ಮೋದಿ ಗೆದ್ದೇ ಗೆಲ್ಲುತ್ತಾರೆಂದು ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ಇನ್ನಿಲ್ಲ; ಸಾವಿನಲ್ಲೂ ಗೊಂದಲ...!

Jyotishi 29 May 20
Published on

ನವದೆಹಲಿ: ಖ್ಯಾತ ಜ್ಯೋತಿಷಿ ಬೇಜಾನ್​ ದಾರೂವಾಲಾ ಅವರು ಇಂದು ಗುಜರಾತ್​ನ ಅಹ್ಮದಾಬಾದ್​ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಬೇಜಾನ್​ ದಾರೂವಾಲಾ ಅವರಲ್ಲಿ ಕೊವಿಡ್​-19 ದೃಢಪಟ್ಟಿತ್ತು. ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅಹ್ಮದಾಬಾದ್​ ಮುನ್ಸಿಪಲ್​ ಕಾರ್ಪೋರೇಶನ್​ ದಾಖಲಿಸಿದೆ. ಹಾಗೇ ಸಾಮಾಜಿಕ ಜಾಲತಾಣಗಳಲ್ಲೂ ಇದೇ ಸುದ್ದಿ ಹರಿದಾಡುತ್ತಿದೆ. ಆದರೆ ಅವರ ಕುಟುಂಬದವರು, ಬೇಜಾನ್​ ಅವರಿಗೆ ಕರೊನಾ ಇರಲಿಲ್ಲ. ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ. ಆದರೆ ಅವರು ಮೃತಪಟ್ಟಿದ್ದಕ್ಕೆ ನಿಜವಾದ ಕಾರಣ ಏನು ಎಂಬುದು ಇನ್ನೂ ಗೊಂದಲಮಯವಾಗಿಯೇ ಉಳಿದಿದೆ.

ದಾರೂವಾಲಾ ಅವರ ಶ್ವಾಸಕೋಶದಲ್ಲಿ ದ್ರವ ತುಂಬಿಕೊಂಡಿತ್ತು. ಇದರಿಂದಾಗಿ ಅವರಿಗೆ ಉಸಿರಾಟದಲ್ಲಿ ತೀವ್ರ ಏರುಪೇರಾಗಿತ್ತು. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸಲಿಲ್ಲ ಎನ್ನಲಾಗಿದೆ.

ಕಳೆದ ಸಾವಿರ ವರ್ಷಗಳಲ್ಲಿ ಅತ್ಯಂತ ಮನ್ನಣೆ ಗಳಿಸಿದ್ದ 100 ಮಹಾನ್ ಜ್ಯೋತಿಷಿಗಳಲ್ಲಿ ಬೇಜಾನ್​ ದಾರೂವಾಲಾ ಕೂಡ ಓರ್ವರು ಎಂದು ಮಿಲೆನಿಯಂ ಬುಕ್ ಆಫ್ ಪ್ರೊಫೆಸಿಯಲ್ಲಿ ಉಲ್ಲೇಖವಾಗಿದೆ ಎಂದು ಬೇಜಾನ್​ ಅವರ ಅಧಿಕೃತ ವೆಬ್​ಸೈಟ್​ನಲ್ಲಿ ದಾಖಲಾಗಿದೆ.

ಇವರು ಮೊದಲು ಅಹ್ಮದಾಬಾದ್​ನಲ್ಲಿ ಇಂಗ್ಲಿಷ್ ಪ್ರೊಫೆಸರ್​ ಆಗಿದ್ದರು. ನಂತರ ಜ್ಯೋತಿಷ್ಯವನ್ನೇ ವೃತ್ತಿಯನ್ನಾಗಿ ತೆಗೆದುಕೊಂಡರು. ಅಲ್ಲದೆ ಕೆಲವು ಪ್ರಮುಖ ಪತ್ರಿಕೆಗಳಲ್ಲಿ ಅಂಕಣಕಾರರೂ ಆಗಿದ್ದರು.

ಭಗವಾನ್​ ಗಣೇಶನ ಅನುಯಾಯಿ ಆಗಿದ್ದ ಬೇಜಾನ್​ ದಾರೂವಾಲಾ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆಯೂ ಭವಿಷ್ಯ ನುಡಿದಿದ್ದರು. 2014ರ ಲೋಕಸಭಾ ಚುನಾವಣೆ ವೇಳೆ ಮೋದಿ ಗೆಲುವಿನ ಬಗ್ಗೆ ತಮ್ಮ ಅಧಿಕೃತ ವೆಬ್​ಸೈಟ್​ನಲ್ಲಿ ಬರೆದಿದ್ದ ಅವರು, ನರೇಂದ್ರ ಮೋದಿಯವರ ಗ್ರಹಗತಿಯ ಪ್ರಕಾರ ಚಂದ್ರ ಮತ್ತು ಮಂಗಳ ಒಟ್ಟಿಗಿದ್ದಾರೆ. ಚಂದ್ರನೆಂದರೆ ಜನಪ್ರಿಯತೆ, ಮಂಗಳ ಶಕ್ತಿ. ಇವೆರಡೂ ಒಟ್ಟಿಗಿರುವ ಕಾರಣ ಚುನಾವಣೆಯಲ್ಲಿ ಮೋದಿ ಗೆಲ್ಲುತ್ತಾರೆ. ಆಟದಲ್ಲಿ ಜಯ ಅವರದ್ದೇ ಎಂದು ಹೇಳಿದ್ದರು. ಅದು ನಿಜವಾಗಿತ್ತು.

ಬೇಜಾನ್​ ಅವರು ನುಡಿದಿದ್ದ ಭವಿಷ್ಯ ಬಹುತೇಕ ಎಲ್ಲವೂ ನಿಜವಾಗಿದ್ದವು. ಅವರ ಖ್ಯಾತಿಯೂ ಹೆಚ್ಚಾಗುತ್ತ ಹೋಗಿತ್ತು. ಗುಜರಾತ್​ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಬೇಜಾನ್​ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net