More

    593 ಕೋಟಿ ರೂ. ಒಡೆಯನಾದ್ರು ಸ್ವಂತ ಕಾರಿಲ್ಲ; ಡಿ.ಕೆ. ಸುರೇಶ್​ ಹೆಸರಿನಲ್ಲಿದೆ 150 ಕೋಟಿ ರೂ. ಸಾಲ

    ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಿ.ಕೆ. ಸುರೇಶ್​ ಗುರುವಾರ (ಮಾರ್ಚ್​ 28) ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ರಾಮನಗರದಲ್ಲಿ ಬೃಹತ್​ ರೋಡ್​ ಶೋ ನಡೆಸಿದ ಡಿ.ಕೆ. ಸುರೇಶ್​ಗೆ​ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್​, ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಅನೇಕ ಕಾಂಗ್ರೆಸ್​ ನಾಯಕರು ಸಾಥ್​ ನೀಡಿದರು.

    ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ ಡಿ.ಕೆ. ಸುರೇಶ್ ನಾಮಪತ್ರ ಅಫಿಡವಿಟ್‌ನಲ್ಲಿ ಬರೋಬ್ಬರಿ 593.04 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ 333.86 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿದ್ದರು. 8 ತಿಂಗಳ ಹಿಂದೆ ನಡೆದ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಡಮ್ಮಿ ಅಭ್ಯರ್ಥಿಯಾಗಿ ಕನಕಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಸುರೇಶ್​ ತಮ್ಮ ಹೆಸರಿನಲ್ಲಿ 353.7 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದರು. 

    ಇದೀಗ ಬೆಂಗಳೂರು ಗ್ರಾಮಾಂತರ ಲೋಕಸಭಾದಿಂದ ಕಣಕ್ಕಿಳಿದಿರುವ ಸುರೇಶ್​ ತಮ್ಮ ಹೆಸರಿನಲ್ಲಿ ಒಟ್ಟು 593.04 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ನಾಮಪತ್ರದ ಅಫಿಡೆವಿಟ್​ನಲ್ಲಿ ತಿಳಿಸಿದ್ದಾರೆ. ಇದೊಂದಿಗೆ ಒಂದೇ ವರ್ಷದಲ್ಲಿ ಅವರ ಆಸ್ತಿ ಮೌಲ್ಯ ಬರೋಬ್ಬರಿ 239.34 ಕೋಟಿ ಹೆಚ್ಚಳವಾಗಿದ್ದರೆ, ಕಳೆದ ಲೋಕಸಭಾ ಚುನಾವಣೆ ವೇಳೆ ಘೋಷಿಸಿಕೊಂಡಿರುವುದು ಮತ್ತು ಈಗ ತೋರಿಸಿರುವುದು ನೋಡುವುದಾದರೆ 5 ವರ್ಷಗಳಲ್ಲಿ ಬರೋಬ್ಬರಿ 259.19 ಕೋಟಿ ರೂಪಾಯಿಯಷ್ಟು ಆಸ್ತಿ ಮೌಲ್ಯ ಹೆಚ್ಚಳವಾಗಿದೆ.

    DK Suresh

    ಇದನ್ನೂ ಓದಿ: ಐಪಿಎಲ್​ನಲ್ಲಿ ದಾಖಲೆ ಬರೆದ ಆರ್​ಸಿಬಿ vs ಸಿಎಸ್​ಕೆ ಉದ್ಘಾಟನಾ ಪಂದ್ಯ

    ಡಿ.ಕೆ. ಸುರೇಶ್​ ಸಲ್ಲಿಸಿರುವ ನಾಮಪತ್ರದಲ್ಲಿ  ತಾವೊಬ್ಬ ಕೃಷಿಕ, ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿದ್ದಾರೆ. 019ರಲ್ಲಿ 1.12 ಕೋಟಿ ರೂ. ಆದಾಯ ಗಳಿಸಿರುವುದಾಗಿ ತಿಳಿಸಿದ್ದಾರೆ. ಇದೇ ಆದಾಯ 2021ರಲ್ಲಿ 32.31 ಕೋಟಿ ರೂ.ಗೆ ಏರಿಕೆ ಕಂಡಿದ್ದರೆ, 2023ರಲ್ಲಿ ಅವರು 12.30 ಕೋಟಿ ರೂ. ಆದಾಯ ಗಳಿಸಿದ್ದಾರೆ. ಇನ್ನು ತಮ್ಮ ಆದಾಯದಲ್ಲಿ ಬಾಡಿಗೆ, ವೇತನ, ಬಂಡವಾಳ ಗಳಿಕೆ, ಕೃಷಿ ಆದಾಯ ಹಾಗೂ ಬ್ಯಾಂಕ್‌ ಬಡ್ಡಿ ಸಹಿತ ಇತರ ಆದಾಯ ಸೇರಿರುವುದಾಗಿ ತಿಳಿಸಿದ್ದಾರೆ.

    486.33 ಕೋಟಿ ರೂಪಾಯಿ ಸ್ಥಿರಾಸ್ತಿ ಹಾಗೂ 106.71 ಕೋಟಿ ರೂಪಾಯಿ ಚರಾಸ್ಥಿ, ಬ್ಯಾಂಕ್‌ ಖಾತೆಯಲ್ಲಿ 16.61 ಕೋಟಿ ರೂ., ವಿವಿಧ ಹೂಡಿಕೆಗಳಲ್ಲಿ 2.14 ಕೋಟಿ ರೂ, ಅಣ್ಣ ಡಿಕೆ ಶಿವಕುಮಾರ್‌ಗೆ 30 ಕೋಟಿ ರೂ. ಸಾಲ, ಕ್ವಾರಿ ಗುತ್ತಿಗೆಗೆ ಕೊಟ್ಟಿರುವ ಹಣ ಸೇರಿ ಒಟ್ಟು 86.79 ಕೋಟಿ ರೂ. ಸಾಲ ನೀಡಿರುವುದಾಗಿ ತಿಳಿಸಿದ್ದಾರೆ. ಡಿ.ಕೆ. ಶಿವಕುಮಾರ್​ ಪುತ್ರಿ ಐಶ್ವರ್ಯಾಗೆ 7.94 ಕೋಟಿ ರೂ, ಡಿ.ಕೆ. ಶಿವಕುಮಾರ್ ಪುತ್ರ ಆಕಾಶ್‌ಗೆ 1.06 ಕೋಟಿ ರೂ., ತಾಯಿ ಗೌರಮ್ಮಗೆ 4.75 ಕೋಟಿ ರೂ., ಕುಣಿಗಲ್ ಶಾಸಕ ರಂಗನಾಥ್ ಪತ್ನಿ ಡಾ. ಸುಮಾ ರಂಗನಾಥ್‌ಗೆ 30 ಲಕ್ಷ ರೂ. ಸಾಲ ನೀಡಿರುವುದಾಗಿ ಉಮೇದುವಾರಿಕೆಯಲ್ಲಿ ಘೋಷಿಸಿದ್ದಾರೆ.

    DK Suresh

    ಇದನ್ನೂ ಓದಿ: ಬೆಂಗಳೂರು ಜಲಕ್ಷಾಮ; ಕನ್ನಡದಲ್ಲಿಯೇ ಟ್ವೀಟ್​ ಮಾಡಿ ಪರಿಹಾರ ತಿಳಿಸಿದ ಮೆಗಾಸ್ಟಾರ್​

    4.8 ಕೆಜಿ ಬೆಳ್ಳಿ, 1.26 ಕೆಜಿ ಚಿನ್ನವೂ ಅವರ ಬಳಿ ಇದ್ದು, ಇದರ ಮೌಲ್ಯ 23.45 ಲಕ್ಷ ರೂ. ಆಗಿದೆ. 73.58 ಲಕ್ಷ ರೂ. ಮೊತ್ತದ ಪೀಠೋಪಕರಣಗಳೂ ಮನೆಯಲ್ಲಿವೆ. ಡಿ.ಕೆ. ಸುರೇಶ್ ಹೆಸರಿನಲ್ಲಿ ಒಟ್ಟು150 ಕೋಟಿ ರೂಪಾಯಿ ಸಾಲ ಇದೆ ಎಂದು ಅಫಿಡವಿಟ್‌ನಲ್ಲಿ ತೋರಿಸಲಾಗಿದೆ. ಬ್ಯಾಂಕ್‌ನಿಂದ ಅವರು 20.04 ಕೋಟಿ ರೂ. ಸಾಲ ಪಡೆದಿದ್ದಾರೆ. ಶೋಭಾ ಡೆವಲಪರ್ಸ್‌ಗೆ 99.19 ಕೋಟಿ ರೂ., ಸಿಎಂಆರ್‌ ಟ್ರಸ್ಟ್‌ಗೆ 15 ಕೋಟಿ ರೂ. ಮತ್ತು ಬೆಂಗಳೂರಿನಲ್ಲಿರುವ ಲುಲು ಮಾಲ್‌ಗೆ 3 ಕೋಟಿ ರೂ. ಸಾಲ ನೀಡಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.

    ಇನ್ನು ಡಿಕೆ ಸುರೇಶ್‌ ಬಳಿ ಯಾವುದೇ ವಾಹನಗಳಿಲ್ಲ. ತಮ್ಮ ಮೇಲೆ ಮೂರು ಕ್ರಿಮಿನಲ್‌ ಪ್ರಕರಣಗಳಿದ್ದು, ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡಿದ್ದಾರೆ. ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ವಿಚಾರಣೆಯಲ್ಲಿದೆ ಎಂದು ಮಾಹಿತಿ ನೀಡಿರುವ ಸುರೇಶ್, ಪತ್ನಿ ಕಾಲಂ ಮುಂದೆ ವಿಚ್ಛೇದನವಾಗಿದೆ ಎಂದು ನಮೂದಿಸಿದ್ದು, ಹೀಗಾಗಿ ಸಂಬಂಧಿಸಿಲ್ಲವೆಂದು ಉಲ್ಲೇಖಿಸಿದ್ದಾರೆ. ಇನ್ನು ಓರ್ವ ಪುತ್ರನಿದ್ದು, ಆತನ ಹೆಸರು ಕೆಶಿನ್ ಸುರೇಶ್ ಎಂದು ನಾಮಪತ್ರದ ಅಫಿಡೇವಿಟ್​ನಲ್ಲಿ ನಮೂದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts