

ನವದೆಹಲಿ: ಕೆಲವೊಮ್ಮೆ ನಾವು ಇನ್ನೊಬ್ಬರಿಗೆ ಮಾಡುವ ಸಹಾಯ ಅಚ್ಚುಳಿಯುತ್ತದೆ. ಇಂತಹ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ ಮತ್ತು ನೀವೇ ರಿಯಲ್ ಲೈಫ್ ಹೀರೋ ಎಂದು ಜನರು ಕಮೆಂಟ್ ಮಾಡುತ್ತಾರೆ. ನಾಲ್ಕು ವರ್ಷಗಳ ಹಿಂದಿನ ಘಟನೆಯೊಂದು ಈಗ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
2023ರ ವರ್ಷಾಂತ್ಯದಲ್ಲಿ ವಿಶ್ವದಾದ್ಯಂತ ಬಿಡುಗಡೆಗೊಂಡು ವ್ಯಾಪಕ ಯಶಸ್ಸು ಗಳಿಸಿದ್ದ ಅನಿಮಲ್ ಚಿತ್ರವು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ನಾಯಕ ರಣಬೀರ್ ಕಪೂರ್ ಜೊತೆಗೆ ಅವರ ಸಹೋದರರ ಪಾತ್ರಧಾರಿಗಳು ಸಹ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದರು. ಈ ಪೈಕಿ ಮಂಜೋತ್ ಸಿಂಗ್ ಎಂಬುವವರು ನಿಜಜೀವನದಲ್ಲಿ ತಾವು ಮಾಡಿರುವ ಕೆಲಸದಿಂದಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗ್ರೇಟರ್ ನೋಯ್ಡಾದಲ್ಲಿರುವ ಶಾರದ ಆಸ್ಪತ್ರೆಯಲ್ಲಿ ಯುವತಿಯೊಬ್ಬಳು ಕಟ್ಟಡದ ಎರಡನೇ ಮಹಡಿಯಿಂದ ಧುಮುಕಿ ಆತ್ಮಹತ್ಯಗೆ ಯತ್ನಿಸುತ್ತಾಳೆ. ಕೂಡಲೇ ಇದನ್ನು ಗಮನಿಸಿದ ಮಂಜೋತ್ ಆಕೆಯನ್ನು ರಕ್ಷಿಸಿದ್ದು, ಇತರರ ಸಹಾಯದಿಂದ ಆಕೆಯನ್ನು ಮೇಲಕ್ಕೆ ಎತ್ತಿ ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಮೆಚ್ಚುಗೆಗೆ ಗುರಿಯಾಗಿದೆ. ಸಿನಿಮಾದಲ್ಲಿ ಇರುವವರಲ್ಲ ನೀವೇ ನೋಡಿ ರಿಯಲ್ ಲೈಫ್ ಹೀರೋ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇಂಜಿನಿಯರ್ ಪದವಿಧರರಾಗಿರುವ ಮಂಜೋತ್ ಸಿಂಗ್ ಅವರ ಕಾರ್ಯಕ್ಕೆ ಮೆಚ್ಚಿ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ (DSGMC) ಮಂಜೋತ್ ಅವರನ್ನು ಸನ್ಮಾನಿಸಿದ್ದು, ಸಿವಿಲ್ ಸರ್ವೀಸ್ ಪರೀಕ್ಷೆಗಳ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದೆ.