

ನೋಯ್ಡಾ: ಹೋಳಿ ಹಬ್ಬದಂದು ದೆಹಲಿ ಮೆಟ್ರೋದಲ್ಲಿ ಮತ್ತು ಸ್ಕೂಟರ್ನ ಹಿಂಬದಿಯಲ್ಲಿ ಕುಳಿತ ಯುವತಿಯರು ಅಶ್ಲೀಲ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋಗಳು ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ದೃಶ್ಯ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿದ್ದ ನೋಯ್ಡಾ ಪೊಲೀಸರು, ಇದೀಗ ಯುವತಿಯರನ್ನು ಬಂಧಿಸಿದ್ದಾರೆ.
ಪ್ರತ್ಯೇಕ ವಿಡಿಯೋಗಳಲ್ಲಿ ಸ್ಕೂಟರ್ ಓಡಿಸುತ್ತಿದ್ದ ಯುವಕನ ಹಿಂಬದಿ ಕುಳಿತ್ತಿದ್ದ ಇಬ್ಬರು ಹುಡುಗಿಯರು ಅಶ್ಲೀಲವಾಗಿ ತಬ್ಬಿಕೊಂಡು, ಚುಂಬಿಸಿದ್ದರು. ಈ ವಿಡಿಯೋ ಆಧರಿಸಿದ ನೋಯ್ಡಾ ಪೊಲೀಸರು, ಬಣ್ಣದ ಹಬ್ಬದ ನೆಪದಲ್ಲಿ ನೊಯ್ಡಾದ ಬೀದಿಗಳಲ್ಲಿ ಮತ್ತು ದೆಹಲಿ ಮೆಟ್ರೋದಲ್ಲಿ ಅಶ್ಲೀಲತೆಯನ್ನು ಹರಡಿಸಿದ್ದ ಯುವತಿಯರನ್ನು ಇದೀಗ ಬಂಧಿಸಿದ ಅಧಿಕಾರಿಗಳು, ಭಾರಿ ದಂಡ ವಿಧಿಸಿದ್ದಾರೆ.
ಟ್ರಿಪಲ್ ರೈಡಿಂಗ್ ಮತ್ತು ಹೆಲ್ಮೆಟ್ ಇಲ್ಲದೆ ಸ್ಕೂಟರ್ನಲ್ಲಿ ಚಲಿಸಿದ್ದಲ್ಲದೇ, ಅಶ್ಲೀಲ ರೀಲ್ಗಳನ್ನು ಮಾಡಿದ್ದಕ್ಕಾಗಿ ನೋಯ್ಡಾ ಪೊಲೀಸರು ಪ್ರೀತಿ, ವಿನೀತಾ ಮತ್ತು ಪಿಯೂಷ್ಗೆ 33,000 ರೂ. ದಂಡ ವಿಧಿಸಿದ್ದಾರೆ. ಆದರೆ, ಅಧಿಕಾರಿಗಳ ಬಳಿ ಅಳಲು ತೋಡಿಕೊಂಡ ಯುವತಿಯರು ನಮ್ಮ ಬಳಿ ದಂಡ ಪಾವತಿಸಲು ಹಣವಿಲ್ಲ ಎಂದು ಹೇಳಿದ್ದಾರೆ.
ಅಧಿಕಾರಿಗಳು ನೀಡಿದ ದಂಡ ಕಟ್ಟಲು ತಮ್ಮ ಬಳಿ ಹಣವಿಲ್ಲ ಎಂದು ಯುವತಿಯರು ತಿಳಿಸಿದ್ದು, ಸ್ಕೂಟರ್ನಲ್ಲಿ ಇದೇ ಮೊದಲ ಬಾರಿಗೆ ರೀಲ್ಸ್ ಮಾಡಿದ್ದೇವೆ. ಆದರೆ, ಅಧಿಕಾರಿಗಳು ನಮಗೆ ಭಾರಿ ದಂಡ ವಿಧಿಸಿದ್ದಾರೆ. ಇಂತಹ ತಪ್ಪನ್ನು ಮುಂದೆಂದೂ ನಾವು ಮಾಡೋದಿಲ್ಲ. ದಯವಿಟ್ಟು ಕ್ಷಮಿಸಿ ಎಂದು ಕೈಮುಗಿದು ಅಂಗಲಾಚಿ ಬೇಡಿಕೊಂಡರು.
ಪ್ರಕರಣ ದಾಖಲು: ಯುವತಿಯರು ಮತ್ತು ಅವರ ಸಂಗಾತಿಯನ್ನು ಬಂಧಿಸಿದ ಪೊಲೀಸರು, ಸೆಕ್ಷನ್ 279, 290, 294, 336 ಮತ್ತು 337ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಅವರ ಸ್ಕೂಟರ್ನ ಒಟ್ಟು ದಂಡವನ್ನು 80,000 ರೂ.ಗೆ ಏರಿಸಿದ್ದು, ತಮ್ಮ ಸ್ಕೂಟರ್ ಬಳಸಿಕೊಂಡು ಅಸಭ್ಯ ಮತ್ತು ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುವ ಹಲವಾರು ಇತರ ವೀಡಿಯೊಗಳು ಯುವತಿಯರ ಇನ್ಸ್ಟಾಗ್ರಾಂ ಖಾತೆಯಲ್ಲಿ ಲಭ್ಯವಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).