗೆ ಕೆಲಸವನ್ನು ಹಂಚಿಕೆ ಮಾಡಲಾಗಿದೆ. ಬೆಂಗಳೂರಿನ ಕೃಷ್ಣ ಇನ್ಫ್ರಾಟೆಕ್ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದೆ. ಈ ಪೈಕಿ ಒಂದು ಕಾಮಗಾರಿ ಶುರುವಾಗಿದ್ದು, ಇನ್ನೂ ಕೆಲಸಗಳು ಶೀಘ್ರದಲ್ಲೇ ಚಾಲನೆ ದೊರೆಯಲಿದೆ.
ಈ ಎಲ್ಲ ಕಾಮಗಾರಿ ಮುಂದಿನ 24 ತಿಂಗಳಿನ ಒಳಗೆ ಪೂರ್ಣಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಕ್ತಾಯಗೊಳಿಸಲು ಮತ್ತು 5 ವರ್ಷಗಳ ಕಾಲ ಕಾಮಗಾರಿಗಳ ನಿರ್ವಹಣೆ ಮಾಡಬೇಕು ಎಂಬ ಷರತ್ತನ್ನು ಗುತ್ತಿಗೆದಾರರಿಗೆ ವಿಧಿಸಲಾಗಿದೆ.
ಕರ್ನಾಟಕ- ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766(ಮೊದಲು 212) ಮೈಸೂರು-ಗುಂಡ್ಲುಪೇಟೆ ಮೂಲಕ ಹಾದು ಹೋಗಲಿದ್ದು, ಇದರಿಂದ ಅಂತಾರಾಜ್ಯ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಸಂಚಾರ ಮಾಡುತ್ತವೆ. ನಂಜನಗೂಡು, ಬಂಡೀಪುರ, ಊಟಿ, ಕೇರಳದ ವಯನಾಡು ತೆರಳುವ ಪ್ರವಾಸಿಗರು ಸಹ ಈ ಮಾರ್ಗದಲ್ಲೇ ಸಾಗಬೇಕಿದೆ.
ನಂಜನಗೂಡು ಕೈಗಾರಿಕಾ ಪ್ರದೇಶ ಹೆದ್ದಾರಿಗೆ ಹೊಂದಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಾಹನಗಳು ಈ ಹೆದ್ದಾರಿಯಲ್ಲಿ ಸಾಗುತ್ತವೆ. ಅತಿ ವೇಗ ಚಾಲನೆಯಿಂದಲೂ ಅನೇಕ ಅಪಘಾತಗಳು ಪುನರಾವರ್ತನೆಯಾಗುವ ಮೂಲಕ ಸಾವು-ನೋವುಗಳು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಎಚ್ಚೆತ್ತುಕೊಂಡಿದೆ.
ಅಪಘಾತಗಳನ್ನು ಕಡಿಮೆ ಮಾಡಲು ಬ್ಲಾೃಕ್ ಸ್ಪಾಟ್ಗಳಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ನಂಜನಗೂಡು ತಾಲೂಕಿನ ಯಲಚಗೇರಿಯಲ್ಲಿ ಮೇಲ್ಸೇತುವೆ , ಕಳಲೆ ಗೇಟ್ ಬಳಿ ಕೆಳಸೇತುವೆ(ಅಂಡರ್ ಪಾಸ್) ನಿರ್ಮಿಸಲಾಗುತ್ತಿದೆ. ಹೊಸಹಳ್ಳಿ ಬಳಿ ಲಘು ವಾಹನಗಳ ಸಂಚಾರಕ್ಕಾಗಿ ಅಂಡರ್ ಪಾಸ್ ನಿರ್ಮಾಣವಾಗಲಿದೆ. ಮೈಸೂರು ತಾಲೂಕಿನ ಕಡಕೊಳ ಗ್ರಾಮದಲ್ಲಿ ಲಘುವಾಹನ ಸಂಚಾರಕ್ಕಾಗಿ ಮತ್ತು ಪಾದಚಾರಿಗಳ ಓಡಾಟಕ್ಕಾಗಿ ಪ್ರತ್ಯೇಕ ಅಂಡರ್ ಪಾಸ್ ಮಾಡಲಾಗುತ್ತಿದೆ.
ನಂಜನಗೂಡು ಹೆದ್ದಾರಿ ಮತ್ತು ರಿಂಗ್ರೋಡ್ ಸಂಪರ್ಕಿಸುವ ಬಂಡಿಪಾಳ್ಯದ ಎಪಿಎಂಸಿ ಬಳಿ ಎರಡು ಅಂಡರ್ ಪಾಸ್ ನಿರ್ಮಾಣವಾಗಲಿದೆ. ಇದರಿಂದ ಎಪಿಎಂಸಿಗೆ ಸರಕು ತೆಗೆದುಕೊಂಡು ಹೋಗುವ ಲಾರಿಗಳು ಅನುಕೂಲವಾಗಲಿದೆ. ರಿಂಗ್ರೋಡ್, ನಂಜನಗೂಡು ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ತಡೆರಹಿತ ಸಂಚಾರ ಮುಂದುವರಿಸಲು ಅನುವಾಗಲಿದೆ.
ಗೌರಿಶಂಕರನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಯದ ಬಳಿ ಅಪಘಾತ ವಲಯವಾಗಿ ಗುರುತಿಸಲ್ಪಟ್ಟಿದೆ. ಆಶ್ರಮಕ್ಕೆ ವಾಹನಗಳು ತಿರುವು ಪಡೆಯುವ ಸಂದರ್ಭದಲ್ಲಿ ಅವಘಡಗಳು ಹೆಚ್ಚಾಗಿ ಆಗುತ್ತಿವೆ. ಈ ಭಾಗದಲ್ಲಿ ರಸ್ತೆ ಉಬ್ಬು ನಿರ್ಮಿಸಿ ಬ್ಯಾರಿಕೇಡ್ ಹಾಕಿದರೂ ಇದು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿ ವಾಹನಗಳ ಸಂಚಾರಕ್ಕಾಗಿ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಜತೆಗೆ, ಕೆಂಪಯ್ಯನಹುಂಡಿ ಬಳಿ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ಪ್ರತ್ಯೇಕವಾಗಿ ಅಂಡರ್ ಪಾಸ್ ನಿರ್ಮಾಣವಾಗಲಿದೆ.
ಮೈಸೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ(275) ಆಯ್ದುಹೋಗುವ ಬನ್ನಿಕುಪ್ಪೆಯಲ್ಲಿ ಲಘು ವಾಹನಗಳಿಗೆ ಮತ್ತು ಭಾರಿ ವಾಹನಗಳಿಗೆ ಪ್ರತ್ಯೇಕ ಅಂಡರ್ ಪಾಸ್ ನಿರ್ಮಿಸಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಪಾಯಕಾರಿ ಜಾಗ (ಆ್ಯಕ್ಸಿಡೆಂಟ್ ಬ್ಲಾೃಕ್ಸ್ಪಾಟ್) ಹಾಗೂ ಹೆಚ್ಚೆಚ್ಚು ಅಪಘಾತ ವರದಿಯಾಗುತ್ತಿರುವ ಜಾಗ ಗುರುತಿಸಿ ಕ್ರಮಕ್ಕೆ ವರದಿ ಸಲ್ಲಿಸಿದ್ದರು.
3 ವರ್ಷಗಳ ಅಪಘಾತಗಳ ಸಂಖ್ಯೆ, ರಸ್ತೆಯ ರಚನೆ, ಸಂಚರಿಸುವ ವಾಹನಗಳ ಸಂಖ್ಯೆ ಇತ್ಯಾದಿ ಪರಿಗಣಿಸಿ ಬ್ಲ್ಯಾಕ್ಸ್ಪಾಟ್ ಗುರುತಿಸಲಾಗುತ್ತದೆ. ಗುರುತಿಸಲಾದ ಜಾಗಗಳಲ್ಲಿ ಹೈಮಾಸ್ಟ್ ದೀಪ, ಸ್ಪೀಡ್ ಬ್ರೇಕರ್ಗಳು, ಜೀಬ್ರಾ ಲೈನ್ ಹಂಪ್ಗಳು, ಕ್ಯಾಟ್-ಐ ಹಾಗೂ ಇನ್ನಿತರ ಪ್ರತಿಫಲಕ (ರಿಫ್ಲೆಕ್ಟರ್ ಲೈಟ್), ಮಿಣುಕು ದೀಪಗಳನ್ನು ಅಳವಡಿಸುವುದು ಸೇರಿದಂತೆ ವಿವಿಧ ಕ್ರಮವನ್ನು ಈಗಾಗಲೇ ಕೈಗೊಳ್ಳಲಾಗಿದೆ.
ತಿರುವುಗಳ ವಿಸ್ತರಣೆ, ರಸ್ತೆ ವಿಭಜಕಗಳು ಹಾಗೂ ವಾಹನಗಳ ಚಕ್ರಗಳು ರಸ್ತೆಯಿಂದ ಜಾರದಂತಹ ವ್ಯವಸ್ಥೆ ಮಾಡಲಾಗುತ್ತಿದೆ. ಆದಾಗ್ಯೂ, ಅಪಘಾತಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ, ತುರ್ತು ಅಗತ್ಯ ಇರುವ ಅಂಡರ್ ಪಾಸ್, ಓವರ್ ಪಾಸ್ ನಿರ್ಮಿಸಲಾಗುತ್ತಿದೆ.
ನಂಜನಗೂಡು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ, ತಮಿಳುನಾಡಿನ ಊಟಿ ಹಾಗೂ ಕೇರಳ ರಾಜ್ಯಕ್ಕೆ ವೇಗವಾಗಿ ತೆರಳುವ ವಾಹನಗಳಿಂದ ಅಪಘಾತಗಳು ಸಂಭವಿಸುತ್ತವೆ.
ಹುಲ್ಲಹಳ್ಳಿ ವೃತ್ತ, ದೇವಿರಮ್ಮನಹಳ್ಳಿಯ ವೃತ್ತಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿದಾಗ, ಇಲ್ಲಿ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಆದರೆ, ಸಂಚಾರ ಪೊಲೀಸರ ನಿರ್ವಹಣೆಯ ಕೊರತೆ, ವಾಹನ ಸವಾರರು ನಿಯಮ ಪಾಲಿಸದಿರುವುದರಿಂದ ಮತ್ತೆ ಅಪಘಾತಗಳು ಸಂಭವಿಸುತ್ತಿವೆ.
ರಸ್ತೆ ಅಪಘಾತ ವಿವಿಧ ಕಾರಣಗಳಿಂದ ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಿರಿದಾದ ಸೇತುವೆಗಳ ಭಾಗದಲ್ಲಿ ರಸ್ತೆಯ ವಿಸ್ತೀರ್ಣ, ಸೇತುವೆ ಕಾಣುವಂತೆ ಹಜಾರ್ಡ್ ಮಾರ್ಕಿಂಗ್ ಸೂಚನಾ ಫಲಕ ಅಳವಡಿಸದೇ ಇರುವುದು, ಸುಪ್ರೀಂ ಕೋರ್ಟ್ ಆದೇಶದಂತೆ ಹೆದ್ದಾರಿಗಳಲ್ಲಿ ಹಂಪ್ಸ್ ತೆರವುಗೊಳಿಸಬೇಕೆಂಬ ಆದೇಶವಿದ್ದರೂ ಉಲ್ಲಂಘನೆಯಾಗಿರುವುದು, ಅನವಶ್ಯಕವಾಗಿ ಬ್ಯಾರಿಕೇಡ್ ಅಳವಡಿಸಿರುವುದು.
ವೈಜ್ಞಾನಿಕ ರೀತಿಯ ವೇಗ ತಡೆ ಅಳವಡಿಸದೇ ಇರುವುದು, ರಸ್ತೆ ಬದಿಯ ಮರಗಳಿಗೆ ಟ್ರಿ ರಿಫ್ಲೆಕ್ಟರ್ ಅಳವಡಿಸದೇ ಇರುವುದು. ದಾರಿಗೆ ಅಡ್ಡಲಾಗಿರುವ ಮರ-ಗಿಡಗಳನ್ನು ಕಡಿಯದೇ ಇರುವುದು, ರಸ್ತೆ ಬದಿ ಬೀದಿ ದೀಪ ಮತ್ತು ವೃತ್ತಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸದೇ ಇರುವುದು.
ತಾಲೂಕು ಮತ್ತು ಪಟ್ಟಣ ಕೇಂದ್ರಗಳಲ್ಲಿ ಆಟೋ ರಿಕ್ಷಾಗಳು ಅಡ್ಡಾದಿಡ್ಡಿ ಚಲಿಸುವುದು, ಅಕ್ರಮವಾಗಿ ರಸ್ತೆ ಬಳಿಯೇ ವಾಹನಗಳ ನಿಲ್ದಾಣ ಇರುವುದು ಸಹ ಅಪಘಾತಗಳಿಗೆ ಕಾರಣವಾಗುತ್ತಿದೆ.
ಜಿಲ್ಲೆಯಲ್ಲಿ ಅಂದಾಜು 106 ಅಪಘಾತ ವಲಯಗಳನ್ನು ಪತ್ತೆ ಹಚ್ಚಲಾಗಿದೆ. ಹುಣಸೂರು ತಾಲೂಕು ಅತಿ ಹೆಚ್ಚು ಬ್ಲಾೃಕ್ಸ್ಪಾಟ್ ಹೊಂದಿದ್ದು, ನಂತರದ ಸ್ಥಾನದಲ್ಲಿ ಮೈಸೂರು ತಾಲೂಕು ಇದೆ.
ಈ ಅಪಘಾತ ವಲಯಗಳಲ್ಲಿ ಕಳೆದ 3 ವರ್ಷಗಳಲ್ಲಿ ಆಗಿರುವ ಅಪಘಾತ ಪ್ರಮಾಣ ಮಾಹಿತಿ ಕಲೆ ಹಾಕಿರುವ ಪೊಲೀಸರು ಅಪಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಿದ್ದಾರೆ. ಅಲ್ಲದೆ ರಸ್ತೆಗಳಲ್ಲಿ ಅಪಘಾತ ನಿಯಂತ್ರಣದ ಬಗ್ಗೆ ವೈಜ್ಞಾನಿಕ ಕ್ರಮದ ವರದಿಯನ್ನು ನೀಡಿದ್ದಾರೆ.
ಮೈಸೂರು ಮತ್ತು ನಂಜನಗೂಡು ಹೆದ್ದಾರಿಯಲ್ಲಿ ಕಳೆದ 3-4 ವರ್ಷದಲ್ಲಿ ಅನೇಕ ಅಪಘಾತಗಳು ಸಂಭವಿಸಿವೆ. ಇದನ್ನು ಆಧರಿಸಿ ಬ್ಲಾೃಕ್ಸ್ಪಾಟ್ ಗುರುತಿಸಲಾಗಿದೆ. ಇಲ್ಲಿ ವಾಹನಗಳು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಕೆಳಸೇತುವೆ, ಮೇಲ್ಸೇತುವೆ, ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ. ರಾಹುಲ್ಕುಮಾರ್ ಗುಪ್ತಾ ಮುಖ್ಯ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ