

ರಾಯಚೂರು: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು (NS Boseraju), ವಿಪಕ್ಷ ನಾಯಕ ಆರ್.ಅಶೋಕ್ (R Ashok) ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ (HDK) ಹುಚ್ಚು ಹಿಡಿದಿದೆ. ಬಿಜೆಪಿ ಜೆಡಿಎಸ್ ಪಕ್ಷದವರು ಹುಚ್ಚರಂತೆ ಆಡುತ್ತಿದ್ದಾರೆ ಎಂದಿದ್ದಾರೆ.
ಇಂದು ರಾಯಚೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮುಡಾ ಹಗರಣದ ವಿರುದ್ಧ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಬಿಜೆಪಿಗೆ ಕೆಲಸವಿಲ್ಲ. ಅಭಿವೃದ್ಧಿ ವಿಚಾರ ಅವರಿಗೆ ಬೇಕಿಲ್ಲ. ಸರ್ಕಾರವನ್ನು ಅಭದ್ರಗೊಳಿಸುವುದಷ್ಟೆ ಬಿಜೆಪಿ-ಜೆಡಿಎಸ್ ಕೆಲಸವಾಗಿಬಿಟ್ಟಿದೆ. ಆರ್. ಅಶೋಕ, ಯಡಿಯೂರಪ್ಪ ಅವರ ಮೇಲೂ ಸಾಕಷ್ಟು ಆರೋಪಗಳಿವೆ. ಇವುಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಉತ್ತರಿಸಲಿ" ಎಂದರು.
"ಸಿದ್ದರಾಮಯ್ಯ ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಪಕ್ಷದಲ್ಲಿ ಯಾರೂ ಕೂಡ ಸಿಎಂ ಆಕಾಂಕ್ಷಿಯಾಗಿಲ್ಲ. ಮೊದಲು ಬಿಜೆಪಿ, ಜೆಡಿಎಸ್ನಲ್ಲಿರುವ ಹಲವು ಹಗರಣಗಳಲ್ಲಿ ಯಾರಾರ ಮೇಲೆ ಎಫ್ಐಆರ್ ಆಗಿದೆ. ಅವರು ಮೊದಲು ಪಕ್ಷದಿಂದ ಹೊರ ಉಳಿಯಲಿ" ಎಂದು ಕಮಲ-ದಳ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.