ಮೊದಲು ಅದು ಕೊಡಿ... ಪಹಲ್ಗಾಮ್ ದಾಳಿ ಬಗ್ಗೆ ಭಾರತೀಯರ ರಕ್ತ ಕುದಿಯುವಂಥ ಹೇಳಿಕೆ ನೀಡಿದ ಅಫ್ರಿದಿ! Shahid Afridi

Shahid Afridi
Published on

Shahid Afridi : ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಭಾರತೀಯರು ಪ್ರಾಣ ಕಳೆದುಕೊಂಡರು. ಈ ದಾಳಿಯ ಹಿಂದೆ ಪಾಕ್​ ಕೈವಾಡ ಇರುವ ಹಿನ್ನೆಲೆಯಲ್ಲಿ ಪಾಕ್​ ವಿರುದ್ಧ ಭಾರತೀಯರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಇದೇ ಸಮಯದಲ್ಲಿ, ಪಾಕ್​ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ನೀಡಿರುವ ಹೇಳಿಕೆ, ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಅಫ್ರಿದಿ ಅವರು ಪಹಲ್ಗಾಮ್ ದಾಳಿಯ ಬಗ್ಗೆ ಭಾರತೀಯರ ರಕ್ತ ಕುದಿಯುವಂತಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅಮಾನವೀಯ ಭಯೋತ್ಪಾದಕ ದಾಳಿಯನ್ನು ಖಂಡಿಸುವ ಬದಲು, ಈ ದಾಳಿಗೆ ಪುರಾವೆಗಳನ್ನು ಒದಗಿಸುವಂತೆ ಅಫ್ರಿದಿ ಭಾರತವನ್ನು ಕೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಭಯೋತ್ಪಾದಕರ ಹೀನಾಯ ಕೃತ್ಯವನ್ನು ದೂಷಿಸುವ ಬದಲು, ನಾಚಿಕೆಯಿಲ್ಲದೆ, ಮಾನವೀಯತೆಯನ್ನು ಮರೆತು ಭಾರತವನ್ನು ಟೀಕಿಸಿದ್ದಾರೆ.

ಪಹಲ್ಗಾಮ್​ ಮೇಲಿನ ದಾಳಿಯಲ್ಲಿ ಪಾಕಿಸ್ತಾನದ​ ಕೈವಾಡ ಇದೆ ಎಂದಿರುವ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿದ್ದು, ಯಾವುದೇ ತನಿಖೆ ನಡೆಸದೆ ಆತುರದಿಂದ ಪಾಕಿಸ್ತಾನವನ್ನು ದೂಷಿಸುವುದು ಸರಿಯಲ್ಲ ಎಂದು ಅಫ್ರಿದಿ ಹೇಳಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ರಾಜತಾಂತ್ರಿಕತೆಯಲ್ಲಿ ನನಗೆ ಆಳವಾದ ನಂಬಿಕೆ ಇದೆ. ಈ ವಿಷಯದಲ್ಲಿ ಯಾವುದೇ ರಾಜಕೀಯ ಇರಬಾರದು. ನಾವು ನೆರೆಯ ರಾಷ್ಟ್ರಗಳಾಗಿದ್ದು, ಪರಸ್ಪರ ಕಾಳಜಿ ವಹಿಸಬೇಕು. ಆದರೆ, ಈ ಘಟನೆ ನಡೆದ ತಕ್ಷಣ ಭಾರತೀಯರು ಪಾಕಿಸ್ತಾನವನ್ನು ದೂಷಿಸುತ್ತಿದ್ದಾರೆ. ಆದರೆ, ದೂಷಿಸುವ ಮುನ್ನ ಮೊದಲು ಕನಿಷ್ಠ ಪುರಾವೆಗಳನ್ನಾದರೂ ನೀಡಬೇಕಿತ್ತು ಎಂದಿದ್ದಾರೆ.

ಇದೀಗ ಅಫ್ರಿದಿ ಹೇಳಿಕೆಯಿಂದ ಭಾರತೀಯರು ಆಕ್ರೋಶಗೊಂಡಿದ್ದಾರೆ. ಭಯೋತ್ಪಾದನೆ ಕೃತ್ಯವನ್ನು ಖಂಡಿಸುವ ಬದಲು ಸಮರ್ಥಿಸಿಕೊಳ್ಳುತ್ತಿರುವ ನಿಮಗೆ ಮಾನವೀಯತೆ ಇದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ, ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಭಾರತೀಯರು ಒತ್ತಾಯಿಸುತ್ತಿದ್ದಾರೆ.

ಅಂದಹಾಗೆ, ಪಹಲ್ಗಾಮ್ ಘಟನೆಯ ನಂತರ ಭಾರತ, ಪಾಕ್​ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ರಾಜತಾಂತ್ರಿಕ ದಾಳಿಯನ್ನು ಪ್ರಾರಂಭಿಸಿದೆ. ಅಟ್ಟಾರಿ ಗಡಿಯನ್ನು ಮುಚ್ಚಲು ಆದೇಶಗಳನ್ನು ಸಹ ಹೊರಡಿಸಿದೆ. ಐಸಿಸಿ ಈವೆಂಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡದಿರಲು ಬಿಸಿಸಿಐ ಕೂಡ ನಿರ್ಧರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net