

| ಶ್ರವಣ್ಕುಮಾರ್ ನಾಳ, ಮಂಗಳೂರು
ಹಿಂದಿನ ಸರ್ಕಾರದಲ್ಲಿ ಸ್ಥಾಪನೆಗೊಳ್ಳದ ಎನ್ಆರ್ಐ ಫೋರಂ ಕಾಂಗ್ರೆಸ್ ಆಡಳಿತಾವಧಿಯಲ್ಲೂ ಜೀವ ಪಡೆದುಕೊಂಡಿಲ್ಲ. ಹೀಗೆ ನಿಷ್ಕ್ರಿಯಗೊಂಡ ರಾಜ್ಯದ ಎನ್ಆರ್ಐ ಫೋರಂನ ಅಗತ್ಯತೆ ಇದೀಗ ಇಸ್ರೇಲ್ ಸಂಘರ್ಷ ಸಮಯದಲ್ಲಿ ಕಂಡು ಬರುತ್ತಿದ್ದು, ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರ ಉದ್ದೇಶಗಳಿಗೆ ಅಲ್ಲಿಗೆ ತೆರಳಿರುವ ಮತ್ತು ಅಲ್ಲಿ ವಾಸವಿರುವ ರಾಜ್ಯದ ನಾಗರಿಕರು ರಕ್ಷಣೆಗೆ ನೇರವಾಗಿ ಕೇಂದ್ರ ಸರ್ಕಾರದ ಕದ ತಟ್ಟುವಂತಾಗಿದೆ.
ವಿದೇಶಿ ನೆಲದಲ್ಲಿ ತೊಂದರೆಗೊಳಗಾಗುವ ಕರ್ನಾಟಕದ ಜನರಿಗೆ ಕಷ್ಟ ಹೇಳಿಕೊಳ್ಳಲು, ರಕ್ಷಣೆಗೆ ಇದ್ದ ಏಕೈಕ ವೇದಿಕೆ ಕರ್ನಾಟಕ ಎನ್ಆರ್ಐ ಫೋರಂ. 2008-09ನೇ ಸಾಲಿನ ಬಜೆಟ್ನಲ್ಲಿ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಫೋರಂ ರಚನೆ ಯೋಜನೆ ಪ್ರಕಟಿಸಿದ್ದರು. ಕರಾವಳಿಯವರೇ ಆದ
ಕ್ಯಾ.ಗಣೇಶ್ ಕಾರ್ಣಿಕ್ ವೇದಿಕೆಯ ಪ್ರಥಮ ಉಪಾಧ್ಯಕ್ಷರಾಗಿದ್ದರು. ಬಳಿಕ ಆರತಿ ಕೃಷ್ಣ, ವಿ.ಸಿ.ಪ್ರಕಾಶ್ ಉಪಾಧ್ಯಕ್ಷರಾದರು. ಪ್ರಸ್ತುತ ಸಮಿತಿಯ ಅಧಿಕೃತ ವೆಬ್ಸೈಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷರು ಎಂದು ತೋರಿಸುತ್ತಿದೆಯಾದರೂ, ಉಪಾಧ್ಯಕ್ಷರಿಲ್ಲದೆ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ.
1,000 ಕೋಟಿ ರೂ. ಆವರ್ತ ನಿಧಿ ರಚನೆ?: ಎನ್ಆರ್ಐ ಫೋರಂ ಪೂರ್ಣ ನಿಷ್ಕ್ರಿಯವಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅನಿವಾಸಿ ಭಾರತೀಯರಿಗೆ ಕೇರಳ ಮಾದರಿಯ ಪ್ರತ್ಯೇಕ ಸಚಿವಾಲಯ ಆರಂಭಿಸುವ ಬಗ್ಗೆ ಕಾಂಗ್ರೆಸ್ನ ಎನ್ಆರ್ಐ ವಿಭಾಗ ಕಾರ್ಯದರ್ಶಿ ಡಾ.ಆರತಿ ಕೃಷ್ಣ ಈ ಹಿಂದೆ ಘೊಷಿಸಿದ್ದರು. ಆದರೆ ಆ ಘೊಷಣೆ ಠುಸ್ ಆಗಿದೆ. ಎನ್ಆರ್ಐ ವಿಭಾಗ ಬಲಪಡಿಸಲು, ಕಾರ್ಡ್ ವಿತರಿಸಲು ಮತ್ತು ಹೊರದೇಶದ ಕನ್ನಡಿಗರ ಸಂಪೂರ್ಣ ಡೇಟಾ ದಾಖಲಿಸಲು ಪ್ರತ್ಯೇಕ ವ್ಯವಸ್ಥೆ ಈ ಯೋಜನೆಯಲ್ಲಿ ಬರಲಿದ್ದು, ಇದಕ್ಕಾಗಿ 1,000 ಕೋಟಿ ರೂ. ಆವರ್ತ ನಿಧಿ ರಚಿಸುವ ಉದ್ದೇಶ ಹೊಂದಲಾಗಿದೆ ಎಂದು ಘೊಷಿಸಲಾಗಿತ್ತು. ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಲ್ಲೂ ಇದನ್ನು ದಾಖಲಿಸಲಾಗಿತ್ತು. ಆದರೆ ಅವೆಲ್ಲವೂ ಈಗ ಮರೆತೇ ಹೋಗಿದೆ.
ರಾಜ್ಯ ಸರ್ಕಾರಕ್ಕೆ ಎನ್ಆರ್ಐಗಳ ಒತ್ತಡ ಸಹಿತ ಎಲ್ಲ ಪ್ರಯತ್ನಗಳ ಬಳಿಕವೂ ರಾಜ್ಯದ ಅನಿವಾಸಿ ಭಾರತೀಯ ಸಮಿತಿ (ಎನ್ಆರ್ಐ ಫೋರಂ)ಯನ್ನು ಸಜೀವಗೊಳಿಸುವುದು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಎನ್ಆರ್ಐ ಫೋರಂ ಸಕ್ರಿಯವಾಗಿರುತ್ತಿದ್ದರೆ ಇಸ್ರೇಲ್ನಲ್ಲಿರುವ ಕನ್ನಡಿಗರ ಇಂಚಿಂಚೂ ಮಾಹಿತಿ ಲಭಿಸಿ ಅವರ ಸುರಕ್ಷತೆಯನ್ನು ವೇಗವಾಗಿ ಖಾತರಿಪಡಿಸಲಾಗುತ್ತಿತ್ತು. | ಕ್ಯಾ.ಗಣೇಶ್ ಕಾರ್ಣಿಕ್, ಎನ್ಆರ್ಐ ಫೋರಂ ಪ್ರಥಮ ಉಪಾಧ್ಯಕ್ಷ
ರಾಯಭಾರ ಕಚೇರಿಯಿಂದಲೇ ಸಹಾಯ: ಎನ್ಆರ್ಐ ಫೋರಂ ಬಳಿ ಇಸ್ರೇಲ್ನಲ್ಲಿ ನೆಲೆಸಿರುವ ರಾಜ್ಯದ ಜನರ ಮಾಹಿತಿಯೂ ಸಮರ್ಪಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ರಾಯಭಾರ ಕಚೇರಿ ಮೂಲಕ ಇಸ್ರೇಲ್ನಲ್ಲಿರುವ ಕನ್ನಡಿಗರ ರಕ್ಷಣೆಗೆ ಸಮಗ್ರ ಯೋಜನೆ ರೂಪಿಸಿದ್ದು, ಇದರ ಮೊದಲ ಹಂತವಾಗಿ ಇಸ್ರೇಲ್ನಲ್ಲಿರುವವರ ಮಾಹಿತಿಯನ್ನು ಜಿಲ್ಲಾ ಹಾಗೂ ರಾಜ್ಯ ಸರ್ಕಾರದ ತುರ್ತು ಸಂಪರ್ಕ ಸಂಖ್ಯೆಗೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಲಾಗಿತ್ತು. 10 ಸಾವಿರಕ್ಕೂ ಅಧಿಕ ಕನ್ನಡಿಗರು ಇಸ್ರೇಲ್ನಲ್ಲಿದ್ದು, ಸದ್ಯ ಸುರಕ್ಷಿತರಾಗಿದ್ದಾರೆ ಎಂದು ಕಂದಾಯ ಹಾಗೂ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಮಾಹಿತಿ ಪಡೆದು ರಾಯಭಾರ ಕಚೇರಿಗೆ ನೀಡಿದ್ದಾರೆ.
ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಯ ಭರವಸೆಯನ್ನು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೊಷಿಸಿತ್ತು. ಇತ್ತೀಚೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಎನ್ಆರ್ಐಗಳು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. | ಮಂಜೇಶ್ವರ ಮೋಹನ್ದಾಸ್ ಕಾಮತ್, ಎನ್ಆರ್ಐ
ಹೊಸಪೇಟೆ: ಯುದ್ಧ ಪೀಡಿತ ಪ್ಯಾಲಿಸ್ತೇನ್ಗೆ ಬೆಂಬಲ ಸೂಚಿಸಿ ವಾಟ್ಸ್ ಆಪ್ ಸ್ಟೇಟಸ್ ಹಾಕಿಕೊಂಡಿದ್ದ ನಗರದ ಸಿದ್ಧಲಿಂಗಪ್ಪ ಚೌಕಿ ನಿವಾಸಿ, ಮೈನಾರಿಟಿ ಕಚೇರಿ ಅಟೆಂಡರ್ ಆಲಂ ಭಾಷಾ (20) ಎಂಬಾತನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಮುಸ್ಲಿಮರು ಹೆಚ್ಚಿರುವ ಎಸ್.ಆರ್.ನಗರ, ಆಜಾದ್ ನಗರ, ಸಿದ್ದಲಿಂಗಪ್ಪ ಚೌಕಿಗಳ ಪ್ರದೇಶದ ಜನರ ವಾಟ್ಸ್ಆಪ್ಗಳಲ್ಲಿ ದೇಶದ್ರೋಹದ ವಿಡಿಯೋ ಹರಿದಾಡುತ್ತಿರುವ ಬಗ್ಗೆ ಸುಳಿವಿನ ಆಧಾರದ ಮೇಲೆ ಆಲಂ ಭಾಷಾರನ್ನು ಬಂಧಿಸಲಾಗಿದೆ.