More

    ರಸ್ತೆ ಕಾಮಗಾರಿಗೆ ಗ್ರಾಪಂ ಅಧ್ಯಕ್ಷರಿಂದಲೇ ಅಡ್ಡಿ?

    ಕುಷ್ಟಗಿ: ತಾಲೂಕಿನ ಬಿಜಕಲ್ ಗ್ರಾಪಂ ವ್ಯಾಪ್ತಿಯ ಕೆ.ಗೋನಾಳ ಗ್ರಾಮದ ಅಲೆಮಾರಿ, ಅರೆಅಲೆಮಾರಿ ಸಮುದಾಯ ವಾಸಿಸುವ ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸಿಸಿ ಕಾಮಗಾರಿಗೆ ಅಲ್ಲಿನ ಗ್ರಾಪಂ ಅಧ್ಯಕ್ಷರೇ ಅಡ್ಡಿಪಡಿಸುತ್ತಿದ್ದಾರೆಂದು ಅಲೆಮಾರಿ, ಅರೆಅಲೆಮಾರಿ ಸಮುದಾಯದವರು ದೂರಿದ್ದಾರೆ.

    ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಕಾಲನಿಗೆ ಸಂಪರ್ಕ ರಸ್ತೆ ಇಲ್ಲದಂತಾಗಿದೆ. ಓಡಾಡುವ ಜಾಗದಲ್ಲಿ ಗ್ರಾಮದ ದ್ರವತ್ಯಾಜ್ಯ ಹಾಗೂ ಮಳೆ ನೀರು ಸಂಗ್ರಹಗೊಂಡು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸದ್ಯ ನರೇಗಾ ಯೋಜನೆಯಡಿ ಸಿಸಿ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ.

    ಗ್ರಾಪಂ ಅಧ್ಯಕ್ಷರಾಗಿರುವ ಗ್ರಾಮದ ಗೌಡಪ್ಪಗೌಡ ಪೊಲೀಸ್ ಪಾಟೀಲ್ ಸಿಸಿ ರಸ್ತೆಗೆ ಮಂಜೂರಾಗಿರುವ ಜಾಗ ತಮಗೆ ಸೇರಿದ್ದು ಎಂದು ಹೇಳಿ ಕಾಮಗಾರಿ ನಡೆಸದಂತೆ ತಕರಾರು ಮಾಡುತ್ತಿದ್ದಾರೆ. ಹಿಂದಿನಿಂದಲೂ ಕಾಲನಿಯ ನಿವಾಸಿಗಳು ಇದೇ ರಸ್ತೆಯಲ್ಲಿ ಓಡಾಡುತ್ತ ಬಂದಿದ್ದೇವೆ. ಮಂಜೂರಾದ ಕಾಮಗಾರಿ ನಡೆಸದೆ ಇದ್ದಲ್ಲಿ ನಿವಾಸಿಗಳೆಲ್ಲ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ.

    ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು-ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಕಂದಕೂರು, ಗೌರವ ಅಧ್ಯಕ್ಷ ಹನುಮಂತಪ್ಪ ನಿಡಶೇಸಿ, ಉಪಾಧ್ಯಕ್ಷ ಚಿದಾನಂದಪ್ಪ ಗೋನಾಳ, ಗ್ರಾಮದ ಹನುಮೇಶ ದಾಸರ್, ದಾವಲ್‌ಸಾಬ್ ನದಾಫ್ ಇತರರು ತಿಳಿಸಿದ್ದಾರೆ.

    ಕೆ.ಗೋನಾಳ ಗ್ರಾಮದ ಅಲೆಮಾರಿ, ಅರೆಅಲೆಮಾರಿ ಸಮುದಾಯ ವಾಸಿಸುವ ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ನರೇಗಾ ಯೋಜನೆಯಡಿ ಸಿಸಿ ಕಾಮಗಾರಿ ಮಂಜೂರಾಗಿದೆ. ಅಲ್ಲಿನ ನಿವಾಸಿಗಳು 10ಅಡಿ ಅಗಲದ ರಸ್ತೆ ನಿರ್ಮಿಸುವಂತೆ ಒತ್ತಾಯಿಸುತ್ತಿದ್ದಾರೆ. ರಸ್ತೆಯ ಅಕ್ಕ ಪಕ್ಕ ನಿವೇಶನಗಳಿವೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ಸಂಬಂಧ ಕಾಲನಿಯ ನಿವಾಸಿಗಳ ಮನವೊಲಿಸಿ ಕಾಮಗಾರಿ ಆರಂಭಿಸಲಾಗುವುದು.
    ಆನಂದರಾವ್ ಕುಲಕರ್ಣಿ ಬಿಜಕಲ್ ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts