ಒಟಿಟಿಯಲ್ಲಿ ಅಶ್ಲೀಲ ವಿಡಿಯೋ ಪ್ರಸಾರ... ಕೇಂದ್ರ ಸರ್ಕಾರಕ್ಕೆ ನೀವೇ ಏನಾದ್ರೂ ಮಾಡಿ ಎಂದ ಸುಪ್ರೀಂಕೋರ್ಟ್! OTT ​

OTT
Published on

OTT : ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುವ ಅಶ್ಲೀಲ ಕಂಟೆಂಟ್​ಗಳ ಕುರಿತು ಕೇಂದ್ರವು ಈಗಾಗಲೇ ಹಲವಾರು ಬಾರಿ ಎಚ್ಚರಿಕೆಗಳನ್ನು ನೀಡಿದ್ದರೂ ಇನ್ನೂ ಅಶ್ಲೀಲ ಕಂಟೆಂಟ್​ಗಳ ಸುಲಭವಾಗಿ ಲಭ್ಯವಾಗುತ್ತಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲ ಒಟಿಟಿ ಪ್ಲಾಟ್‌ಫಾರ್ಮ್​ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಂಟೆಂಟ್​ಗಳನ್ನು ಪ್ರಸಾರ ಮಾಡುವುದನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ಇಂದು (ಏಪ್ರಿಲ್​ 28) ಕೇಂದ್ರ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಅಶ್ಲೀಲ ಕಂಟೆಂಟ್​ಗಳನ್ನು ನಿಯಂತ್ರಿಸುವ ಕ್ರಮಗಳನ್ನು ಜಾರಿಗೆ ತರುವುದು ಕಾರ್ಯಾಂಗ ಮತ್ತು ಶಾಸಕಾಂಗದ ವ್ಯಾಪ್ತಿಗೆ ಒಳಪಡುತ್ತದೆ ಎಂದು ಒತ್ತಿ ಹೇಳಿತು. ಈಗಾಗಲೇ ನಾವು ಶಾಸಕಾಂಗ ಮತ್ತು ಕಾರ್ಯಾಂಗ ಅಧಿಕಾರವನ್ನು ಅತಿಕ್ರಮಿಸುತ್ತಿದ್ದೇವೆ ಎಂಬ ಆರೋಪಗಳಿವೆ. ಇದು ನಮ್ಮ ಕೆಲಸವಲ್ಲ, ನೀವೇ ಏನಾದರೂ ಮಾಡಿ ಎಂದು ನ್ಯಾಯಮೂರ್ತಿ ಗವಾಯಿ ಅವರು ಕೇಂದ್ರ ಸರ್ಕಾರಕ್ಕೆ ಹೇಳಿದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರ, ಒಟಿಟಿಯಲ್ಲಿ ಅಶ್ಲೀಲ ವಿಡಿಯೋಗಳ ಪ್ರಸಾರದ ವಿರುದ್ಧ ಈಗಾಗಲೇ ಕೆಲವು ನಿಯಮಗಳು ಅಸ್ತಿತ್ವದಲ್ಲಿವೆ ಮತ್ತು ಇನ್ನೂ ಕೆಲವು ನಿರ್ಬಂಧಗಳನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಆನ್‌ಲೈನ್‌ನಲ್ಲಿ ಅಶ್ಲೀಲ ಮತ್ತು ಲೈಂಗಿಕ ಪ್ರಚೋದನೆಯಂತಹ ವಿಷಯಗಳ ಪ್ರದರ್ಶನವನ್ನು ನಿಯಂತ್ರಿಸುವ ಮತ್ತು ತಡೆಗಟ್ಟುವ ಗುರಿ ಹೊಂದಿರುವ ರಾಷ್ಟ್ರೀಯ ವಿಷಯ ನಿಯಂತ್ರಣ ಪ್ರಾಧಿಕಾರವನ್ನು ಸ್ಥಾಪಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದೆ. ಇಂದು ಇದರ ವಿಚಾರಣೆ ನಡೆಸಿದ ಬಳಿಕ ಉನ್ನತ ನ್ಯಾಯಾಲಯ ಸುಪ್ರೀಂಕೋರ್ಟ್​ಗೆ ನೋಟಿಸ್​ ನೀಡಿ, ಕ್ರಮಕ್ಕೆ ಸೂಚಿಸಿದೆ.

ಅಂದಹಾಗೆ, ಕಟ್ಟುನಿಟ್ಟಾದ ನಿಯಮಗಳು ಇಲ್ಲದೇ ಇರುವುದರಿಂದ ಆನ್‌ಲೈನ್‌ನಲ್ಲಿ ಅಶ್ಲೀಲ ಕಂಟೆಂಟ್​ಗಳ ವ್ಯಾಪಕ ಹಂಚಿಕೆಗೆ ಕಾರಣವಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಾದಿಸಿದೆ. ಕೆಲವು ಒಟಿಟಿ ಪ್ಲಾಟ್‌ಫಾರ್ಮ್‌ಗಳು 'ಮಕ್ಕಳ ಅಶ್ಲೀಲತೆ'ಗೆ ಸಮನಾಗಿರುವ ವಿಷಯವನ್ನು ಪ್ರಸಾರ ಮಾಡುತ್ತಿವೆ ಎಂದು ಪಿಐಎಲ್​ನಲ್ಲಿ ಆರೋಪಿಸಲಾಗಿದೆ.

ಈ ಹಿಂದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ವಯಸ್ಸಿನ ಆಧಾರದ ಮೇಲೆ ವಿಷಯದ ವರ್ಗೀಕರಣವನ್ನು ಕಠಿಣಗೊಳಿಸುವಂತೆ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳನ್ನು ಅನುಸರಿಸುವಂತೆ ಸಲಹೆ ನೀಡಿತ್ತು. ಆದಾಗ್ಯೂ, ಇಂತಹ ವಿಷಯಗಳಿಗೆ ಪೂರ್ಣ ಪ್ರಮಾಣದ ಕಡಿವಾಣ ಬಿದ್ದಿಲ್ಲ. ಇದೀಗ, ಪಿಐಎಲ್​ ಅನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಕೇಂದ್ರಕ್ಕೆ ನೋಟಿಸ್​ ನೀಡಿದ್ದು, ಕಠಿಣ ಕ್ರಮಕ್ಕೆ ಸೂಚನೆ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net